ಎಂ.ಬಿ. ರಾಜಪ್ಪ ಬಸವಾಪಟ್ಟಣ
ಹೋಬಳಿ ವ್ಯಾಪ್ತಿಗೆ ಬರುವ 38 ಹಳ್ಳಿಗಳ ಕಂದಾಯ ಆಡಳಿತ ವ್ಯವಸ್ಥೆಯು ತೀವ್ರ ಸಿಬ್ಬಂದಿ ಕೊರತೆಯಿಂದಾಗಿ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ತಮ್ಮ ದಿನನಿತ್ಯದ ಕಂದಾಯ ಕೆಲಸಗಳಿಗಾಗಿ ಕಚೇರಿಗೆ ಅಲೆಯುವಂತಾಗಿದೆ. ಒಟ್ಟು ಏಳು ಕಂದಾಯ ವೃತ್ತಗಳಿಗೆ ಕೇವಲ ಇಬ್ಬರೇ ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದು ಈ ಗಂಭೀರ ಸಮಸ್ಯೆಗೆ ಕಾರಣವಾಗಿದೆ.
ಬಸವಾಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು ಏಳು ಕಂದಾಯ ವೃತ್ತಗಳಿವೆ. ಬಸವಾಪಟ್ಟಣ ವೃತ್ತಕ್ಕೆ 5, ಚಿರಡೋಣಿ ವೃತ್ತಕ್ಕೆ 4, ಕೋಟೆಹಾಳ್ ವೃತ್ತಕ್ಕೆ 4, ಗುಡ್ಡದ ಕೋಮಾರನಹಳ್ಳಿ ವೃತ್ತಕ್ಕೆ 6, ಬೆಳಲಗೆರೆ ವೃತ್ತಕ್ಕೆ 6, ಕಣಿವೆಬಿಳಚಿ ವೃತ್ತಕ್ಕೆ 8 ಹಾಗೂ ದಾಗಿನಕಟ್ಟೆ ವೃತ್ತಕ್ಕೆ 5 ಹಳ್ಳಿಗಳು ಒಳಪಡುತ್ತವೆ.
ಈ ಏಳು ವೃತ್ತಗಳ 38 ಹಳ್ಳಿಗಳ ಆಡಳಿತಾತ್ಮಕ ಜವಾಬ್ದಾರಿಯನ್ನು ಪ್ರಸ್ತುತ ಇಬ್ಬರೇ ಗ್ರಾಮ ಲೆಕ್ಕಾಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಕುಮಾರ ನಾಯ್ಕ ಅವರು ಕಣಿವೆಬಿಳಚಿ, ಚಿರಡೋಣಿ, ಗುಡ್ಡದ ಕೋಮಾರನಹಳ್ಳಿ ಹಾಗೂ ದಾಗಿನಕಟ್ಟೆ ವೃತ್ತಗಳ ಹೊಣೆ ಹೊತ್ತಿದ್ದರೆ, ಮತ್ತೊಬ್ಬ ಅಧಿಕಾರಿ ರಶ್ಮಿ ರಾಥೋಡ್ ಅವರು ಬಸವಾಪಟ್ಟಣ, ಕೋಟೆಹಾಳ್ ಹಾಗೂ ಬೆಳಲಗೆರೆ ವೃತ್ತಗಳ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದ ಕಂದಾಯ ಆಡಳಿತಕ್ಕೆ ವೇಗ ತುಂಬಲು ಮತ್ತು ಸಾರ್ವಜನಿಕರ ಗೋಳನ್ನು ತಪ್ಪಿಸಲು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ತಕ್ಷಣವೇ ಹೆಚ್ಚುವರಿ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸಬೇಕಿದೆ.
ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಹಣಿ, ಮ್ಯುಟೇಶನ್, ಜಮೀನು ವ್ಯವಹಾರ, ಪಿಂಚಣಿ ಹಾಗೂ ಪ್ರಸ್ತುತ ರೈತರಿಗೆ ಅತ್ಯಂತ ಆವಶ್ಯಕವಿರುವ ಬೆಳೆ ನಷ್ಟ ಪರಿಹಾರದ ವರದಿ ಸಲ್ಲಿಕೆ ಸೇರಿ ಹತ್ತು ಹಲವು ಕೆಲಸಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳ ಸೇವೆ ಅತಿಮುಖ್ಯವಾಗಿದೆ. ಆದರೆ, ಒಬ್ಬೊಬ್ಬ ಅಧಿಕಾರಿಯು ಮೂರು-ನಾಲ್ಕು ವೃತ್ತಗಳ ಹೊಣೆ ಹೊತ್ತಿರುವುದರಿಂದ ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಕೆಲಸಗಳಿಗೂ ದಿನಗಟ್ಟಲೆ ಕಚೇರಿಗೆ ಅಲೆದಾಡಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದೂವರೆ-ಎರಡು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದು, ಬೆಳೆ ಪರಿಹಾರದ ವರದಿ ನೀಡುವ ಈ ಸಮಯದಲ್ಲಿ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ. ಇದರೊಂದಿಗೆ ಇಲಾಖೆಯ ವಿವಿಧ ಹೆಚ್ಚುವರಿ ಕೆಲಸಗಳ ಭಾರವೂ ಅಧಿಕಾರಿಗಳ ಮೇಲಿದೆ.
ಏಳು ವೃತ್ತಗಳಿಗೆ ಕನಿಷ್ಠ ಆರು ಮಂದಿ ಗ್ರಾಮ ಲೆಕ್ಕಾಧಿಕಾರಿಗಳ ಅಗತ್ಯವಿದೆ. ಬೆಳೆ ಪರಿಹಾರದ ವರದಿ ನೀಡುವ ಈ ಸಂದರ್ಭದಲ್ಲಿ ರೈತರು ಪರದಾಡುವಂತಾಗಿದ್ದು, ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು.ರವಿಕುಮಾರ್ ಯಲೋದಹಳ್ಳಿ, ರೈತ ಸಂಘದ ತಾಲೂಕು ಅಧ್ಯಕ್ಷ.
ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಚನ್ನಗಿರಿ ತಹಸೀಲ್ದಾರ್ ಅವರು ಶೀಘ್ರವೇ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸುವುದಾಗಿ ಭರವಸೆ ನೀಡಿದ್ದಾರೆ.ನೀಲಮ್ಮ ಉಪ ತಹಸೀಲ್ದಾರ್.