Food delivery apps are not just delivering food, they are changing the country's economy 
ವೆಬ್‌ಡೆಸ್ಕ್

ಕೇವಲ್​ ಫುಡ್​ ಡೆಲಿವರಿ ಮಾತ್ರವಲ್ಲ ದೇಶದ ಆರ್ಥಿಕತೆಯ ಬೆನ್ನೆಲುಬು; 1.2 ಲಕ್ಷ ಕೋಟಿ ರೂ. ಆದಾಯ, 13 ಲಕ್ಷ ಉದ್ಯೋಗ ಕೊಟ್ಟ Food Delivery Apps

ಪ್ರಮುಖ ಮುಖ್ಯಾಂಶಗಳು

  • 1.2 ಲಕ್ಷ ಕೋಟಿ ರೂ. ಆದಾಯ, 13 ಲಕ್ಷ ಉದ್ಯೋಗ ಕೊಟ್ಟ ಡೆಲಿವರಿ ಆಪ್‌ಗಳು.
  • ದೇಶದ ಆರ್ಥಿಕತೆಯನ್ನೇ ಬದಲಿಸುತ್ತಿವೆ ಫುಡ್ ಡೆಲಿವರಿ ಆಪ್‌ಗಳು.
  • ಭಾರತದಲ್ಲಿ 60 ಲಕ್ಷಕ್ಕೂ ಅಧಿಕ ಗಿಗ್ ಕಾರ್ಮಿಕರಿದ್ದು, 2030ರ ವೇಳೆಗೆ ಈ ಸಂಖ್ಯೆ 1.7 ರಿಂದ 2.1 ಕೋಟಿಗೆ ಏರಿಕೆ.

Food delivery apps are not just delivering food, they are changing the country's economy: 

ಆನ್‌ಲೈನ್‌ನಲ್ಲಿ ಊಟ ಆರ್ಡರ್ ಮಾಡುವುದು ಇಂದು ನಮ್ಮೆಲ್ಲರ ದೈನಂದಿನ ಅಭ್ಯಾಸವಾಗಿ ಹೋಗಿದೆ. ಆದರೆ, ಈ ಫುಡ್ ಡೆಲಿವರಿ ಆಪ್‌ಗಳು ಕೇವಲ ಗ್ರಾಹಕರಿಗೆ ಊಟ ತಲುಪಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಬದಲಾಗಿ, ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸುತ್ತಿವೆ. ಹೋಟೆಲ್‌ಗಳ ವ್ಯಾಪಾರ ವಿಸ್ತರಣೆ, ಲಕ್ಷಾಂತರ ಯುವಕರಿಗೆ ಉದ್ಯೋಗ ಹಾಗೂ ತಂತ್ರಜ್ಞಾನ ವಲಯದ ಬೆಳವಣಿಗೆಗೆ ಇದು ಬಹುದೊಡ್ಡ ಕೊಡುಗೆ ನೀಡುತ್ತಿದೆ.

ಇತ್ತೀಚೆಗೆ ಪ್ರಕಟವಾದ ಎನ್‌ಸಿಎಇಆರ್ ಮತ್ತು ರೆಡ್‌ಸೀರ್ ವರದಿಗಳು ಫುಡ್ ಡೆಲಿವರಿ ವಲಯದ ಈ ಬೃಹತ್ ಸಾಧನೆಯನ್ನು ಬಿಚ್ಚಿಟ್ಟಿವೆ.

ಲಕ್ಷ ಕೋಟಿ ಆದಾಯ, ಬೃಹತ್ ಉದ್ಯೋಗ ಸೃಷ್ಟಿ

ಎನ್‌ಸಿಎಇಆರ್ ವರದಿಯ ಪ್ರಕಾರ, 2023-24ನೇ ಸಾಲಿನಲ್ಲಿ ಫುಡ್ ಡೆಲಿವರಿ ವಲಯವು ಬರೋಬ್ಬರಿ 1.2 ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ಗಳಿಸುವಲ್ಲಿ ಸಫಲವಾಗಿದೆ. ಜೊತೆಗೆ 13.7 ಲಕ್ಷ ಜನರಿಗೆ ನೇರ ಉದ್ಯೋಗ ನೀಡಿದೆ. ಅಚ್ಚರಿಯ ವಿಚಾರವೆಂದರೆ, ಈ ವಲಯದಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಉದ್ಯೋಗವು, ಇತರ ವಲಯಗಳಲ್ಲಿ ಪರೋಕ್ಷವಾಗಿ 2.7 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.

ಸಣ್ಣ ಹೋಟೆಲ್‌ಗಳಿಗೆ ವರದಾನವಾದ ಆಪ್‌ಗಳು

ಹೋಟೆಲ್‌ಗಳ ಒಟ್ಟು ಆದಾಯದಲ್ಲಿ ಡೆಲಿವರಿ ಆಪ್‌ಗಳ ಪಾಲು 2019ರಲ್ಲಿ ಶೇ. 22.1ರಷ್ಟಿತ್ತು, ಅದು 2023ರ ವೇಳೆಗೆ ಶೇ. 28.8ಕ್ಕೆ ಏರಿಕೆಯಾಗಿದೆ. ಅದರಲ್ಲೂ 3ನೇ ಹಂತದ ನಗರಗಳಲ್ಲಿರುವ ಸಣ್ಣ ಹೋಟೆಲ್‌ಗಳಿಗೆ ಇದು ಅತಿ ಹೆಚ್ಚು ಲಾಭ ತಂದುಕೊಟ್ಟಿದೆ.
ಶೇ. 59ರಷ್ಟು ಹೋಟೆಲ್ ಮಾಲೀಕರು ತಾವು ಆಪ್‌ಗೆ ಸೇರಿದ ಮೇಲೆ ತಮ್ಮ ಭೌಗೋಳಿಕ ವ್ಯಾಪಾರ ವಿಸ್ತರಣೆಯಾಗಿದೆ ಎಂದಿದ್ದಾರೆ. ಶೇ. 69ರಷ್ಟು ಜನ ತಮ್ಮ ಹೋಟೆಲ್‌ ಜನರಿಗೆ ಹೆಚ್ಚು ಪರಿಚಿತವಾಗಲು ಮತ್ತು ಶೇ. 67ರಷ್ಟು ಹೊಸ ಗ್ರಾಹಕರನ್ನು ಸುಲಭವಾಗಿ ತಲುಪಲು ಈ ಆಪ್‌ಗಳೇ ಕಾರಣ ಎಂದೂ ತಿಳಿಸಿದ್ದಾರೆ.

ವ್ಯವಹಾರ ಸುಲಭ, ಡಿಜಿಟಲ್‌ನಲ್ಲೇ ಲೆಕ್ಕಾಚಾರ

ಹಿಂದೆ ಸಣ್ಣ ಹೋಟೆಲ್‌ಗಳಿಗೆ ಎಫ್‌ಎಸ್‌ಎಸ್‌ಎಐ (ಆಹಾರ ಸುರಕ್ಷತಾ) ಲೈಸೆನ್ಸ್ ಪಡೆಯುವುದು, ನಿಯಮಗಳನ್ನು ಪಾಲಿಸುವುದು ಕಷ್ಟವಾಗಿತ್ತು. ಆದರೆ ಈಗ ಡೆಲಿವರಿ ಆಪ್‌ಗಳೇ ಈ ಕಾನೂನು ಪ್ರಕ್ರಿಯೆಗಳಿಗೆ ಹಾಗೂ ಸಿಬ್ಬಂದಿ ತರಬೇತಿಗೆ ಸಹಾಯ ಮಾಡುತ್ತಿವೆ. 
ಜೊತೆಗೆ, ಶೇ. 56ರಷ್ಟು ಹೋಟೆಲ್‌ಗಳು ಮೆನು ಪ್ಲಾನಿಂಗ್‌ಗೆ, ಶೇ. 50ರಷ್ಟು ದಾಸ್ತಾನು ನಿರ್ವಹಣೆಗೆ ಮತ್ತು ಶೇ. 78.3ರಷ್ಟು ಹೋಟೆಲ್‌ಗಳು ಲೆಕ್ಕಪತ್ರ ನಿರ್ವಹಣೆಗೆ ಈ ಆಪ್‌ಗಳು ನೀಡುವ ತಂತ್ರಜ್ಞಾನವನ್ನೇ ಬಳಸಿಕೊಳ್ಳುತ್ತಿವೆ. ಆಪ್‌ನಲ್ಲಿ ಜಾಹೀರಾತು ನೀಡುವ ಮೂಲಕ ವ್ಯಾಪಾರ ಹೆಚ್ಚಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಶೇ. 49ರಷ್ಟಿದೆ.

ನಿರುದ್ಯೋಗಿಗಳಿಗೆ ಆಸರೆಯಾದ 'ಗಿಗ್' ಉದ್ಯೋಗ

ಭಾರತದಲ್ಲಿ ಗಿಗ್ ಉದ್ಯೋಗಿಗಳ (ಡೆಲಿವರಿ ಕಾರ್ಮಿಕರು) ಸಂಖ್ಯೆ ಅತಿ ವೇಗವಾಗಿ ಬೆಳೆಯುತ್ತಿದೆ. ರೆಡ್‌ಸೀರ್ ವರದಿ ಪ್ರಕಾರ, ಪ್ರಸ್ತುತ ಭಾರತದಲ್ಲಿ 60 ಲಕ್ಷಕ್ಕೂ ಅಧಿಕ ಗಿಗ್ ಕಾರ್ಮಿಕರಿದ್ದು, 2030ರ ವೇಳೆಗೆ ಈ ಸಂಖ್ಯೆ 1.7 ರಿಂದ 2.1 ಕೋಟಿಗೆ ಏರಿಕೆಯಾಗಲಿದೆ.
ಪ್ರಸ್ತುತ ಡೆಲಿವರಿ ಕೆಲಸ ಮಾಡುವವರೇ (ಆಹಾರ ಮತ್ತು ಇತರ ಡೆಲಿವರಿ) 24 ಲಕ್ಷ ಜನರಿದ್ದು, 2030ರ ಹೊತ್ತಿಗೆ ಈ ಸಂಖ್ಯೆ 50 ರಿಂದ 70 ಲಕ್ಷಕ್ಕೆ ಏರಿಕೆಯಾಗಲಿದೆ. ವಿಶೇಷವಾಗಿ ಇಲ್ಲಿ ಕೆಲಸ ಮಾಡುತ್ತಿರುವ ಶೇ. 54ರಷ್ಟು ಜನರಿಗೆ ಈ ಮೊದಲು ಯಾವುದೇ ಸರಿಯಾದ ಉದ್ಯೋಗವಿರಲಿಲ್ಲ. ಶೇ. 37ರಷ್ಟು ಯುವಕರು ಇದೇ ಮೊದಲ ಬಾರಿಗೆ ಕೆಲಸಕ್ಕೆ ಸೇರಿದ್ದಾರೆ. ಅಂದರೆ, ನಿರುದ್ಯೋಗಿಗಳಿಗೆ ಇದು ಮೊದಲ ಮೆಟ್ಟಿಲಾಗಿದೆ. 
ಈ ಹಿನ್ನೆಲೆಯಲ್ಲಿ, 2030ರ ವೇಳೆಗೆ ಭಾರತಕ್ಕೆ ಅಗತ್ಯವಿರುವ ಉದ್ಯೋಗಗಳಲ್ಲಿ ಶೇ. 70ರಷ್ಟು ಉದ್ಯೋಗಗಳನ್ನು ಈ ಆಪ್‌ಗಳೇ ಸೃಷ್ಟಿಸಲಿವೆ ಎಂದೂ ವರದಿ ಅಂದಾಜಿಸಿದೆ.

ಗಳಿಕೆಯಲ್ಲೂ ಮುಂದು

ಇತರ ಸಾಂಪ್ರದಾಯಿಕ ಕೆಲಸಗಳನ್ನು ಮಾಡುವವರಿಗಿಂತ, ಈ ಡೆಲಿವರಿ ಆಪ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವವರು ತಿಂಗಳಿಗೆ 2.5 ಪಟ್ಟು ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಎಂಬುದಾಗಿಯೂ ವರದಿ ಹೇಳಿದೆ.
ಒಟ್ಟಿನಲ್ಲಿ ಹೇಳುವುದಾದರೆ, ಫುಡ್ ಡೆಲಿವರಿ ಎಂಬುದು ಕೇವಲ ಮನೆಬಾಗಿಲಿಗೆ ಊಟ ತರುವ ಸೇವೆಯಾಗಿ ಉಳಿದಿಲ್ಲ. ಸಣ್ಣ ವ್ಯಾಪಾರಿಗಳನ್ನು ಬೆಳೆಸುವ, ಹಳ್ಳಿಯಿಂದ ಬಂದ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಡುವ ಮತ್ತು ಲಾಜಿಸ್ಟಿಕ್ಸ್ ಹಾಗೂ ತಂತ್ರಜ್ಞಾನವನ್ನು ಬೆಸೆಯುವ ಮೂಲಕ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮುನ್ನಡೆಸುವ ಪ್ರಬಲ ಶಕ್ತಿಯಾಗಿ ರೂಪುಗೊಂಡಿದೆ, (ಏಜೆನ್ಸೀಸ್).