Vaping 
ವೆಬ್‌ಡೆಸ್ಕ್

ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರ! ಇಲ್ಲಿ ಒಂದು ಸಣ್ಣ ‘ವೇಪಿಂಗ್’ ಮಾಡಿದ್ರೂ ಲಕ್ಷಾಂತರ ದಂಡ, 5 ವರ್ಷ ಜೈಲು ಫಿಕ್ಸ್! | Vaping

ಬ್ಯಾಂಕಾಕ್: ವಿದೇಶಿ ಪ್ರವಾಸ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಭಾರತೀಯರ ಪಾಲಿಗೆ ಅಚ್ಚುಮೆಚ್ಚಿನ ಪ್ರವಾಸಿ ತಾಣ ಎಂದರೆ ಅದು ಥೈಲ್ಯಾಂಡ್. ಆದರೆ, ಈ ಸುಂದರ ದೇಶಕ್ಕೆ ಪ್ರವಾಸ ಹೋಗುವ ಮುನ್ನ ನೀವು ಅಲ್ಲಿನ ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ಹೊಂದಿಲ್ಲದಿದ್ದರೆ, ನಿಮ್ಮ ಪ್ರವಾಸದ ಮಜಾ ಸಜೆಯಾಗಿ ಬದಲಾಗುವುದು ಗ್ಯಾರಂಟಿ. ವಿಶೇಷವಾಗಿ ನೀವು ಧೂಮಪಾನ ಅಥವಾ 'ವೇಪಿಂಗ್' (Vaping) ಪ್ರಿಯರಾಗಿದ್ದರೆ ಥೈಲ್ಯಾಂಡ್ ಸರ್ಕಾರ ಹೊರಡಿಸಿರುವ ಹೊಸ ಎಚ್ಚರಿಕೆ ನಿಮ್ಮ ನಿದ್ದೆಗೆಡಿಸಬಹುದು.
ಥೈಲ್ಯಾಂಡ್ ಸರ್ಕಾರವು 2014 ರಿಂದಲೇ ದೇಶದಲ್ಲಿ ಇ-ಸಿಗರೇಟ್‌ಗಳನ್ನು (E-Cigarettes) ಸಂಪೂರ್ಣವಾಗಿ ನಿಷೇಧಿಸಿದೆ. ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಮತ್ತು ಯುವ ಪೀಳಿಗೆಯನ್ನು ವ್ಯಸನದಿಂದ ಮುಕ್ತಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಈಗ 2026 ಕ್ಕೆ ಅನ್ವಯವಾಗುವಂತೆ ಈ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇಲ್ಲಿ ಇ-ಸಿಗರೇಟ್ ಬಳಸುವುದು ಮಾತ್ರವಲ್ಲ, ಅದನ್ನು ದೇಶಕ್ಕೆ ತರುವುದು, ಹೊಂದಿರುವುದು ಅಥವಾ ಮಾರಾಟ ಮಾಡುವುದು ಕೂಡ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.

ವಿದೇಶಿ ಪ್ರವಾಸಿಗರೇ ಟಾರ್ಗೆಟ್!

ಅನೇಕ ವಿದೇಶಿ ಪ್ರವಾಸಿಗರು ಸಣ್ಣ ವೇಪಿಂಗ್ ಸಾಧನವನ್ನು ಕೊಂಡೊಯ್ಯುವುದು ತಪ್ಪಲ್ಲ ಎಂದು ಭಾವಿಸುತ್ತಾರೆ. ಆದರೆ ಥಾಯ್ ಪೊಲೀಸರು ಈ ವಿಷಯದಲ್ಲಿ ಯಾವುದೇ ಮುಲಾಜು ತೋರಿಸುವುದಿಲ್ಲ. ವಿಮಾನ ನಿಲ್ದಾಣಗಳಿಂದ ಹಿಡಿದು ನೀವು ತಂಗುವ ಹೋಟೆಲ್‌ಗಳವರೆಗೆ ಎಲ್ಲೆಡೆ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತದೆ. ವೇಪಿಂಗ್ ಸಾಧನಗಳು, ಇ-ಲಿಕ್ವಿಡ್‌ಗಳು, ಚಾರ್ಜರ್‌ಗಳು ಮತ್ತು ಅದರ ಪರಿಕರಗಳನ್ನು ಹೊಂದಿದ್ದರೂ ಸಹ ನೀವು ಪೊಲೀಸರ ಅತಿಥಿಯಾಗಬೇಕಾಗುತ್ತದೆ.

ಬೀಚ್, ಮಾರುಕಟ್ಟೆಗಳಲ್ಲಿ ಪೊಲೀಸ್ ಹದ್ದಿನ ಕಣ್ಣು

ಥೈಲ್ಯಾಂಡ್‌ನ ಪ್ರಸಿದ್ಧ ಕಡಲತೀರಗಳು, ಮಾರುಕಟ್ಟೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ತಂಡಗಳು ಅನಿರೀಕ್ಷಿತ ದಾಳಿಗಳನ್ನು ನಡೆಸುತ್ತಿವೆ. ಈ ವೇಳೆ ಯಾರಾದರೂ ವೇಪಿಂಗ್ ಮಾಡುವುದು ಕಂಡುಬಂದರೆ ತಕ್ಷಣವೇ ಅವರನ್ನು ಬಂಧಿಸಲಾಗುತ್ತದೆ. "ನಾವು ಪ್ರವಾಸಿಗರು, ನಮಗೆ ನಿಯಮ ಗೊತ್ತಿಲ್ಲ" ಎಂಬ ಸಮರ್ಥನೆಗಳು ಅಲ್ಲಿ ನಡೆಯುವುದಿಲ್ಲ. ಸ್ಥಳೀಯರಿಗೂ ಮತ್ತು ಪ್ರವಾಸಿಗರಿಗೂ ಒಂದೇ ಕಾನೂನು ಅನ್ವಯವಾಗಲಿದೆ.

ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್!

ಒಮ್ಮೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ವಿಧಿಸುವ ದಂಡದ ಮೊತ್ತ ನಿಮ್ಮ ಪ್ರವಾಸದ ಒಟ್ಟು ಬಜೆಟ್‌ಗಿಂತಲೂ ಹೆಚ್ಚಿರಬಹುದು. ಸಾಮಾನ್ಯವಾಗಿ 40,000 ಥಾಯ್ ಬಹ್ತ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 1 ಲಕ್ಷ ರೂಪಾಯಿಗಳಿಗೂ ಅಧಿಕ ದಂಡ ವಿಧಿಸಲಾಗುತ್ತದೆ. ಕೆಲವು ಗಂಭೀರ ಪ್ರಕರಣಗಳಲ್ಲಿ, ವಶಪಡಿಸಿಕೊಂಡ ಸಾಧನದ ಮೌಲ್ಯದ ನಾಲ್ಕು ಪಟ್ಟು ದಂಡ ಪಾವತಿಸಬೇಕಾಗುತ್ತದೆ.

5 ವರ್ಷ ಜೈಲು ಶಿಕ್ಷೆಯ ಭೀತಿ

ದಂಡ ಪಾವತಿಸಿ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಬೇಡಿ. ಥೈಲ್ಯಾಂಡ್ ಕಾನೂನಿನ ಪ್ರಕಾರ, ಈ ಅಪರಾಧಕ್ಕೆ ಕೇವಲ ದಂಡವಲ್ಲದೆ, ಗರಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಪುನರಾವರ್ತಿತ ಅಪರಾಧಗಳಿಗಂತೂ ಕ್ಷಮೆಯೇ ಇಲ್ಲ. ಹೀಗಾಗಿ, ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವವರು ತಮ್ಮ ಲಗೇಜ್‌ನಲ್ಲಿ ಇ-ಸಿಗರೇಟ್ ಇಲ್ಲದಂತೆ ನೋಡಿಕೊಳ್ಳುವುದು ಜಾಣತನ,(ಏಜೆನ್ಸೀಸ್​).