ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ಗೆ ಅಲ್ಪ ಪ್ರಮಾಣದ ರಿಲೀಫ್ ಸಿಕ್ಕಿದ್ದು, ಶನಿವಾರ(ನ. 07) ಜೈಲಿನಲ್ಲೇ ಅವರ ಬೆನ್ನು ನೋವಿನ ಚಿಕಿತ್ಸೆಗೆ ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ.
ಜಾಮೀನು ಕೋರಿ ಮತ್ತು ಬಿಡುಗಡೆ ಸೇರಿದಂತೆ ಹಲವು ಕಾರಣಗಳಿಗೆ ಎಲ್ಲಾ ಕೋರ್ಟ್ಗೆ ಅಲೆದರು, ನಟ ದರ್ಶನ್ ಸಲ್ಲಿಸಿದ್ದ ಅರ್ಜಿಗಳನ್ನು ಕೋರ್ಟ್ಗಳು ತಿರಸ್ಕರಿಸಿದ್ದವು. ಆದರೆ ಇಂದು ತೀವ್ರ ಬೆನ್ನು ನೋವಿನ ಹಿನ್ನಲೆಯಲ್ಲಿ ವೈದ್ಯಕೀಯ ಸೌಲಭ್ಯ ಕೋರಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ.
ಕಳೆದ ಬಾರಿ ಇದೇ ಬೆನ್ನು ನೋವಿಗೆ ಚಿಕಿತ್ಸೆಗೆ ಅನುಮತಿ ಕೋರಿ ಜಾಮೀನು ಪಡೆದುಕೊಂಡಿದ್ದರು. ಸರ್ಜರಿ ಅಗತ್ಯವಿದೆ, ಇಲ್ಲದಿದ್ದರೆ ತೀರಾ ಸಮಸ್ಯೆಯಾಗಲಿದೆ. ಆಪರೇಷನ್ ಮಾಡಿಸಿಕೊಳ್ಳದಿದ್ದರೇ ಸ್ವಾಧೀನ ಕಳೆದುಕೊಳ್ಳಬಹುದು, ಯೂರಿನೇಷನ್ ಕಂಟ್ರೋಲ್ ಕಳೆದುಕೊಳ್ಳಬಹುದು ಎಂದು ಹೇಳಿದ್ದರು. ಆದರೆ ಜಾಮೀನು ಪಡೆದ ಬಳಿಕ ದರ್ಶನ್ ಯಾವುದೇ ಆಪರೇಷನ್ ಮಾಡಿಸಿಕೊಂಡಿಲ್ಲ.
ಈ ಹಿನ್ನೆಲೆ ಜಾಮೀನು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮತ್ತೆ ಜೈಲು ಪಾಲಾಗಿದ್ದರು. ಆದರೆ ಅದೇ ಬೆನ್ನು ನೋವಿಗೆ ಫಿಸಿಯೋಥೆರಫಿ ಸೇರಿದಂತೆ ಸೂಕ್ತ ಚಿಕಿತ್ಸೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರಿದ್ದ ಪೀಠವು, ಜೈಲು ಅಧಿಕಾರಿಗಳಿಗೆ ಮಹತ್ವ ಸೂಚನೆ ನೀಡಿದ್ದು, ಜೈಲಿನಲ್ಲೇ ಚಿಕಿತ್ಸೆಗೆ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಿದೆ.