Bengaluru for dental treatment
Bengaluru for dental treatment : ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಸಮಸ್ಯೆಗಳ ಸಾಗರ ಅಲ್ಲ. ಇಲ್ಲಿ ಐಟಿ-ಬಿಟಿ ಕಂಪನಿಗಳು, ಶಿಕ್ಷಣ ಸೇರಿದಂತೆ ಹಲವು ವಿಚಾರಗಳು ಫೇಮಸ್. ಹಾಗೆಯೇ ವೈದ್ಯಕೀಯಕ್ಕೂ ಹೆಸರುವಾಸಿ. ಇದಕ್ಕೆ ಸರಿಯಾದ ಉದಾಹರಣೆ ಎಂದರೆ, ಇತ್ತೀಚೆಗೆ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬ ಹಲ್ಲಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದಕ್ಕೆ ಅವರು ವೆಚ್ಚ ಮಾಡಿದ ಹಣ ಕಂಡು ದಂಗಾಗಿದ್ದಾರೆ.
ಹೌದು, ಲಂಡನ್‌ನ 42 ವರ್ಷದ ಜಾನ್ ಮಿಲ್ಲರ್ ಎಂಬುವವರು, ಬರೋಬ್ಬರಿ 8,000 ಕಿಲೋಮೀಟರ್ ಪ್ರಯಾಣಿಸಿ ಬೆಂಗಳೂರಿಗೆ ಬಂದು ಯಶಸ್ವಿ ಚಿಕಿತ್ಸೆ ಪಡೆದು ಮರಳಿದ್ದಾರೆ.
ಸಮಸ್ಯೆ ಏನಾಗಿತ್ತು?
ಜಾನ್ ಮಿಲ್ಲರ್ ಅವರು, ತಮ್ಮ ಮುಂಭಾಗದ ಮೇಲಿನ ಹಲ್ಲುಗಳ ಸುತ್ತ ಬೆಳೆದಿದ್ದ 'ಸಿಸ್ಟ್' ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಅವರ ದವಡೆಯ ಮೂಳೆಗಳು ದುರ್ಬಲಗೊಂಡು, ದಿನನಿತ್ಯದ ಊಟ ಮಾಡಲು ಮತ್ತು ಮಾತನಾಡಲೂ ಕಷ್ಟಪಡುತ್ತಿದ್ದರು. ಗುಣಮಟ್ಟದ, ಸುಧಾರಿತ ಹಾಗೂ ಕೈಗೆಟುಕುವ ದರದ ಚಿಕಿತ್ಸೆಗಾಗಿ ಹುಡುಕಾಟ ನಡೆಸಿದಾಗ ಅವರಿಗೆ ಬೆಂಗಳೂರಿನ 'ಹ್ಯಾಪಿಯೆಸ್ಟ್ ಪರ್ಲ್ಸ್ ಡೆಂಟಲ್ ಕ್ಲಿನಿಕ್' ಬಗ್ಗೆ ಮಾಹಿತಿ ಲಭ್ಯವಾಯಿತು. ಸಂಕೀರ್ಣವಾದ ಹಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಈ ಕ್ಲಿನಿಕ್ ಹೊಂದಿರುವ ಜನಪ್ರಿಯತೆಯನ್ನು ನೋಡಿ ಅವರು ಲಂಡನ್‌ನಿಂದ ಇಲ್ಲಿಗೆ ಬರಲು ನಿರ್ಧರಿಸಿದರು.
6 ವಾರಗಳ ಕಾಲ ಅತ್ಯಾಧುನಿಕ ಚಿಕಿತ್ಸೆ
ಕ್ಲಿನಿಕ್‌ನ ಉಪನಿರ್ದೇಶಕರಾದ ಡಾ. ಸ್ಯಾಮ್ಯುಯೆಲ್ ಶಾಡ್ರಾಕ್ ಸುರೇಂದರ್ ಅವರ ನೇತೃತ್ವದಲ್ಲಿ ಚಿಕಿತ್ಸೆ ಆರಂಭವಾಯಿತು. ಸುಮಾರು ಒಂದೂವರೆ ತಿಂಗಳು (6 ವಾರಗಳು) ನಡೆದ ಈ ಚಿಕಿತ್ಸಾ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ಹಂತ-ಹಂತವಾಗಿ ಮಾಡಲಾಯಿತು.
ಸಂತಸ ಹಂಚಿಕೊಂಡ ರೋಗಿ
"ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬರುವುದು ಒಂದು ದೊಡ್ಡ ನಿರ್ಧಾರವಾಗಿತ್ತು. ಆದರೆ ಅದು ಸರಿಯಾದ ನಿರ್ಧಾರ ಎಂದು ಈಗ ಸಾಬೀತಾಗಿದೆ. ವೈದ್ಯ ಮತ್ತು ಇಡೀ ನರ್ಸಿಂಗ್ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ಈಗ ನಾನು ಆರಾಮಾಗಿ ಮಾತನಾಡಬಲ್ಲೆ, ಊಟ ಮಾಡಬಲ್ಲೆ ಮತ್ತು ನಗಬಲ್ಲೆ," ಜಾನ್ ಮಿಲ್ಲರ್ ಸಂತಸ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).