Kadai Paneer Sticks ಸಾಂದರ್ಭಿಕ ಚಿತ್ರ
Kadai Paneer Sticks: ಸಂಜೆಯ ಚಹಾ ಅಥವಾ ಪಾರ್ಟಿಗಳಿಗೆ ಸ್ಟಾರ್ಟರ್ ಆಗಿ ಮಾಡಿಕೊಡಲು ಥೇಟ್ ರೆಸ್ಟೋರೆಂಟ್ ಶೈಲಿಯ ಕಡಾಯಿ ಪನೀರ್ ಸ್ಟಿಕ್ಸ್ ಅತ್ಯಂತ ಆಕರ್ಷಕ ಮತ್ತು ರುಚಿಕರವಾದ ಸ್ನಾಕ್ಸ್ ಆಗಿದೆ. ಇದನ್ನು ಓವನ್ ಇಲ್ಲದೆಯೇ ತವಾ ಮೇಲೆ ಕೇವಲ 15-20 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದು. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೆ ಮಾಡಿ ಪನೀರ್ ಸ್ಟಿಕ್ಸ್..
ಬೇಕಾಗುವ ಪದಾರ್ಥಗಳು
* 2-3 ದೊಡ್ಡ ಚಮಚ ಬೆಣ್ಣೆ ಅಥವಾ ಎಣ್ಣೆ
* 6-8 ಮರದ ಟೂತ್‌ಪಿಕ್ ಅಥವಾ ಸ್ಟಿಕ್ಸ್
* 3 ದೊಡ್ಡ ಚಮಚ ಗಟ್ಟಿ ಮೊಸರು
* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ತಯಾರಿಸುವ ವಿಧಾನ
ಒಂದು ದೊಡ್ಡ ಪಾತ್ರೆಯಲ್ಲಿ ಗಟ್ಟಿ ಮೊಸರನ್ನು ಹಾಕಿಕೊಂಡು ಗಂಟಿಲ್ಲದಂತೆ ಚೆನ್ನಾಗಿ ಕದಡಿಕೊಳ್ಳಿ. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹುರಿದ ಕಡಲೆಹಿಟ್ಟು, ಅಚ್ಚಖಾರದ ಪುಡಿ, ಕಡಾಯಿ ಮಸಾಲಾ, ಕಸ್ತೂರಿ ಮೇತಿ, ಲಿಂಬೆರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ.
ಈಗ ಈ ಮಿಶ್ರಣಕ್ಕೆ ಚೌಕಾಕಾರವಾಗಿ ಕತ್ತರಿಸಿದ ಪನೀರ್ ತುಂಡುಗಳು, ಕ್ಯಾಪ್ಸಿಕಂ, ಈರುಳ್ಳಿ ಮತ್ತು ಟೊಮೆಟೊಗಳನ್ನು ಹಾಕಿ. ಮಸಾಲೆ ಎಲ್ಲಾ ತುಂಡುಗಳಿಗೂ ಸಮನಾಗಿ ಅಂಟಿಕೊಳ್ಳುವಂತೆ ಮೃದುವಾಗಿ ಕೈಯಾಡಿಸಿ. ಇದನ್ನು 15 ರಿಂದ 20 ನಿಮಿಷಗಳ ಕಾಲ ನೆನೆಯಲು ಬಿಡಿ.
ನೀವು ಬಳಸುವ ಮರದ ಸ್ಟಿಕ್ಸ್‌ಗಳನ್ನು10 ನಿಮಿಷ ನೀರಿನಲ್ಲಿ ನೆನೆಸಿಡಿ. ಈಗ ಒಂದೊಂದು ಸ್ಟಿಕ್ ಅನ್ನು ತೆಗೆದುಕೊಂಡು, ಮೊದಲು ಒಂದು ಈರುಳ್ಳಿ, ನಂತರ ಕ್ಯಾಪ್ಸಿಕಂ, ಟೊಮೆಟೊ ಮತ್ತು ಮಧ್ಯದಲ್ಲಿ ಒಂದು ಪನೀರ್ ಕ್ಯೂಬ್ ಅನ್ನು ಸಾಲಾಗಿ ಚುಚ್ಚಿ ಜೋಡಿಸಿ. ನಂತರ ಮತ್ತೊಮ್ಮೆ ತರಕಾರಿ ಮತ್ತು ಪನೀರ್ ಅನ್ನು ಅದೇ ಸ್ಟಿಕ್‌ನಲ್ಲಿ ಮುಂದುವರಿಸಿ ಜೋಡಿಸಿರಿ. ಎಲ್ಲಾ ಸ್ಟಿಕ್‌ಗಳನ್ನು ಇದೇ ರೀತಿ ಸಿದ್ಧಪಡಿಸಿಕೊಳ್ಳಿ.
ಒಂದು ನಾನ್-ಸ್ಟಿಕ್ ತವಾವನ್ನು ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ, ಅದಕ್ಕೆ 1 ಚಮಚ ಬೆಣ್ಣೆ ಅಥವಾ ಎಣ್ಣೆಯನ್ನು ಸವರಿಕೊಳ್ಳಿ. ತವಾ ಬಿಸಿಯಾದ ನಂತರ, ಸಿದ್ಧಪಡಿಸಿದ ಪನೀರ್ ಸ್ಟಿಕ್‌ಗಳನ್ನು ಒಂದೊಂದಾಗಿ ತವಾದ ಮೇಲಿಡಿ. ನಂತರ ಉರಿಯನ್ನು ಮಧ್ಯಮ ಹಂತದಲ್ಲಿಟ್ಟು, ಸ್ಟಿಕ್‌ಗಳನ್ನು ಮೃದುವಾಗಿ ತಿರುಗಿಸುತ್ತಾ ನಾಲ್ಕೂ ಬದಿಗಳಲ್ಲಿ ಪನೀರ್ ಮತ್ತು ತರಕಾರಿಗಳು ಲಘುವಾಗಿ ಕಂದು ಬಣ್ಣಕ್ಕೆ ತಿರುಗಿ, ಸುಟ್ಟಂತಾಗುವವರೆಗ ಚೆನ್ನಾಗಿ ಬೇಯಿಸಿ.
ಬೇಯಿಸುವಾಗ ಮಧ್ಯದಲ್ಲಿ ಲಘುವಾಗಿ ಸ್ವಲ್ಪ ಬೆಣ್ಣೆಯನ್ನು ಮೇಲಿಂದ ಸವರುತ್ತಿರಿ, ಇದರಿಂದ ಪನೀರ್ ಸಾಫ್ಟ್ ಆಗಿ ಉಳಿಯುತ್ತದೆ. ಈಗ ಬಿಸಿ ಬಿಸಿಯಾದ ಕಡಾಯಿ ಪನೀರ್ ಸ್ಟಿಕ್ಸ್ ಸವಿಯಲು ಸಿದ್ಧ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.