DK Shivakumar 
ವೆಬ್‌ಡೆಸ್ಕ್

ಪರಿಷತ್ ಚುನಾವಣೆ ಫಲಿತಾಂಶ; ಮತದಾರರ ತೀರ್ಮಾನ ಗೌರವಿಸುತ್ತೇವೆ: ಸಂದೇಶದ ಬಗ್ಗೆ ಅಧ್ಯಯನ ಮಾಡ್ತೇವೆ: ಸಿಎಂ ಡಿಕೆಶಿ | DK Shivakumar

ಕರ್ನಾಟಕದಲ್ಲಿ ನಡೆದ ನಾಲ್ಕು ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ಬುಧವಾರ(ಅ. 28) ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ಮತದಾರರ ತೀರ್ಮಾನ ಗೌರವಿಸುತ್ತೇವೆ. ಮತ್ತು ಅವರು ಕೊಟ್ಟಿರುವ ಸಂದೇಶವನ್ನು ಕೂಲಂಕುಷ ಅಧ್ಯಯನ ಮಾಡಿ ಸರಿಪಡಿಸಿಕೊಳ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ನಡೆದ ನಾಲ್ಕು ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ಬುಧವಾರ(ಅ. 28) ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ಮತದಾರರ ತೀರ್ಮಾನ ಗೌರವಿಸುತ್ತೇವೆ. ಮತ್ತು ಅವರು ಕೊಟ್ಟಿರುವ ಸಂದೇಶವನ್ನು ಕೂಲಂಕುಷ ಅಧ್ಯಯನ ಮಾಡಿ ಸರಿಪಡಿಸಿಕೊಳ್ತೇವೆ ಎಂದು ಹೇಳಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾರರು ಕೊಟ್ಟಿರುವ ತೀರ್ಮಾನವನ್ನು ಗೌರವದಿಂದ ಸ್ವೀಕಾರ ಮಾಡುತ್ತೇವೆ. ನಮ್ಮ ಪಕ್ಷಕ್ಕೆ ಎರಡು ಸ್ಥಾನಗಳು ಬರುವ ನಿರೀಕ್ಷೆಯಿತ್ತು. ಅದಾಗಿಲ್ಲ. ನಮ್ಮ ಪಕ್ಷ ಸೋತಿದ್ದರೂ ಮತಗಳು ಚೆನ್ನಾಗಿಯೇ ಬಂದಿವೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದು ಭವಿಷ್ಯದ ಮುನ್ಸೂಚನೆ ಎನ್ನುತ್ತಿದ್ದಾರೆ. ಆದರೆ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಬಗ್ಗೆ ಏನು ಉತ್ತರ ಕೊಡುತ್ತಾರೆ? ಅದು ಕೂಡ ಮುನ್ಸೂಚನೆಯೇ ಅಲ್ಲವೇ ?. ನಾವು ಕಲಿಯಬೇಕಾದ ವಿಚಾರಗಳಿವೆ. ಈ ಬಗ್ಗೆ ಪರಿಶೀಲಿಸಿ, ನಮ್ಮ ಕಾರ್ಯಕರ್ತರನ್ನು ಹೇಗೆ ತಯಾರು ಮಾಡಬೇಕೆಂದೂ ತಿಳಿದಿದೆ ಎಂದು ತಿಳಿಸಿದ್ದಾರೆ.

ಮತಪತ್ರ ಮೂಲಕ ಚುನಾವಣೆ ನಡೆದರೂ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಸೋತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಮತಪತ್ರದ ಮೂಲಕ ಚುನಾವಣೆಯ ಅಗತ್ಯವಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳಿವೆ. ನವೆಂಬರ್ ನಂತರ ನಮ್ಮ ಪಕ್ಷ ಈ ಕುರಿತು ಹೊಸ ಕ್ರಿಯಾ ಯೋಜನೆಯನ್ನು ಹೊರತರಲಿದೆ ಎಂದು ಹೇಳಿದ್ದಾರೆ.

ಸಮುದಾಯಗಳ ಸಮಸ್ಯೆಗಳು ಹಾಗೂ ನ್ಯಾಯಾಲಯದ ತೀರ್ಪಿನ ಬಗ್ಗೆ ಚರ್ಚಿಸಬೇಕಿದ್ದು, ಅದಕ್ಕಾಗಿ ಶಾಸಕ ಸಭೆ ಕರೆಯಲಾಗಿದೆ. ಇನ್ನೂ ಬರ ಪರಿಹಾರ ಬಿಡುಗಾಗಿ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸರ್ಕಾರಿ ಆದೇಶ ಹೊರಡಿಸಿ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲವನ್ನು ಸರಿಪಡಿಸಿ ಖಾತೆಗಳಿಗೆ ಪರಿಹಾರದ ಮೊತ್ತ ಜಮೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲೇ ಪ್ರಧಾನಿಗಳ ಭೇಟಿಗೆ ಸಮಯ ಕೋರಿಕೆ

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಸಮಯ ನಿಗದಿ ಮಾಡಲು ಕೋರಲಾಗಿದೆ. ಪ್ರಧಾನ ಮಂತ್ರಿಗಳು ಮೆಟ್ರೋ ಉದ್ಘಾಟನೆಗಾಗಿ ನವೆಂಬರ್ 15ರಂದು ಬೆಂಗಳೂರಿಗೆ ಆಗಮಿಸಿದಾಗ, ಸಮಯ ನಿಗದಿ ಮಾಡಲು ಕೋರುತ್ತೇನೆ. ಅವರು ಮೈಸೂರಿಗೆ ಬರುವ ಕಾರ್ಯಕ್ರಮವೂ ಇತ್ತು. ಆದರೆ ದಸರಾ ಪ್ರಯುಕ್ತ ಅದನ್ನು ಮುಂದೂಡಲಾಗಿದೆ. ಅಲ್ಲಿ ಕೇಳಲು ಸಾಧ್ಯವಾಗದಿದ್ದರೆ ಬೆಂಗಳೂರಿಗೆ ಭೇಟಿ ನೀಡಿದಾಗ ಇಲ್ಲಿಯೇ ಸರ್ವ ಪಕ್ಷ ನಿಯೋಗ ಭೇಟಿ ಮಾಡಲು ಸಮಯ ನಿಗದಿ ಮಾಡುವಂತೆ ಕೇಳುತ್ತೇನೆ ಎಂದಿದ್ದಾರೆ.

ಮತದಾರರ ಅಂತಿಮ ಪಟ್ಟಿ ಬಗ್ಗೆ ಆಕ್ಷೇಪಗಳಿವೆ ಎಂದಿರುವ ಸಿಎಂ, ಅವುಗಳನ್ನು ಸಲ್ಲಿಸಲು ಅವಕಾಶ ನೀಡಿದ್ದಾರೆ. ಫಾರಂ 7 ವಿಚಾರದಲ್ಲಿ ನಾವು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಆಯೋಗ ಒಪ್ಪಿದೆ ಎಂದು ತಿಳಿಸಿದ್ದಾರೆ.

ಕೊನೆಯದಾಗಿ ಈ ಬಾರಿ ದೀಪಾವಳಿಯಿಂದಲೇ ನರಕಾಸುರರ ಸಂಹಾರ ಆರಂಭ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.