cental jail 
ವಿಜಯವಾಣಿ ಸುದ್ದಿಜಾಲ

ಪರಪ್ಪನ ಅಗ್ರಹಾರ ಜೈಲಲ್ಲಿ ನಿಲ್ಲದ ಅಕ್ರಮ

ಕೈದಿಗಳ ಬ್ಯಾರಕ್‌ನಲ್ಲಿ ಮತ್ತೇ 1 ಮೊಬೈಲ್, 3 ಸಿಮ್, ₹8,500 ನಗದು ಪತ್ತೆ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಪತ್ತೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದೀಗ ಮತ್ತೇ 3 ಸಿಮ್‌ಗಳು, 1 ೆನ್ ಹಾಗೂ 8,500 ನಗದು ಪತ್ತೆಯಾಗಿದೆ.

ಜೈಲು ಅಧೀಕ್ಷಕ ಬಿ.ಎಂ. ಕೊಟ್ರೇಶ್ ನೀಡಿದ ದೂರಿನ ಮೇರೆ ಇಬ್ಬರು ಸಜಾ ಬಂದಿಯಾದ ಮಾಲತೇಶ್ ಹಾಗೂ ಮೊಹಮ್ಮದ್ ನವಾಜ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಸೆ.28ರಂದು ಬೆಳಗ್ಗೆ 11ರಿಂದ 1.15ರ ವರೆಗೆ ಜೈಲರ್ ನೇತೃತ್ವದಲ್ಲಿ ಕಾರಾಗೃಹದ ಅಡುಗೆ ಮನೆ ವಿಭಾಗದ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸಲಾಗಿತ್ತು. ಆಗ ಅಲ್ಲಿನ 7ನೇ ಕೊಠಡಿಯ ಶೌಚಗೃಹದಲ್ಲಿ 8,500 ರೂ.ಗಳು ಸಿಕ್ಕಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮರುದಿನ ಸೆ.29ರ ಮಧ್ಯಾಹ್ನ 1ರಿಂದ 2 ಗಂಟೆ ವರೆಗೆ ಮತ್ತೇ ಕೆಲ ಬ್ಯಾರಕ್‌ಗಳ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಟವರ್-2 ವಿಭಾಗದ ಸಿ-ಬ್ಯಾರಕ್‌ನ 4ನೇ ಕೊಠಡಿಯಲ್ಲಿದ್ದ ಸಜಾ ಬಂದಿ ಮಾಲತೇಶ್‌ನ ಬ್ಯಾಗ್‌ನಲ್ಲಿ ಸಿಮ್ ಇಲ್ಲದ ೆನ್ ಸಿಕ್ಕಿದೆ. 5ನೇ ಕೊಠಡಿಯಲ್ಲಿದ್ದ ಮತ್ತೊಬ್ಬ ಸಜಾ ಬಂದಿ ಮೊಹಮ್ಮದ್‌ನ ಹಾಸಿಗೆ ಕೆಳಭಾಗದಲ್ಲಿ 3 ಸಿಮ್‌ಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ವಸ್ತುಗಳು ಕಾರಾಗೃಹದ ಒಳಗಡೆ ಸಾಗಿಸಿದವರಾರು, ಇದಕ್ಕೆ ಯಾರು ಸಹಕರಿಸಿದ್ದಾರೆ ಮತ್ತು ಈ ನಿಷೇಧಿತ ವಸ್ತುಗಳನ್ನು ಜೈಲಿನಲ್ಲಿ ಯಾರು ಬಳಕೆ ಮಾಡುತ್ತಿದ್ದರು ಎಂಬುದನ್ನು ತಿಳಿಯಲು ಪೊಲೀಸರು ಮುಂದಾಗಿದ್ದು, ಈ ಸಂಬಂಧ ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಗಿ ಭದ್ರತೆಯಿದ್ದರೂ ಅಕ್ರಮ ನಿಲ್ಲುತ್ತಿಲ್ಲ..!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಕ್ಕೆ ಕೊನೆ ಇಲ್ಲದಂತಾಗಿದೆ. ಜೈಲಿನಲ್ಲಿ ರಾಜಾತಿಥ್ಯದಿಂದ ಹಿಡಿದು ಎಲ್ಲ ರೀತಿಯ ಅಕ್ರಮಗಳ ಬಗ್ಗೆ ಪ್ರಕರಣಗಳು ದಾಖಲಾಗಿದ್ದರೂ ಸಹ ಈ ಅಕ್ರಮ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ಸಂಪೂರ್ಣ ಸೋತಿದ್ದಾರೆ. ಕೆಲ ದಿನಗಳ ಹಿಂದೆ ಅಪರಾಧಿ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಸೇರಿ ಕೆಲ ವಸ್ತುಗಳು ಪತ್ತೆಯಾಗಿದ್ದವು. ಈ ಸಂಬಂಧ ಅವರು ತನಿಖೆಯನ್ನೂ ಎದುರಿಸಿದ್ದಾರೆ.