ಚುನಾವಣೆಯಲ್ಲಿ ಸೋತಿದ್ದಕ್ಕೆ ಸಿಟ್ಟು?; ಗ್ರಾಮಕ್ಕೆ ಅಳವಡಿಸಿದ ದೀಪ ತೆರವುಗೊಳಿಸಿದ ಬಿಜೆಪಿ ನಾಯಕ.
ಪಿಪ್ಲು ಪಂಚಾಯತ್ ಸಮಿತಿಯ ವಾರ್ಡ್ ನಂ. 2ರಲ್ಲಿ ನಡೆದ ಘಟನೆ.
ವಿದ್ಯುತ್ ಬಿಲ್ ಯಾರು ಕಟ್ತಾರೆ ಎಂದು ಉಡಾಫೆ ಉತ್ತರ ಕೊಟ್ಟ ಶಾಸಕ, ಗ್ರಾಮಸ್ಥರು ಕಿಡಿ.
ಕತ್ತಲೆಗೆ ದೂಡಿದ ನಾಯಕರ ವಿರುದ್ಧ ಕಿಡಿಕಾರಿದ ಗ್ರಾಮಸ್ಥರು.
ಭಿಲ್ವಾರಾ: ರಾಜಸ್ಥಾನದ ಗ್ರಾಮವೊಂದರಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ದೀಪಾವಳಿಗೆ ಹಾಕಿಸಿದ್ದ ಸುಮಾರು 50 ಬೀದಿ ದೀಪಗಳನ್ನು ತೆರವುಗೊಳಿಸಿದ್ದಾರೆ. ಈ ಘಟನೆ ಟೋಂಕ್ ಜಿಲ್ಲೆಯ ಪಿಪ್ಲು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಪಿಪ್ಲು ಪಂಚಾಯತ್ ಸಮಿತಿಯ ವಾರ್ಡ್ ನಂ. 2ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಶರ್ಮಾ ಅವರು ಕಾಂಗ್ರೆಸ್ ಪ್ರತಿಸ್ಪರ್ಧಿ ಧನ್ನಾ ಲಾಲ್ ವಿರುದ್ಧ 751 ಮತಗಳ ಅಂತರದಿಂದ ಸೋಲುಂಡ ಕೆಲವೇ ಗಂಟೆಗಳಲ್ಲಿ, ಅಂದರೆ ಶುಕ್ರವಾರ ಸಂಜೆ ದೀಪಾವಳಿಗೂ ಮುನ್ನ ಅಳವಡಿಸಲಾಗಿದ್ದ ಸುಮಾರು 50 ರಸ್ತೆ ದೀಪಗಳನ್ನು ತೆಗೆದುಹಾಕುವಂತೆ ಮಾಡಿದ್ದಾರೆ. ಪ್ರಿಯಾಂಕಾ ಶರ್ಮಾ ಅವರು ನಿವಾಯಿ ಕ್ಷೇತ್ರದ ಬಿಜೆಪಿ ಶಾಸಕ ರಾಮ ಸಹಾಯ್ ವರ್ಮಾ ಅವರ ಆಪ್ತ ಸಹಾಯಕ ಅಲೋಕ್ ಶರ್ಮಾ ಅವರ ಪತ್ನಿಯಾಗಿದ್ದಾರೆ.
ಪ್ರಿಯಾಂಕಾ ಅವರು ಚುನಾವಣಾ ಕಣದಲ್ಲಿದ್ದಾಗ, ಹಬ್ಬಕ್ಕೂ ಮುನ್ನ ಈ ದೀಪಗಳನ್ನು ಅಳವಡಿಸಿದ್ದರು. ಆದರೆ, ಈಗ ಸೋತಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ದೀಪಗಳನ್ನು ತೆರವುಗೊಳಿಸಿದ್ದಾರೆ. ವೋಟ್ ಚಾರ್ ದಿನ್ ಕಿ ಚಾಂದನಿ, ಫಿರ್ ಅಂಧೇರಿ ರಾತ್ ಎಂದು ವಾರ್ಡ್ ಪಂಚ್ ಕಾಜೋಡ್ ಪ್ರಜಾಪತ್ ಕಿಡಿಕಾರಿದರು.
ಈ ವಿಷಯದ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ರಾಮಸಹಾಯ್ ವರ್ಮಾ, ಬೀದಿ ದೀಪ ಅಕ್ರಮವಾಗಿ ಅಳವಡಿಕೆ ಮಾಡಲಾಗಿತ್ತು. ಚುನಾವಣೆಗೂ ಮುನ್ನ ಗ್ರಾಮಸ್ಥರು ದೀಪಗಳನ್ನು ಅಳವಡಿಸುವಂತೆ ಒತ್ತಾಯ ಮಾಡಿದ್ದ ಕಾರಣ ಬೀದಿ ದೀಪ ಅಳವಡಿಸಿದ್ದರು. ಆದರೆ ವಿದ್ಯುತ್ ಬಿಲ್ ಯಾರು ಪಾವತಿಸುತ್ತಾರೆ ಎಂಬ ಪ್ರಶ್ನೆ ಎದುರಾಯಿತು. ಬಿಜೆಪಿ ಸರಪಂಚ್ ಆಯ್ಕೆಯಾಗುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ಕಾಂಗ್ರೆಸ್ ಸರಪಂಚ್ ಆಯ್ಕೆಯಾದ ಕಾರಣ ದೀಪಗಳನ್ನು ತೆಗೆಯಲಾಗಿದೆ ಎಂದು ಉಡಾಫೆಯ ಉತ್ತರವನ್ನು ಕೊಟ್ಟರು,
ನನಗೆ ಕೆಟ್ಟ ಹೆಸರು ತರಲು ಸ್ಥಳೀಯರು ಇದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ನನ್ನ ಪಿಎ ಪತ್ನಿ ಪಂಚಾಯತ್ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ದೀಪಗಳನ್ನು ತೆಗೆದಿರುವ ವಿಷಯವನ್ನು ಅನಗತ್ಯವಾಗಿ ಎತ್ತಲಾಗುತ್ತಿದೆ. ನನ್ನ ಮತ್ತು ನನ್ನ ಪಿಎ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಸ್ಪಷ್ಟನೆ ಕೊಟ್ಟರು ಬಿಜೆಪಿ ಶಾಸಕ ರಾಮಸಹಾಯ್ ವರ್ಮಾ.
ಮತದಾರರನ್ನು ಓಲೈಸಲು ಈ ದೀಪಗಳನ್ನು ಹಾಕಲಾಗಿತ್ತು ಮತ್ತು ಫಲಿತಾಂಶ ವಿರುದ್ಧವಾಗಿ ಬಂದ ನಂತರ ಅವುಗಳನ್ನು ಕಿತ್ತೊಯ್ಯಲಾಗಿದೆ ಎಂದು ವಾರ್ಡ್ ಪಂಚ್ ಕಜೋಡ್ ಪ್ರಜಾಪತ್ ಆರೋಪಿಸಿದ್ದಾರೆ. ಜನರಿಗೆ ಕತ್ತಲಿನಿಂದ ಮುಕ್ತಿ ಸಿಕ್ಕಿತ್ತು, ಆದರೆ ಈ ವ್ಯವಸ್ಥೆಯು 'ಚಾರ್ ದಿನ್ ಕಿ ಚಾಂದನಿ, ಫಿರ್ ಅಂಧೇರಿ ರಾತ್ ಹೈ' ಎಂಬ ಗಾದೆ ಮಾತನ್ನು ನಿಜವಾಗಿಸಿದೆ" ಎಂದು ಪ್ರಜಾಪತ್ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ವಿದ್ಯುತ್ ಇಲಾಖೆಯು ಒಂದು ವಾಹನದೊಂದಿಗೆ ಬಂದು ಬೀದಿ ದೀಪ ತೆಗೆಯಲು ಪ್ರಾರಂಭಿಸಿತು. ನಿವಾಸಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಈ ದೀಪಗಳು ಅಕ್ರಮವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೀಪಗಳನ್ನು ಅಳವಡಿಸುವಾಗ ಇಲಾಖೆ ಏಕೆ ಕ್ರಮ ಕೈಗೊಳ್ಳಲಿಲ್ಲ ಮತ್ತು ಚುನಾವಣಾ ಫಲಿತಾಂಶದ ನಂತರವೇ ಏಕೆ ಕ್ರಮ ಕೈಗೊಳ್ಳಲಾಗಿದೆ. ಯಾರ ಸೂಚನೆಯ ಮೇರೆಗೆ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ
ಪಿಪ್ಲು ವಿದ್ಯುತ್ ನಿಗಮದ ಸಹಾಯಕ ಎಂಜಿನಿಯರ್ (AEN) ಗೋವರ್ಧನ್ ಚೌಧರಿ ಮಾತನಾಡಿ, ಎಲ್ಲಿ ಅಕ್ರಮವಾಗಿ ದೀಪಗಳನ್ನು ಅಳವಡಿಸಲಾಗಿದೆಯೋ, ಅಲ್ಲಿಗೆ ಇಲಾಖೆಯ ವಾಹನವನ್ನು ಕಳುಹಿಸಿ ಅವುಗಳನ್ನು ತೆಗೆಯಲಾಗುವುದು ಎಂದು ಅವರು ಹೇಳಿದ್ದಾರೆ, (ಏಜೆನ್ಸೀಸ್).