ಸ್ಮಾರ್ಟ್ಫೋನ್ನಲ್ಲಿ ನೋ ಇಂಟರ್ನೆಟ್ ಸಮಸ್ಯೆ
- ಮೊಬೈಲ್‌ನಲ್ಲಿ ನೆಟ್ವರ್ಕ್ ಫುಲ್ ಇದ್ರೂ ಸಿಗುತ್ತಿಲ್ಲವೇ ಅಂತರ್ಜಾಲ?
- ಫುಲ್ ನೆಟ್ ವರ್ಕ್ ಸಿಗ್ನಲ್ ಇದ್ದರೂ ಇಂಟರ್ನೆಟ್ ಸಮಸ್ಯೆ
- ನಿಮ್ಮ ಮೊಬೈಲ್ ಸೆಟ್ಟಿಂಗ್‌ನಲ್ಲಿ ಈ ಬದಲಾವಣೆ ಮಾಡಿ ನೋಡಿ
Internet Error: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಮನುಷ್ಯನ ಅವಿಭಾಜ್ಯ ಅಂಗವಾಗಿರುವ ಫೋನ್‌ನಲ್ಲಿ ನೆಟ್ ಇರಲೇಬೇಕಿದೆ. ಎಷ್ಟೇ ಅತ್ಯಾಧುನಿಕ ಫೀಚರ್ಗಳಿದ್ದರೂ 5ಜಿ ಸ್ಪೀಡ್ನ ಇಂಟರ್ನೆಟ್ ಸಿಗುತ್ತಿಲ್ಲ ಅಥವಾ ವರ್ಕ್ ಆಗದಿದ್ದರೆ ಬಳಕೆದಾರರ ಪಿತ್ತ ನೆತ್ತಿಗೇರುತ್ತದೆ. ಕೆಲ ನಿಮಿಷಗಳು ಇಂಟರ್ನೆಟ್ ಸಿಗದಿದ್ದರೆ ತಲೆಕೆಡಿಸಿಕೊಳ್ಳುವ ಜನರು, ಅದೇ ಒಂದು ಗಂಟೆಗೂ ಹೆಚ್ಚು ಸಮಯ ಸಿಗದೆ ಹೋದರಂತು ಕೇಳೋದೇ ಬೇಡ.
ಅನೇಕ ಟೆಲಿಕಾಮ್ ಕಂಪನಿಗಳು ನೀಡುವ ಜಿಬಿ ಡೇಟಾಗಳು ನಮ್ಮ ಜನರಿಗೆ ಸಾಲುವುದಿಲ್ಲ. ಅದಕ್ಕೆಂದೆ ಈಗ 5ಜಿ ನೆಟ್ವರ್ಕ್ಗಳಲ್ಲಿ ಅನ್ಲಿಮಿಟೆಡ್ ಆಫರ್ಗಳು ನಡೆಯುತ್ತಿವೆ. ಆರು ಇಂಚಿನ ಆಕರ್ಷಕ ಹಾಗೂ ದುಬಾರಿ ಫೋನ್ಗಳನ್ನು ಖರೀದಿಸುವ ಜನರು, ಅಂತೆಯೇ ಒಳ್ಳೆ ನೆಟ್ವರ್ಕ್ ಸಿಗುವ ಸಿಮ್ಗಳನ್ನು ಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಹೆಚ್ಚಿನ ಡೇಟಾ ಲಭ್ಯವಿರುವ ಆಫರ್ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೂ ಅಲ್ಲಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಪ್ರಸ್ತುತ ಕಾಲಘಟ್ಟದಲ್ಲಿ ಆನ್ಲೈನ್ ಶಾಪಿಂಗ್, ಡಿಜಿಟಲ್ ಪೇಮೆಂಟ್ಸ್, ವಿಡಿಯೋ ಕಾಲ್ ಮತ್ತು ಇತರ ಅಗತ್ಯಗಳಿಗೆ ಇಂಟರ್ನೆಟ್ ಬೇಕೇ ಬೇಕು. ಹೀಗಿರುವಾಗ, ನೆಟ್ವರ್ಕ್ ಫುಲ್ ಇದ್ದರೂ ಕೆಲವೊಮ್ಮೆ ಡೇಟಾ ವರ್ಕ್ ಆಗದಿರುವುದಕ್ಕೆ ನಿಮಗೆ ಗೊತ್ತಿರದ ಒಂದಷ್ಟು ಕಾರಣಗಳಿರುತ್ತವೆ. ಅದನ್ನು ಚೆಕ್ ಹಾಗೂ ಸರಿಪಡಿಸಿಕೊಳ್ಳಲು ಇಲ್ಲಿದೆ ನೋಡಿ ಸಿಂಪಲ್ ಸೆಟ್ಟಿಂಗ್ ಬದಲಾವಣೆ.
ಹೀಗೆ ಚೆಕ್ ಮಾಡಿ ನೋಡಿ...
ನಿಮ್ಮ ಮೊಬೈಲ್‌ನಲ್ಲಿ ಮೊದಲು ಡೇಟಾ ಆನ್ ಇದೆಯೇ ಎಂಬುದನ್ನು ಚೆಕ್ ಮಾಡಿ. ಈ ಸಮಸ್ಯೆಯು ಹೆಚ್ಚಾಗಿ ಪ್ರಿಪೇಯ್ಡ್ (ಇಂಟರ್ನೆಟ್ ಸಮಸ್ಯೆ) ಬಳಕೆದಾರರಿಗೆ ಕಾಡುತ್ತದೆ. ದೈನಂದಿನ ಡೇಟಾ ಮಿತಿ ನೋಡಿ. ಕೆಲವೊಮ್ಮೆ, ಇದು ಮುಗಿದಿದ್ದರೆ ಇಂಟರ್ನೆಟ್ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ನಿಮ್ಮ ಫೋನ್ ಸೆಟ್ಟಿಂಗ್‌ಗಳಲ್ಲಿ ಡೇಟಾ ರೋಮಿಂಗ್ ಅನ್ನು ಆಫ್ ಮಾಡಿದರೂ, ಇಂಟರ್ನೆಟ್ ಕಟ್ ಆಫ್ ಸಾಧ್ಯತೆಗಳಿರುತ್ತವೆ. ಇಂತಹ ಸಮಯದಲ್ಲಿ, ನಿಮ್ಮ ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ 'ಮೊಬೈಲ್ ಇಂಟರ್ನೆಟ್'ನಲ್ಲಿ ಡೇಟಾ ರೋಮಿಂಗ್ ಟಾಗಲ್ ಅನ್ನು ಆನ್ ಮಾಡಿ.
ಇಂಟರ್ನೆಟ್ ಲೋಡ್ ಆಗುತ್ತಿಲ್ಲ 10 ನಿಮಿಷಗಳ ಕಾಲ ಏರ್ಪ್ಲೇನ್ ಮೋಡ್ಗೆ ಹಾಕಿ, ಬಳಿಕ ಆಫ್ ಮಾಡಿ ನೋಡಿ. ಇಲ್ಲವೇ ತಕ್ಷಣವೇ ನಿಮ್ಮ ಫೋನ್ ಅನ್ನು ರೀ-ಸ್ಟಾರ್ಟ್ ಮಾಡಿ. ಆಗ ನೆಟ್ವರ್ಕ್ ಸಮಸ್ಯೆಗಳು ಬಗೆಹರಿಯುತ್ತದೆ. ಇದನ್ನೂ ಮೀರಿ ಲಭ್ಯವಾಗುತ್ತಿಲ್ಲ ಎಂದಾದರೆ ನಿಮ್ಮ ಹತ್ತಿರದ ಟೆಲಿಕಾಂ ಆಪರೇಟರ್‌ನ ಗ್ರಾಹಕ ಸೇವೆಯನ್ನು ಸಂಪರ್ಕಿಸುವುದು ಅಥವಾ ಕಚೇರಿಗೆ ಭೇಟಿ ಕೊಡುವುದು ಉತ್ತಮ,(ಏಜೆನ್ಸೀಸ್).