ನವದೆಹಲಿ: ಭಾರತದ ಆರ್ಥಿಕ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣ ಅಧ್ಯಾಯ ಬರೆಯಲ್ಪಟ್ಟಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಭಾರತ ಹೊಂದುತ್ತಿರುವ ಆರ್ಥಿಕ ಬಾಂಧವ್ಯದ ಭಾಗವಾಗಿ, ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐತಿಹಾಸಿಕ 'ಮುಕ್ತ ವ್ಯಾಪಾರ ಒಪ್ಪಂದ'ಕ್ಕೆ (FTA) ಸಹಿ ಹಾಕಲಾಗಿದೆ. ಈ ಒಪ್ಪಂದವು ಕೇವಲ ಎರಡು ದೇಶಗಳ ನಡುವಿನ ವ್ಯವಹಾರವಾಗಿರದೆ, ಭಾರತದ ರೈತರು, ಮಹಿಳೆಯರು, ಯುವಜನತೆ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ 2047' ಕನಸಿನತ್ತ ಇಟ್ಟಿರುವ ಈ ಹೆಜ್ಜೆಯು, ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತುದಾರರಿಗೆ ಹೊಸ ಶಕ್ತಿಯನ್ನು ತುಂಬಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಬಣ್ಣಿಸಿದ್ದಾರೆ.
ರಫ್ತುದಾರರಿಗೆ ಲಾಟರಿ: ಸುಂಕ ಮುಕ್ತ ಪ್ರವೇಶ
ಈ ಒಪ್ಪಂದದ ಅನ್ವಯ, ನ್ಯೂಜಿಲೆಂಡ್ ಭಾರತದ ಎಲ್ಲಾ ಉತ್ಪನ್ನಗಳ ಮೇಲಿನ ಸುಂಕವನ್ನು (Tax) ತಕ್ಷಣವೇ ರದ್ದುಗೊಳಿಸಲು ಒಪ್ಪಿಕೊಂಡಿದೆ. ಇದು ಭಾರತೀಯ ರಫ್ತುದಾರರಿಗೆ ಸಿಕ್ಕ ದೊಡ್ಡ ಜಯ. ಪ್ರಸ್ತುತ ನಮ್ಮ ಅನೇಕ ಉತ್ಪನ್ನಗಳು ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಶೇ. 10 ರಷ್ಟು ಸುಂಕವನ್ನು ಎದುರಿಸುತ್ತಿದ್ದವು. ಈಗ ಸುಂಕ ರದ್ದತಿಯಿಂದಾಗಿ, ಸಿದ್ಧ ಉಡುಪುಗಳು, ಕಾರ್ಪೆಟ್‌ಗಳು ಮತ್ತು ಬಟ್ಟೆ ಉದ್ಯಮ. ಪಾದರಕ್ಷೆಗಳು, ಬ್ಯಾಗ್‌ಗಳು ಮತ್ತು ಬೆಲ್ಟ್‌ಗಳಂತಹ ಚರ್ಮದ ಉತ್ಪನ್ನಗಳು. ಆಟೋಮೊಬೈಲ್ ಬಿಡಿಭಾಗಗಳು ಮತ್ತು ಯಂತ್ರೋಪಕರಣಗಳು. ರತ್ನ, ಆಭರಣ ಹಾಗೂ ಕರಕುಶಲ ವಸ್ತುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ಅಲ್ಲದೆ,ಈ ವಲಯಗಳು ಹೆಚ್ಚಾಗಿ ಎಂಎಸ್‌ಎಂಇ (MSME) ವ್ಯಾಪ್ತಿಗೆ ಬರುವುದರಿಂದ, ಗ್ರಾಮೀಣ ಭಾಗದ ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ನೇರ ಲಾಭವಾಗಲಿದೆ.
ನಾರಿಶಕ್ತಿ ನೇತೃತ್ವದ ಮೊದಲ ಒಪ್ಪಂದ
ಈ ಒಪ್ಪಂದದ ಅತ್ಯಂತ ವಿಶೇಷ ಹಾಗೂ ಹೆಮ್ಮೆಯ ವಿಷಯವೆಂದರೆ, ಇದು ಭಾರತದ ಮೊದಲ 'ಮಹಿಳಾನೇತೃತ್ವದ ಎಫ್‌ಟಿಎ' ಆಗಿದೆ. ಈ ಒಪ್ಪಂದದ ಸಮಾಲೋಚನೆ ನಡೆಸಿದ ತಂಡದಲ್ಲಿ ಮುಖ್ಯ ಸಮಾಲೋಚಕರು, ಉಪಮುಖ್ಯ ಸಮಾಲೋಚಕರು ಮತ್ತು ನ್ಯೂಜಿಲೆಂಡ್‌ಗೆ ಭಾರತದ ರಾಯಭಾರಿಯೂ ಮಹಿಳೆಯರೇ ಆಗಿದ್ದಾರೆ. ಇದು ಮೋದಿ ಸರ್ಕಾರದ 'ನಾರಿಶಕ್ತಿ' ಕಲ್ಪನೆಗೆ ಸಂದ ಜಯವಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ನಿರ್ಧಾರಗಳಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ಸಾರಿದೆ.
ರೈತರ ಹಿತರಕ್ಷಣೆ: ಡೈರಿ ಉತ್ಪನ್ನಗಳಿಗೆ ವಿನಾಯಿತಿ
ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಭಾರತವು ಅತ್ಯಂತ ಎಚ್ಚರಿಕೆಯ ಮತ್ತು ಲಾಭದಾಯಕ ಹೆಜ್ಜೆಗಳನ್ನು ಇಟ್ಟಿದೆ.
ರಕ್ಷಣೆ: ನ್ಯೂಜಿಲೆಂಡ್ ಡೈರಿ ಉತ್ಪನ್ನಗಳಲ್ಲಿ (ಹಾಲು, ಚೀಸ್, ಮೊಸರು) ಬಲಿಷ್ಠವಾಗಿದ್ದರೂ, ಭಾರತದ ಡೈರಿ ರೈತರ ಹಿತದೃಷ್ಟಿಯಿಂದ ಈ ಉತ್ಪನ್ನಗಳನ್ನು ಸುಂಕದ ರಿಯಾಯಿತಿಯಿಂದ ಹೊರಗಿಡಲಾಗಿದೆ. ಈರುಳ್ಳಿ, ಚನಾ, ಬಟಾಣಿ, ಸಕ್ಕರೆಯಂತಹ ಸೂಕ್ಷ್ಮ ಉತ್ಪನ್ನಗಳಿಗೂ ರಕ್ಷಣೆ ನೀಡಲಾಗಿದೆ.
ಅಭಿವೃದ್ಧಿ: ನ್ಯೂಜಿಲೆಂಡ್‌ನ ಸಹಯೋಗದೊಂದಿಗೆ ಭಾರತದಲ್ಲಿ ಕಿವಿ, ಸೇಬು ಮತ್ತು ಜೇನುತುಪ್ಪದ ಉತ್ಪಾದನೆಯನ್ನು ಹೆಚ್ಚಿಸಲು 'ಕೃಷಿ ಉತ್ಪಾದಕತಾ ಕ್ರಿಯಾಯೋಜನೆ' ಜಾರಿಗೆ ಬರಲಿದೆ. ಇದರಿಂದ ನಮ್ಮ ರೈತರು ಸುಧಾರಿತ ತಂತ್ರಜ್ಞಾನ ಮತ್ತು ಗುಣಮಟ್ಟದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ.
ಯುವಜನತೆಗೆ ವೀಸಾ ಭಾಗ್ಯ
ಭಾರತದ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ಈ ಒಪ್ಪಂದವು ವಿದೇಶಿ ಶಿಕ್ಷಣ ಮತ್ತು ಉದ್ಯೋಗದ ಬಾಗಿಲನ್ನು ತೆರೆದಿದೆ.
ವಿದ್ಯಾರ್ಥಿಗಳಿಗೆ: ಭಾರತೀಯ ವಿದ್ಯಾರ್ಥಿಗಳಿಗೆ ನ್ಯೂಜಿಲೆಂಡ್‌ನಲ್ಲಿ ಅಧ್ಯಯನ ಮಾಡಲು ಯಾವುದೇ ಸಂಖ್ಯೆಯ ಮಿತಿಗಳಿಲ್ಲ (No numerical caps). ಪದವೀಧರರು 3 ವರ್ಷ ಹಾಗೂ ಪಿಎಚ್‌ಡಿ ಸಂಶೋಧಕರು 4 ವರ್ಷಗಳವರೆಗೆ ಓದಿನ ನಂತರ ಅಲ್ಲಿಯೇ ಕೆಲಸ ಮಾಡಲು ಅವಕಾಶ ಪಡೆಯಲಿದ್ದಾರೆ.
ವೃತ್ತಿಪರರಿಗೆ: ಐಟಿ, ಎಂಜಿನಿಯರಿಂಗ್, ಆರೋಗ್ಯ ಮತ್ತು ಯೋಗ, ಆಯುರ್ವೇದದಂತಹ ಸಾಂಪ್ರದಾಯಿಕ ಕ್ಷೇತ್ರಗಳ 5,000 ವೃತ್ತಿಪರರಿಗೆ 'ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ' ದೊರೆಯಲಿದೆ.
ವರ್ಕಿಂಗ್ ಹಾಲಿಡೇ ವೀಸಾ: ವಾರ್ಷಿಕ 1,000 ಯುವಕರು ನ್ಯೂಜಿಲೆಂಡ್‌ನಲ್ಲಿ ವಾಸಿಸುತ್ತಾ ಕೆಲಸ ಮಾಡುವ ಅವಕಾಶವನ್ನೂ ಈ ಒಪ್ಪಂದ ಕಲ್ಪಿಸಿದೆ.
20 ಬಿಲಿಯನ್ ಡಾಲರ್ ಹೂಡಿಕೆ
ಈ ಒಪ್ಪಂದದ ಅಡಿಯಲ್ಲಿ ನ್ಯೂಜಿಲೆಂಡ್ ಭಾರತದಲ್ಲಿ ಸುಮಾರು 20 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ. ಇದು ನಮ್ಮ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲ್ ಸೇವೆಗಳ ಬೆಳವಣಿಗೆಗೆ ಪೂರಕವಾಗಲಿದೆ. ಒಂದು ವೇಳೆ ಹೂಡಿಕೆಯ ಬದ್ಧತೆಗಳಲ್ಲಿ ವ್ಯತ್ಯಾಸವಾದರೆ ಭಾರತವು ಕ್ರಮ ಕೈಗೊಳ್ಳಲು 'ರೀಬ್ಯಾಲೆನ್ಸಿಂಗ್' ಕ್ಲಾಸ್ ಅನ್ನು ಕೂಡ ಸೇರಿಸಲಾಗಿದೆ, ಇದು ಭಾರತದ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಲಿದೆ ಎಂದು ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಒಪ್ಪಂದವು ಕೇವಲ ರಫ್ತು-ಆಮದಿಗೆ ಸೀಮಿತವಾಗದೆ, ಉದ್ಯೋಗ ಸೃಷ್ಟಿ, ತಂತ್ರಜ್ಞಾನ ವಿನಿಮಯ ಮತ್ತು ರೈತರ ಸಮೃದ್ಧಿಗೆ ದಾರಿಯಾಗಲಿದೆ. ಇದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತದ ವಿಶ್ವಾಸಾರ್ಹತೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಿದೆ,(ಏಜೆನ್ಸೀಸ್).