ನವದೆಹಲಿ: ಅಂತಾರಾಜ್ಯ ಜಲವಿವಾದಗಳು ಎಂದಿಗೂ ಕೇವಲ ನೀರಿನ ಲಭ್ಯತೆಗೆ ಮಾತ್ರ ಸೀಮಿತವಾಗಿರುವುದಿಲ್ಲ; ಅವುಗಳ ಹಿಂದೆ ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ, ಪರಿಸರ ಕಾಳಜಿ ಹಾಗೂ ರಾಜಕೀಯ ಚೌಕಾಶಿಗಳಂತಹ ಸಂಕೀರ್ಣ ಹಿತಾಸಕ್ತಿಗಳು ಅಡಗಿರುತ್ತವೆ. ಕೇವಲ ನ್ಯಾಯಾಲಯಗಳು ಅಥವಾ ನ್ಯಾಯಮಂಡಳಿಗಳ ತೀರ್ಪುಗಳಿಂದ ಮಾತ್ರ ಶಾಶ್ವತ ಪರಿಹಾರ ಸಿಗಲು ಸಾಧ್ಯವಿಲ್ಲ ಎಂಬುದಕ್ಕೆ ನಮ್ಮ ದೇಶದ ನದಿ ನೀರು ಹಂಚಿಕೆ ವಿವಾದಗಳೇ ಸಾಕ್ಷಿ.
ಮೇಕೆದಾಟು ವಿವಾದದ ಒಳನೋಟಗಳು
ಕುಡಿಯುವ ನೀರಿಗಾಗಿ ಬೆಂಗಳೂರು ಪರದಾಟ
ಕರ್ನಾಟಕದ ಬೆಳೆಯುತ್ತಿರುವ ಜನಸಂಖ್ಯೆಗೆ ದೀರ್ಘಕಾಲಿಕ ಕುಡಿಯುವ ನೀರಿನ ಭದ್ರತೆ ಒದಗಿಸಲು ಉದ್ದೇಶಿಸಿರುವ ಪ್ರಮುಖ ಯೋಜನೆಯೇ ಪ್ರಸ್ತಾವಿತ ಮೇಕೆದಾಟು ಸಮತೋಲನ ಜಲಾಶಯ (ಬ್ಯಾಲೆನ್ಸಿಂಗ್ ರಿಸರ್ವಾಯ್ ಮೇಕೆದಾಟು). ಇದು ನಗರದ ನೀರಿನ ಬೇಡಿಕೆ ಮತ್ತು ಜಲವಿದ್ಯುತ್ ಉತ್ಪಾದನೆ ಎರಡನ್ನೂ ಗುರಿಯಾಗಿಸಿಕೊಂಡಿದೆ.
ತಮಿಳುನಾಡಿನ ಕೃಷಿ ಆತಂಕ
ಕುರುವೈ ಮತ್ತು ಸಾಂಬಾ ಭತ್ತದ ಕೃಷಿಗೆ ನಿರ್ಣಾಯಕವಾಗಿರುವ ಮುನ್ಸೂಚಿತ ನೀರು ಬಿಡುಗಡೆಯೇ ತಮಿಳುನಾಡಿನ ಮುಖ್ಯ ಕಾಳಜಿ. ಕಾವೇರಿ ನೀರು ಅಲ್ಲಿನ ಡೆಲ್ಟಾ ಆರ್ಥಿಕತೆಯ ಜೀವನಾಡಿಯಾಗಿರುವುದರಿಂದ, ರೈತರ ಹಿತಾಸಕ್ತಿ ಕಾಪಾಡಲು ನಿರಂತರ ನೀರು ಹರಿಯುವುದು ಅನಿವಾರ್ಯ ಎಂಬುದು ತಮಿಳುನಾಡು ವಾದವಾಗಿದೆ.
ಅ ಮೇಲ್ಭಾಗ ಹಾಗೂ ಕೆಳಭಾಗದ ರಾಜ್ಯಗಳ ಸಂಘರ್ಷ: ನದಿಯ ಮೇಲ್ಭಾಗದಲ್ಲಿರುವ ಕರ್ನಾಟಕ ನಿಯಂತ್ರಣ ಹೊಂದಿದ್ದರೆ, ಕೆಳಭಾಗದ ತಮಿಳುನಾಡು ನಿಯಂತ್ರಿತ ನೀರು ಬಿಡುಗಡೆಯನ್ನು ಅವಲಂಬಿಸಿದೆ. ಇದು ಪ್ರಾದೇಶಿಕ ಅಭಿವೃದ್ಧಿ ಮತ್ತು ಕಾನೂನುಬದ್ಧ ಬಾಧ್ಯತೆಗಳ ನಡುವಿನ ಸೂಕ್ಷ್ಮ ಸಮತೋಲನವನ್ನು ಎತ್ತಿ ತೋರಿಸುತ್ತದೆ.
ಕಾನೂನು ಮತ್ತು ವಾಸ್ತವದ ನಡುವಿನ ಸಂಘರ್ಷ
2018ರ ಸುಪ್ರೀಂ ಕೋರ್ಟ್ ತೀರ್ಪು ಯಾವುದೇ ರಾಜ್ಯಕ್ಕೂ ಅಂತಾರಾಜ್ಯ ನದಿಯ ಮೇಲೆ ಏಕಸ್ವಾಮ್ಯವಿಲ್ಲ ಎಂದು ಸ್ಪಷ್ಟಪಡಿಸಿ, ಸಿಡಬ್ಲ್ಯೂಎಂಎ (CWMA) ಮತ್ತು ಸಿಡಬ್ಲ್ಯೂಆರ್‌ಸಿ (CWRC) ಯಂತಹ ನಿರ್ವಹಣಾ ವ್ಯವಸ್ಥೆಗಳನ್ನು ರೂಪಿಸಿತು. ಆದರೂ ಅನುಷ್ಠಾನದ ಹಂತದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.
ರದ್ದಾದ ಮುಖ್ಯಮಂತ್ರಿಗಳ ಸಭೆ
ಕಾವೇರಿ ವಿವಾದದ ಬಿಗುವಿನ ವಾತಾವರಣ ತಗ್ಗಿಸಲು ಸಿಎಂ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ನಡುವೆ ನಡೆಯಬೇಕಿದ್ದ ಮಾತುಕತೆ, ಸೌಹಾರ್ದಯುತ ವಾತಾವರಣವಿಲ್ಲ ಎಂಬ ಕಾರಣಕ್ಕೆ ಮುಂದೂಡಲ್ಪಟ್ಟಿತು. ಇದು ಸಾರ್ವಜನಿಕ ಭಾವನೆಗಳು ತೀವ್ರವಾಗಿದ್ದಾಗ ರಾಜಕೀಯ ಚರ್ಚೆಗಳು ಎಷ್ಟು ಕಷ್ಟ ಎಂಬುದನ್ನು ತೋರಿಸುತ್ತದೆ
ಜನರ ಆಕ್ರೋಶ ಮತ್ತು ಪ್ರತಿಭಟನೆ
ಜಲವಿವಾದಗಳು ಈಗ ಕೇವಲ ಸರಕಾರಿ ಕಚೇರಿಗಳಿಗೆ ಸೀಮಿತವಾಗಿಲ್ಲ; ಬದಲಿಗೆ ಸಾರ್ವಜನಿಕ ಪ್ರತಿಭಟನೆಗಳು, ಪ್ರಾದೇಶಿಕ ಸಂಘಟನೆಗಳು, ಬಂದ್‌ಗಳು ಮತ್ತು ರಾಜ್ಯವ್ಯಾಪಿ ಆಂದೋಲನಗಳಾಗಿ ರೂಪುಗೊಂಡು ನಿರ್ಧಾರಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿವೆ.
ರಾಜಕೀಯ ಮೈತ್ರಿಗಳ ವೈಪರೀತ್ಯ
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ತಮಿಳುನಾಡಿನಲ್ಲಿ ಅದರ ಮಿತ್ರಪಕ್ಷವಾದ ಟಿವಿಕೆ (TVK) ಆಡಳಿತದಲ್ಲಿದೆ. ಇಂತಹ ಬಲವಾದ ಮೈತ್ರಿ ಇದ್ದರೂ, ಕಾಂಗ್ರೆಸ್ ಹೈಕಮಾಂಡ್ ಉಭಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮಾತುಕತೆಯ ತರುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ.
ಪ್ರಾಜೆಕ್ಟ್‌ನ ಮೂಲ ಉದ್ದೇಶವೇನು
ಮೇಕೆದಾಟು ಯೋಜನೆಯು ಬಹುಮುಖಿ ಹಿತಾಸಕ್ತಿಗಳನ್ನು ಏಕಕಾಲದಲ್ಲಿ ತೃಪ್ತಿಪಡಿಸಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ಇಂಜಿನಿಯರಿಂಗ್ ಪರಿಹಾರಗಳು ಮಾತ್ರವೇ ಇಂತಹ ವಿವಾದಗಳನ್ನು ಬಗೆಹರಿಸಲಾರವು; ಇಲ್ಲಿ ರಾಜಕೀಯ ನಂಬಿಕೆ, ಒಕ್ಕೂಟ ವ್ಯವಸ್ಥೆಯ ಸಹಕಾರ ಮತ್ತು ದೀರ್ಘಕಾಲಿಕ ಆಡಳಿತ ದೃಷ್ಟಿಕೋನ ಅತ್ಯಂತ ಮುಖ್ಯವಾಗುತ್ತದೆ.
ಕಿಶಾವು ಜಲವಿದ್ಯುತ್ ಯೋಜನೆ ಬಗ್ಗೆ
ಆರು ರಾಜ್ಯಗಳ ಒಮ್ಮತದ ಹೆಜ್ಜೆ: ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ - ಹೀಗೆ ಬರೋಬ್ಬರಿ ಆರು ರಾಜ್ಯಗಳ ವಿಭಿನ್ನ ಬೇಡಿಕೆಗಳನ್ನು (ನೀರಿನ ಹಂಚಿಕೆ, ವಿದ್ಯುತ್ ಉತ್ಪಾದನೆ ಮತ್ತು ಆರ್ಥಿಕ ಜವಾಬ್ದಾರಿ) ಒಟ್ಟುಗೂಡಿಸಿ ಕಿಶಾವು ಬಹುಪಯೋಗಿ ಯೋಜನೆಯನ್ನು ರೂಪಿಸಲಾಗಿದೆ. ಹಣಕಾಸಿನ ಹೊರೆ ಹಂಚಿಕೆಯಲ್ಲಿ ನಾವೀನ್ಯತೆ: ಈ ಯೋಜನೆಯ ಪ್ರಮುಖ ಯಶಸ್ಸಿಗೆ ಕಾರಣ ಹಂಚಿಕೆಯ ಮರುರೂಪಣೆ. ಕೇಂದ್ರ ಸರ್ಕಾರದ ನೆರವು ಹಾಗೂ ಪರಿಷ್ಕೃತ ವೆಚ್ಚ ಹಂಚಿಕೆ ವ್ಯವಸ್ಥೆಯು ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ತೊಡಕುಗಳನ್ನು ನಿವಾರಿಸಿತು.
ಕೇಂದ್ರದ ಮಧ್ಯಸ್ಥಿಕೆ ಮತ್ತು ಪರಿಹಾರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಂಬಂಧಿತ ಕೇಂದ್ರ ಸಚಿವರನ್ನು ಒಂದೇ ವೇದಿಕೆಗೆ ತಂದು ಹಣಕಾಸು ಹಾಗೂ ಆಡಳಿತಾತ್ಮಕ ಸಮಸ್ಯೆಗೆ ಪರಿಹಾರ ಕಂಡುಕೊಂಡರು. ನೀರಿನ ಘಟಕಕ್ಕೆ ಶೇ. 90ರಷ್ಟು ಕೇಂದ್ರ ನೆರವು ಹಾಗೂ ನವೀನ ವೆಚ್ಚ ಹಂಚಿಕೆ ಸೂತ್ರದ ಮೂಲಕ ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದ ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸಲಾಯಿತು.
ಹೊಂದಾಣಿಕೆಯ ಮನೋಭಾವ: ಕಟ್ಟುನಿಟ್ಟಾದ ಹಣಕಾಸಿನ ನಿಯಮಗಳ ಬದಲು, ಪಾಲುದಾರ ರಾಜ್ಯಗಳ ಆರ್ಥಿಕ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಹೊರೆ ಹಂಚಿಕೆಯನ್ನು ಸಡಿಲಗೊಳಿಸಲಾಯಿತು. ಸಭೆಯಲ್ಲಿ ಈ ರಾಜ್ಯಗಳು ಒಟ್ಟು 2,000 ಕೋಟಿ ರೂ. ವಿದ್ಯುತ್ ಘಟಕದ ವೆಚ್ಚವನ್ನು ಭರಿಸಲು ಒಪ್ಪಿಕೊಂಡಿದ್ದು ಸಾಂಸ್ಥಿಕ ನಮ್ಯತೆಗೆ ಉತ್ತಮ ಉದಾಹರಣೆಯಾಗಿದೆ.
ಒಕ್ಕೂಟ ವ್ಯವಸ್ಥೆಯ ಗೆಲುವು ಹೇಗೆ ಸಾಧ್ಯ?
ಕೇವಲ ನ್ಯಾಯಾಲಯದ ಆದೇಶಗಳು ಕಾನೂನು ಪ್ರಶ್ನೆಗಳನ್ನು ಪರಿಹರಿಸಬಹುದೇ ವಿನಃ, ರಾಜಕೀಯ ಮತ್ತು ಆಡಳಿತಾತ್ಮಕ ಬಿಕ್ಕಟ್ಟುಗಳನ್ನು ಹಾಗೇ ಉಳಿಸುತ್ತವೆ. ದೀರ್ಘಕಾಲಿಕ ಪರಿಹಾರಕ್ಕೆ ಪರಸ್ಪರ ಒಮ್ಮತದ ಮಾತುಕತೆಯೇ ಮದ್ದು. ರಾಜಕೀಯ ನಾಯಕತ್ವ, ಆರ್ಥಿಕ ವ್ಯವಸ್ಥೆ ಮತ್ತು ಆಡಳಿತಾತ್ಮಕ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಬೃಹತ್ ಅಂತಾರಾಜ್ಯ ಯೋಜನೆಗಳು ಯಶಸ್ವಿಯಾಗುತ್ತವೆ. ಇದಕ್ಕೆ ಮೇಕೆದಾತು ಒಂದು ಎಚ್ಚರಿಕೆಯ ಪಾಠವಾದರೆ, ಕಿಶಾವು ಉತ್ತಮ ಮಾದರಿಯಾಗಿದೆ.
ವೆಚ್ಚ, ಪ್ರಯೋಜನ ಮತ್ತು ಜವಾಬ್ದಾರಿಗಳ ಸರಿಯಾದ ಹಂಚಿಕೆಯಾದಾಗ ರಾಜ್ಯಗಳು ವಿವಾದಾತ್ಮಕ ದೃಷ್ಟಿಕೋನವನ್ನು ಬಿಟ್ಟು, ಯೋಜನೆಗಳನ್ನು ಒಟ್ಟು ಹೂಡಿಕೆಗಳೆಂದು (Collective Investments) ಪರಿಗಣಿಸಲು ಮುಂದಾಗುತ್ತವೆ.ಒಟ್ಟಾರೆಯಾಗಿ ಹೇಳುವುದಾದರೆ, ಮುಖಾಮುಖಿ ಸಂಘರ್ಷಗಳಿಂದ ಅಂತಾರಾಜ್ಯ ಜಲವಿವಾದಗಳು ಬಗೆಹರಿಯುವುದಿಲ್ಲ. ಶಾಶ್ವತ ಪರಿಹಾರಕ್ಕೆ ಸಾಂಸ್ಥಿಕ ಸಂವಾದ, ಹೊರೆ ಹಂಚಿಕೆ, ರಾಜಕೀಯ ಸಮನ್ವಯತೆ ಹಾಗೂ ಪ್ರಾದೇಶಿಕ ಹಿತಾಸಕ್ತಿಗಳೊಂದಿಗೆ ರಾಷ್ಟ್ರೀಯ ಅಭಿವೃದ್ಧಿ ಗುರಿಗಳನ್ನು ಸಮತೋಲನಗೊಳಿಸುವ 'ಸಹಕಾರಿ ಒಕ್ಕೂಟ ತತ್ವ'ವೇ ಏಕೈಕ ದಾರಿಯಾಗಿದೆ ( ಏಜೆನ್ಸೀಸ್).