ಹೊಸದೆಹಲಿ: 'ವಿಕಸಿತ ಭಾರತ@2047' ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನೀತಿ ನಿರೂಪಣೆ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸಂವಹನ ಕುರಿತು ಸಂಸದರು ಹಾಗೂ ಶಾಸಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಾಗಾರವು ದೇಶದ ರಾಜಧಾನಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಯಶಸ್ವಿಯಾಗಿ ಜರುಗಿತು.
'ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಅಂಡ್ ಚೇಂಜ್ ಫೌಂಡೇಶನ್' (NFPRC) ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 80 ಜನಪ್ರತಿನಿಧಿಗಳು ಮತ್ತು ನೀತಿ ನಿರೂಪಕರು ಪಾಲ್ಗೊಂಡು ಮುಕ್ತ ಚರ್ಚೆ ನಡೆಸಿದರು.
ಎನ್‌ಎಫ್‌ಪಿಆರ್‌ಸಿ ಸಂಸ್ಥೆಯ ಅಧ್ಯಕ್ಷ ತರುಣ್ ಚುಗ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ಮಾನ್ ಭಾರತ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಯೋಜನೆಗಳು ದೇಶದ ಅಭಿವೃದ್ಧಿಯ ಬಲವಾದ ಆಧಾರ ಸ್ತಂಭಗಳಾಗಿವೆ ಎಂದರು.
ಆರೋಗ್ಯ, ಶಿಕ್ಷಣ ಮತ್ತು ಸಂವಹನಕ್ಕೆ ಒತ್ತು
ಲೋಕಸಭಾ ಸದಸ್ಯ ಡಾ. ಸಿ. ಎನ್. ಮಂಜುನಾಥ್ ಅವರು 'ಆರೋಗ್ಯ ಸೇವೆಗಳ ಲಭ್ಯತೆ' ಕುರಿತು ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ತಲುಪಿಸುವುದು ಅತ್ಯಗತ್ಯ ಎಂದರು. ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್‌ನ ಹಿರಿಯ ನಿರ್ದೇಶಕ ಸೌರಭ್ ಚೋಪ್ರಾ ಅವರು 'ರಾಷ್ಟ್ರೀಯ ಶಿಕ್ಷಣ ನೀತಿ (NEP) 2020' ರ ಸುಧಾರಣೆಗಳು ಹಾಗೂ ಮಾತೃಭಾಷಾ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಮತ್ತೊಬ್ಬ ಸಂಸದ ಡಾ. ಸಂಬಿತ್ ಪಾತ್ರಾ ಅವರು 'ಡಿಜಿಟಲ್ ಸಂವಹನ' ಕುರಿತು ಮಾತನಾಡಿ, ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು. ಎಲ್ಲರ ಒಳಗೊಳ್ಳುವಿಕೆಯೊಂದಿಗೆ ಸುಸ್ಥಿರ ದೇಶದ ಪ್ರಗತಿಗೆ ಒಮ್ಮತದ ನಿರ್ಣಯ ಕೈಗೊಳ್ಳುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.