ಡಾ. ಆರ್. ಶ್ರೀನಾಗೇಶ್
ಇಂದು ವ್ಯಾಪಕವಾಗಿ ಸುದ್ದಿಯಲ್ಲಿರುವ ವಿದ್ಯಾರ್ಥಿಗಳ ಮನಸ್ಸನ್ನು ಅರಿತುಕೊಳ್ಳು ವುದು ನಾವು ಮಾಡಬೇಕಾದ ಮೊದಲ ಕೆಲಸ. ಅವರ ಕೆಲಸಗಳನ್ನೋ, ಮಾತುಗಳನ್ನೋ ಗಮನಿಸಿ ಇವರು ಹೀಗೆ ಎಂದು ಹಣೆಪಟ್ಟಿ ಹಚ್ಚಿ ಕೈ ತೊಳೆದುಕೊಂಡರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ.
ಇವರ ಮನದಾಳವನ್ನು ಅರಿಯುವ ಹೊಣೆಗಾರಿಕೆ ಮನೆಯಲ್ಲಿ ಪಾಲಕರು, ಹೊರಗೆ ಶಿಕ್ಷಕರದು. ಒಂದು ಹಂತದ ನಂತರ ಪಾಲಕರಿಗಿಂತ ಶಿಕ್ಷಕರು ಹೆಚ್ಚು ಸಮಯವನ್ನು ಈ ಮಕ್ಕಳ ಜೊತೆ ಕಳೆಯುತ್ತಾರೆ. ಇರುವ ಒಂದೋ ಎರಡೋ ಮಕ್ಕಳ ತುಡಿತಗಳನ್ನೂ ಪಾಲಕರು ಅರ್ಥ ಮಾಡಿಕೊಳ್ಳಲು ವಿಫಲರಾಗುವುದೇ ಅನೇಕ ರೀತಿಯ ಸಂಘರ್ಷಗಳಿಗೆ ಕಾರಣವಾಗುತ್ತದೆ. ಶಿಕ್ಷಕರು ಹೆಚ್ಚು
ಮಕ್ಕಳನ್ನು ಗಮನಿಸುತ್ತಿರುತ್ತಾರೆ, ಅನೇಕರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಅವರಿಗೆ ಅಧಿಕಾರವೇ ಇಲ್ಲದೆ, ತಪ್ಪು ಮಾಡಿದವರ ನಿರ್ಲಕ್ಷ್ಯ ಪ್ರಬಲವಾಗುತ್ತದೆ. ಸುದೀರ್ಘ ಅನುಭವದಲ್ಲಿ ನಾನು ಕಂಡಿರುವ ವಿದ್ಯಾರ್ಥಿ ಸಮುದಾಯವನ್ನು ನಾಲ್ಕು ವರ್ಗಗಳಲ್ಲಿ ಗುರುತಿಸಿದ್ದೇನೆ. ಕನಸಿನ ತುಡಿತ, ಭಾವುಕತೆಯ ಮಿಡಿತಗಳಿಂದ ಉತ್ತೇಜಿತರಾಗಿ, ಸಾಧನೆಯತ್ತ ಸಾಗುವ ಬಯಕೆ ಇದ್ದರೂ, ಅವಕಾಶಗಳ ಕೊರತೆಯಿಂದ ಕುಗ್ಗಿರುವವರು. ಆರ್ಥಿಕವಾಗಿ, ಭಾವನಾತ್ಮಕವಾಗಿ ಬೆಂಬಲ ಸಿಗದಿರುವುದು ಇವರ ಮುಖ್ಯ ಕೊರಗಿರಬಹುದು. ಅವರ ಕನಸುಗಳನ್ನು ಗೌರವಿಸದಿರುವುದೂ ಅವರು ಕುಗ್ಗಲು ಕಾರಣವಿರ ಬಹುದು.
ಎರಡನೆಯ ವರ್ಗದವರಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಸರಿಯಾದ ಮಾರ್ಗದರ್ಶನವಿಲ್ಲದೆ, ಅತಿ ಕೋಪ ಅಥವಾ ಅತಿ ದುಃಖದಿಂದ ನರಳುತ್ತಿರುವವರು. ಲೈಂಗಿಕತೆ, ಮದ್ಯಪಾನ, ಮಾದಕ ವಸ್ತುಗಳಿಗೆ ಸೇವಕರಾಗಿರುವವರು. ಇವರ ಪೈಕಿ, ಅನೇಕರಿಗೆ ಅದರಿಂದ ಹೊರಬರುವ ಆಸೆ ಇರುತ್ತದೆ. ಸಹನೆಯಿಂದ ಅವರೊಡನೆ ವರ್ತಿಸುವವರು ಬೇಕು. ಹಂಗಿಸದೆ, ಅದರಿಂದ ಅವರ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಆಗಬಹುದಾದ ದುಷ್ಪರಿಣಾಮಗಳನ್ನು ಕಾಳಜಿಯಿಂದ ಹೇಳಿದರೆ ಕೇಳುತ್ತಾರೆ.
ಈ ಎರಡೂ ವರ್ಗದ ಮಕ್ಕಳಿಗೆ ಬೇಕಿರುವುದು ಅವರ ಭಾವನೆ ಗಳಿಗೆ ಸರಿಯಾದ ರೀತಿಯ ಸ್ಪಂದನೆ. ತಮ್ಮ ಸಂದೇಹಗಳನ್ನು, ಭಯಗಳನ್ನು ಮುಕ್ತವಾಗಿ ಹಂಚಿಕೊಂಡು, ಪರಿಹಾರ ಹುಡುಕಲು ಖಂಡಿತ ನೆರವಾಗುವವರು ಎನ್ನುವ ಸಹೃದಯತೆಯನ್ನು ಮೂಡಿಸಬಲ್ಲ ಭರವಸೆ ಅವರಿಗೆ ಬೇಕಿರುವುದು.
ಪ್ರಭಾವಿ ಕೌಟುಂಬಿಕ ಹಿನ್ನೆಲೆಯ, ಮನ ಬಂದ ಹಾಗೆ ಖರ್ಚು ಮಾಡುವಷ್ಟು ಹಣ ಅನಾಯಾಸವಾಗಿ ಸಿಗುವ ವರ್ಗ ಮೂರನೆಯದು. ಇವರನ್ನು ಪಾಲಕರೋ, ಅಜ್ಜಿ-ತಾತಂದಿರೋ, ಮುದ್ದು ಮಾಡಿ, ಸಣ್ಣವರಿದ್ದಾಗ ಅವರು ಮಾಡಿದ ತಪ್ಪುಗಳಿಗೆ ಶಿಕ್ಷೆಯಾಗದಂತೆ ತಡೆದು, ಅದರಿಂದ ತಿದ್ದುವ ಪ್ರಯತ್ನ ಮಾಡುವವರ ವಿರುದ್ಧ ಹರಿಹಾಯುವಂತಹ ಬೆಂಬಲ ಸಿಕ್ಕು, ಅಹಂಕಾರಿಯಾಗಿರುವವರು. ನಾಲ್ಕನೆಯ ವರ್ಗ ಸ್ವಲೋಕದಲ್ಲಿಯೇ ಮುಳುಗಿ, ಜಗತ್ತು ಇರುವುದೇ ತನ್ನ ಸೇವೆಗಾಗಿ ಎಂಬ ಭ್ರಮಾಲೋಕದಲ್ಲಿ ಮುಳುಗಿರುವ ವ್ಯರ್ಥಜೀವಿಗಳು. ಪಾಲಕರ ಮನಸ್ಸನ್ನು ನೋಯಿಸಿಕೊಂಡು ಜೀವಿಸುವರು. ‘ನನ್ನನ್ನು ಹುಟ್ಟಿಸಿ ಎಂದು ನಾನೇನೂ ಕೇಳಲಿಲ್ಲ.
ನನ್ನನ್ನು ಹುಟ್ಟಿಸಿದವರೇ ನಾನು ಬದುಕಿರುವ ತನಕ ನನ್ನನ್ನು ನೋಡಿಕೊಳ್ಳಬೇಕು’ ಎಂದು 17ರ ವಯಸ್ಸಿನ ಹುಡುಗನೊಬ್ಬ ವಿಡಿಯೋ ಹಾಕಿ, ಅದನ್ನು ಸಹಸ್ರಾರು ಜನ ಲೈಕ್ ಮಾಡಿರುವುದನ್ನು ನೀವೂ ನೋಡಿರಬಹುದು. ‘ನಾನು ಕೇಳಿದ್ದನ್ನು ಕೊಡಿಸಲು ಆಗದಿದ್ದ ಮೇಲೆ ನನ್ನನ್ನು ಯಾಕೆ ಹುಟ್ಟಿಸಬೇಕಿತ್ತು’ ಎಂದು ಕೇಳುವ ನವತಾರುಣ್ಯದವರ ನಡವಳಿಕೆಯಿಂದ ನೊಂದ ಅನೇಕ ಪಾಲಕರು ನನ್ನ ಬಳಿ ಅಲವತ್ತುಕೊಂಡಿದ್ದಾರೆ. ಇಂತಹ ಮಕ್ಕಳ ಇಂತಹ ನಡವಳಿಕೆಯ ಹಿನ್ನೆಲೆಯಲ್ಲಿ ಹಲವು ಪ್ರಕರಣಗಳಲ್ಲಿ ಪಾಲಕರಲ್ಲಿಯೇ ದೋಷವಿರುವುದೂ ಗಮನಕ್ಕೆ ಬಂದಿದೆ.
ಮೂರು ಮತ್ತು ನಾಲ್ಕನೆಯ ವರ್ಗದವರಲ್ಲಿಯೂ ಅಪಾರ ಕೌಶಲಗಳಿರುತ್ತವೆ, ಬುದ್ಧಿಶಕ್ತಿ ಇರುತ್ತದೆ. ಅದನ್ನು ಸರಿಯಾದ ಮಾರ್ಗದಲ್ಲಿ ಬಳಸದೆ, ತಪ್ಪುರೀತಿಯಲ್ಲಿ ಬಳಸುವುದರಿಂದ ಪಾಲಕರಿಗೆ ಕೆಟ್ಟ ಹೆಸರು ತರುವ ಮತ್ತು ಸಮಾಜಕ್ಕೆ ಕಂಟಕಪ್ರಾಯರಾಗಿ ನಡೆದುಕೊಳ್ಳುತ್ತಾರೆ. ಅವರ ನಡವಳಿಕೆಗೆ ಶಿಕ್ಷೆಯನ್ನು ಎದುರಿಸಬೇಕಾಗುವುದು ಎನ್ನುವ ಭಯವಿಲ್ಲದಿರುವುದು ಒಂದು ಮುಖ್ಯ ಕಾರಣ. ಇಂತಹವರು ಆಪ್ತ ಸಲಹೆಯನ್ನು ಪಡೆಯಲು ನಿರಾಕರಿಸುತ್ತಾರೆ.
ದುರ್ವ್ಯಸನಗಳು: 8ನೆಯ ತರಗತಿಯಿಂದ 12ನೆಯ ತರಗತಿಯ ವರಲ್ಲಿ ಶೇ.6ಕ್ಕೂ ಹೆಚ್ಚು ಜನ ಮದ್ಯಸೇವನೆ ಮಾಡುವುದನ್ನು ಒಪ್ಪಿಕೊಂಡಿದ್ದಾರೆ. ಸಮೀಕ್ಷೆಯನ್ನು ಆನ್ಲೈನ್ ಮಾಡಿದಾಗ ಕಂಡು ಬಂದಿರುವುದು ಈ ಪ್ರಮಾಣ ಪ್ರತಿಶತ 47. ಸರಿಸುಮಾರು 23 ಪ್ರತಿಶತ ವಿದ್ಯಾರ್ಥಿಗಳು ಕುಡಿತಕ್ಕೆ ದಾಸರಾಗಿದ್ದಾರೆ. ಹುಡುಗರು ತಮ್ಮ ಲೈಂಗಿಕತೆಯ ಸಾಹಸಗಳನ್ನು ರೋಚಕವಾಗಿ ಉತ್ಪ್ರೇಕ್ಷೆಯಿಂದ ಹೇಳಿ ಕೊಳ್ಳುವುದು ಮತ್ತು ಹುಡುಗಿಯರು ಹೇಳಿಕೊಳ್ಳಲು ಹೆದರುವುದು ಸಮೀಕ್ಷೆ ನಡೆಸುವವರು ಎದುರಿಸುವ ದೋಷಗಳು. ಹೀಗಾಗಿ ಸ್ಪಷ್ಟ ಅಂಕಿಅಂಶಗಳು ಸಿಗುವುದಿಲ್ಲ. ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಧಾರಣೆ ಮಾಡುವುದು,ಮತ್ತು ಅವರ ಲೈಂಗಿಕ ಪಾಲುದಾರರೂ ಅಪ್ರಾಪ್ತರೇ ಆಗಿರುವುದೂ ಎಚ್ಚೆತ್ತುಕೊಳ್ಳಬೇಕಾದ ವಿಚಾರಗಳು.