ನವದೆಹಲಿ: ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದ ಪ್ರಜಾಪ್ರಭುತ್ವದ ಪಯಣದಲ್ಲಿ ಮಹಿಳೆಯರಿಗೆ ಸಮಾನ ಪಾಲು ನೀಡುವ ಮೂಲಕ ಹೊಸ ಆಯಾಮ ಸೇರಿಸುವ ಸುವರ್ಣ ಅವಕಾಶವೊಂದು ಈಗ ವಿರೋಧ ಪಕ್ಷಗಳ ಸ್ವಾರ್ಥ ರಾಜಕಾರಣಕ್ಕೆ ಬಲಿಯಾಗಿದೆ ಎಂದು ಕೇಂದ್ರ ಆರೋಪಿಸಿದೆ.
ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ನೀತಿ ನಿರೂಪಣೆಯಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರವು ಈ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸಿತ್ತು. ಆದರೆ, ಸಂಸತ್ತಿನ ಅಂಗಳದಲ್ಲಿ ಈ ‘ಮಹಾ ಯಜ್ಞ’ಕ್ಕೆ ವಿರೋಧ ಪಕ್ಷಗಳು ತಣ್ಣೀರು ಸುರಿದಿವೆ ಎಂದು ಆಡಳಿತ ಪಕ್ಷ ಬಿಜಿಪಿ ಹರಿಹಾಯ್ದಿದೆ.
ಅಜ್ಜಿ ಕಾದರು, ತಾಯಿ ಆಶಿಸಿದರು.. ಮಗಳಿಗೂ ತಪ್ಪದ ಕಾಯುವಿಕೆ!
ಮಹಿಳಾ ಮೀಸಲಾತಿಯ ಕನಸನ್ನು ಹೊತ್ತು ಈ ದೇಶದ ಅಜ್ಜಿಯರು ಕಾದಿದ್ದರು, ತಾಯಿಯರು ಆಶಿಸಿದ್ದರು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇಂದು ನಮ್ಮ ಹೆಣ್ಣುಮಕ್ಕಳು ಇನ್ನೂ 30 ವರ್ಷಗಳ ಕಾಲ ಕಾಯುವಂತೆ ಮಾಡಿದೆ. ಇದು ಕೇವಲ ಸಂಸತ್ತಿನ ಸೀಟುಗಳ ವಿಷಯವಲ್ಲ; ಇದು ಭಾರತೀಯ ಮನೆಯ ಘನತೆ ಪ್ರಜಾಪ್ರಭುತ್ವದ ದೇಗುಲವನ್ನು ತಲುಪುವ ಪ್ರಶ್ನೆಯಾಗಿತ್ತು. ವಿರೋಧ ಪಕ್ಷಗಳ ಈ ನಡೆಯು ಮಹಿಳೆಯರ ಸಾಮರ್ಥ್ಯದ ಬಗ್ಗೆ ಅವರಿಗಿರುವ ದ್ವೇಷ ಮತ್ತು ಪಿತೃಪ್ರಧಾನ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದಿದೆ.
30 ವರ್ಷಗಳ ವಂಚನೆಯ ಮಜಲುಗಳು
ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧ ಪಕ್ಷಗಳು ಹೇಗೆ ಪದೇ ಪದೇ ಹಳ್ಳ ಹಿಡಿಸಿವೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ.
1996ರ ಆರಂಭಿಕ ಹಿನ್ನಡೆ: ಎಚ್.ಡಿ. ದೇವೇಗೌಡರ ಸರ್ಕಾರದ ಅವಧಿಯಲ್ಲಿ ಮೊದಲು ಮಂಡನೆಯಾದ ಬಿಲ್, ಸರ್ಕಾರ ಪತನದೊಂದಿಗೆ ಅಂತ್ಯವಾಯಿತು.
ವಾಜಪೇಯಿ ಕಾಲದ ವಿಘ್ನಗಳು (1998-2003): ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ನಾಲ್ಕು ಬಾರಿ ಪ್ರಯತ್ನ ನಡೆಸಿತು. ಆದರೆ ಕಾಂಗ್ರೆಸ್‌ನ ಇಂದಿನ ಮಿತ್ರಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಆರ್‌ಜೆಡಿ ಬಿಲ್ ಅನ್ನು ತಡೆದವು.
ಬಿಲ್ ಹರಿದು ಹಾಕಿದ ದರ್ಪ: 1998ರಲ್ಲಿ ಆರ್‌ಜೆಡಿ ಸಂಸದ ಸುರೇಂದ್ರ ಪ್ರಕಾಶ್ ಯಾದವ್ ಸಂಸತ್ತಿನಲ್ಲೇ ಬಿಲ್ ಪ್ರತಿಯನ್ನು ಕಿತ್ತೆಸೆದು ಹರಿದು ಹಾಕಿದ್ದರು.
ಯುಪಿಎ ಸರ್ಕಾರದ 10 ವರ್ಷಗಳ ಮೌನ (2004-2014): ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಅವಧಿಯಲ್ಲಿ 2010ರಲ್ಲಿ ರಾಜ್ಯಸಭೆಯಲ್ಲಿ ಬಿಲ್ ಪಾಸಾದರೂ, ಅದನ್ನು ಲೋಕಸಭೆಯಲ್ಲಿ ಮಂಡಿಸಲೇ ಇಲ್ಲ. ಅಧಿಕಾರ ಉಳಿಸಿಕೊಳ್ಳಲು ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಮಹಿಳೆಯರ ಹಿತಾಸಕ್ತಿಯನ್ನು ಬಲಿ ಕೊಡಲಾಯಿತು ಎಂದು ಕೇಂದ್ರ ಕಿಡಿ ಕಾರಿದೆ.
ಕಾಂಗ್ರೆಸ್‌ನ ‘ಮಹಿಳಾ ವಿರೋಧಿ’ ನಿಲುವುಗಳು
ಶಹಾಬಾನೋ ಪ್ರಕರಣ: ಪ್ರಧಾನಿ ರಾಜೀವ್ ಗಾಂಧಿಯವರು ಸುಪ್ರೀಂ ಕೋರ್ಟ್ ಆದೇಶವನ್ನೇ ತಿರುಚಿ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಸಿಗದಂತೆ ಮಾಡಿದ್ದರು. ಆ ಅನ್ಯಾಯವನ್ನು ಸರಿಪಡಿಸಲು ನರೇಂದ್ರ ಮೋದಿ ಸರ್ಕಾರವೇ ಬರಬೇಕಾಯಿತು.
ಪಂಚಾಯತ್ ಮೀಸಲಾತಿಯ ನಾಟಕ: ಪಂಚಾಯತ್‌ಗಳಲ್ಲಿ ಮೀಸಲಾತಿ ನೀಡಿದ್ದಕ್ಕೆ ವಿರೋಧ ಪಕ್ಷಗಳು ಕ್ರೆಡಿಟ್ ತೆಗೆದುಕೊಳ್ಳುತ್ತವೆ. ಆದರೆ, ಅಲ್ಲಿ ಮೀಸಲಾತಿ ನೀಡಲು ಒಪ್ಪಿದ್ದು ಏಕೆಂದರೆ ಅಲ್ಲಿ ಅವರ ಅಧಿಕಾರಕ್ಕೆ ಯಾವುದೇ ಭೀತಿ ಇರಲಿಲ್ಲ. ಶಾಸಕಾಂಗ ಮಟ್ಟದಲ್ಲಿ ಅಧಿಕಾರ ನೀಡುವ ಮಾತು ಬಂದಾಗ ಇವರ ನೈಜ ಮುಖ ಬಯಲಾಗಿದೆ.
ವಿಪಕ್ಷಗಳ ಅಡ್ಡಗಾಲು
2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು.
ಬಹಿರಂಗ ಶೌಚಾಲಯದ ಅನಿವಾರ್ಯತೆ, ಅಡುಗೆ ಅನಿಲದ ಕೊರತೆ ಮತ್ತು ನೀರಿನ ಸಮಸ್ಯೆಯಿಂದ ಮಹಿಳೆಯರು ನಲುಗುತ್ತಿದ್ದರು.
ಪ್ರಧಾನಿ ಮೋದಿ ಈ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಿದರು. ಆದರೆ ವಿರೋಧ ಪಕ್ಷಗಳು ಈ ಪ್ರತಿಯೊಂದು ಯೋಜನೆಯನ್ನು ಲೇವಡಿ ಮಾಡಿದವು ಅಥವಾ ಹಳಿತಪ್ಪಿಸಲು ಪ್ರಯತ್ನಿಸಿದವು.
ಇಂದು ಮಹಿಳೆಯರಿಗೆ ಸಂಸತ್ತಿನಲ್ಲಿ ಸ್ಥಾನ ನೀಡಲು ಹೋದಾಗಲೂ ವಿರೋಧ ಪಕ್ಷಗಳು ತಾಂತ್ರಿಕ ಕಾರಣಗಳನ್ನು ಒಡ್ಡಿ ಅಡ್ಡಿಪಡಿಸಿವೆ ಎಂದಿದೆ.
ಸೋಲು ನಮ್ಮದಲ್ಲ, ಅದು ನಿಮ್ಮದು!
"ನಾವು ವಿರೋಧ ಪಕ್ಷಗಳಿಗೆ ಹೇಳಿದ್ದೆವು, ನಿಮಗೆ ಬೇಕಿದ್ದರೆ ಈ ಕೆಲಸದ ಪೂರ್ಣ ಕ್ರೆಡಿಟ್ ತೆಗೆದುಕೊಳ್ಳಿ, ಆದರೆ ಮಹಿಳೆಯರಿಗೆ ಅಧಿಕಾರ ನೀಡಿ". ಆದರೆ ವಿರೋಧ ಪಕ್ಷಗಳಿಗೆ ಮಹಿಳೆಯರ ಏಳಿಗೆಗಿಂತ ತಮ್ಮ ರಾಜಕೀಯ ಹಿತಾಸಕ್ತಿಯೇ ದೊಡ್ಡದಾಯಿತು. ಅಧಿಕಾರ ದಾಹ ನಾರಿ ಶಕ್ತಿಯನ್ನು ಸೋಲಿಸಬಹುದು ಎಂದು ಅವರು ಭಾವಿಸಿದ್ದಾರೆ, ಆದರೆ ದೇಶದ ಕೋಟ್ಯಂತರ ಮಹಿಳೆಯರ ಆಶೀರ್ವಾದ ನಮ್ಮ ಮೇಲಿದೆ. ಮಹಿಳೆಯರಿಗೆ ಸಿಗಬೇಕಾದ ಹಕ್ಕನ್ನು ಕೊಡಿಸುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.