Horned lizards: ಸಾಮಾನ್ಯವಾಗಿ ಶತ್ರುಗಳಿಂದ ತಪ್ಪಿಸಿಕೊಳ್ಳಲು ಹಲ್ಲಿಗಳು ತಮ್ಮ ಬಾಲವನ್ನು ತಾವೇ ಕತ್ತರಿಸಿಕೊಳ್ಳುವುದರ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ಎದುರಾಳಿ ದೈತ್ಯ ಪ್ರಾಣಿಯೊಂದು ತನ್ನನ್ನು ನುಂಗಿ ಹಾಕಲು ಬಂದಿದೆ ಎಂದು ತಿಳಿದಾಗ ಎಂಥದ್ದೇ ಜೀವಿಯಾಗಲಿ, ಕೂಡಲೇ ಜೀವ ಉಳಿಸಿಕೊಳ್ಳಲು ಏನು ಬೇಕೋ ಅದನ್ನೆಲ್ಲ ಮಾಡುತ್ತದೆ. ಆದರೆ, ಇಲ್ಲೊಂದು ಜೀವಿ ತನ್ನ ಶತ್ರುಗಳನ್ನು ಒಂದು ಹೆಜ್ಜೆ ಮುಂದೆ ಬರಲು ಬಿಡದಿರುಲು ಕೇವಲ ತಮ್ಮ ಕಣ್ಣುಗಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ ಎಂಬುದು ವಿಚಿತ್ರ.
ತಮ್ಮ ಕಣ್ಣುಗಳಿಂದ ನೀರು ಹರಿಸುವ ಬದಲು ರಕ್ತವನ್ನೇ ಚಿಮ್ಮಿಸುವ ಈ ಹಾರ್ನ್ಡ್ ಲಿಜರ್ಡ್ (ಹಲ್ಲಿ) ಬಗ್ಗೆ ಎಂದಾದರೂ ಕೇಳಿದ್ದೀರಾ? ಇದು ಭಯಾನಕ ಸಿನಿಮಾವೊಂದರ ದೃಶ್ಯದಂತೆ ಕಾಣಿಸಬಹುದು. ಆದರೆ, ಪ್ರಕೃತಿಯಲ್ಲಿ ಬೆರೆತುಹೋಗಿರುವ ಈ ಜೀವಿ ನಿಜವಾಗಿಯೂ ತನ್ನ ರಕ್ತವನ್ನು ಹೊರಬಿಡುತ್ತದೆ. ಉತ್ತರ ಅಮೆರಿಕದ ಮರುಭೂಮಿಗಳಲ್ಲಿ ಕಂಡುಬರುವ 'ಹಾರ್ನ್ಡ್ ಲಿಜರ್ಡ್' ಪ್ರಭೇದಗಳು ಈ ವಿಚಿತ್ರ ರಕ್ಷಣಾ ತಂತ್ರಗಾರಿಕೆಯನ್ನು ವೈರಿಗಳ ಎದುರು ಪ್ರದರ್ಶಿಸುತ್ತವೆ.
ತಮ್ಮ ದೇಹದ ಗಾತ್ರಕ್ಕಿಂತ ದೊಡ್ಡದಾದ ಕೊಂಬುಗಳು ಮತ್ತು ಮುಳ್ಳುಗಳನ್ನು ಹೊಂದಿರುವ ಈ ಹಲ್ಲಿಗಳು, ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಹಲವಾರು ತಂತ್ರಗಳನ್ನು ಬಳಸುತ್ತವೆ. ಅವುಗಳ ಮೊದಲ ರಕ್ಷಣಾ ವಿಧಾನವೆಂದರೆ, ತಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಬೆರೆತುಹೋಗುವುದು ( ಅಂದರೆ ಅದರ ಬಣ್ಣಕ್ಕೆ ಹೊಂದಿಕೊಳ್ಳುವುದು). ಅಪಾಯ ಸಮೀಪಿಸಿದಾಗ, ಅವು ತಮ್ಮ ದೇಹವನ್ನು ಉಬ್ಬಿಸಿ ದೊಡ್ಡದಾಗಿ ಕಾಣುವಂತೆ ಮಾಡುತ್ತವೆ ಮತ್ತು ತಮ್ಮ ಕೊಂಬುಗಳನ್ನು ತೋರಿಸಲು ತಲೆಯನ್ನು ಕೆಳಕ್ಕೆ ಬಗ್ಗಿಸುತ್ತವೆ.
ಎದುರಾಳಿ ವೈರಿ ಅಥವಾ ತನ್ನನ್ನು ಬಲಿ ಪಡೆಯಲು ಬಂದಿರುವ ಜೀವಿ ಇದ್ಯಾವುದಕ್ಕೂ ಬಗ್ಗದಿದ್ದಾಗ, ತನ್ನ ಕೊನೆ ಹಾಗೂ ಬಲಿಷ್ಠ ಅಸ್ತ್ರವಾದ ರಕ್ತ ಸುರಿಸುವ ವಿಚಿತ್ರವಾದ ಅಸ್ತ್ರವನ್ನು ಬಳಸುತ್ತವೆ. ಕಣ್ಣುಗಳ ಹತ್ತಿರವಿರುವ ಭಾಗದಿಂದ ರಕ್ತವನ್ನು ಚಿಮ್ಮಿಸುವ ಈ ಹಲ್ಲಿಗಳು, ಕಣ್ಣುಗಳ ಸುತ್ತಲೂ ವಿಶೇಷ ರಕ್ತನಾಳ ವ್ಯವಸ್ಥೆಯನ್ನು ಹೊಂದಿವೆ. ಶತ್ರುವಿನ ಇರುವಿಕೆಯನ್ನು ಗ್ರಹಿಸಿದಾಗ ಅಥವಾ ನೋಡಿದಾಗ, ಇವು ಸೈನಸ್‌ಗಳಲ್ಲಿ (ಕುಳಿಗಳಲ್ಲಿ) ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆಗ, ಸಣ್ಣ ರಕ್ತನಾಳಗಳಲ್ಲಿ ಒತ್ತಡ ಹೆಚ್ಚಾಗಿ, ಕಣ್ಣಿನ ಸುತ್ತಲಿನ ಭಾಗದಿಂದ ರಕ್ತವು ದಿಢೀರ್ ರಭಸವಾಗಿ ಹೊರಕ್ಕೆ ಚಿಮ್ಮುತ್ತದೆ. ಕೆಲವು ಪ್ರಭೇದಗಳು ಸುಮಾರು ಒಂದು ಮೀಟರ್ ದೂರದವರೆಗೆ ಹಾರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಯು.ಎಸ್. ನ್ಯಾಷನಲ್ ಪಾರ್ಕ್ ಸರ್ವಿಸ್ ತಿಳಿಸಿದೆ.
ಈ ರಕ್ಷಣಾ ವಿಧಾನದ ಹಿಂದಿನ ರಹಸ್ಯ ಕೇವಲ ರಕ್ತವನ್ನು ನೋಡಿ ಶತ್ರುವನ್ನು ಹೆದರಿಸುವುದಲ್ಲ. ಹಾರ್ನ್ಡ್ ಲಿಜರ್ಡ್‌ಗಳ ಮುಖ್ಯ ಆಹಾರವೆಂದರೆ ಇರುವೆಗಳು. ಈ ಇರುವೆಗಳಲ್ಲಿರುವ ಕೆಲವು ರಾಸಾಯನಿಕಗಳು ಹಲ್ಲಿಯ ರಕ್ತಕ್ಕೆ ಪರಭಕ್ಷಕಗಳಿಗೆ ಅಹಿತಕರವಾದ ರುಚಿಯನ್ನು ನೀಡುತ್ತವೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಹೀಗಾಗಿ, ಶತ್ರುವಿನ ಮುಖಕ್ಕೆ ಅನಿರೀಕ್ಷಿತವಾಗಿ ಚಿಮ್ಮುವ ರಕ್ತ ಮತ್ತು ಅದರ ಕೆಟ್ಟ ರುಚಿ, ಇವೆರಡೂ ಸೇರಿ ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತವೆ. ಹಲ್ಲಿಯು ತೀವ್ರ ಅಪಾಯದ ಅಂತಿಮ ಹಂತದಲ್ಲಿದ್ದಾಗ ಮಾತ್ರ ಸಾಮಾನ್ಯವಾಗಿ ಈ ಟೆಕ್ನಿಕ್ ಅನ್ನು ಬಳಸುತ್ತದೆ. ಅಂದರೆ, ಇದು ಅದರ ಕೊನೆಯ ರಕ್ಷಣಾ ವಿಧಾನಗಳಲ್ಲಿ ಒಂದು ಎನ್ನಲಾಗಿದೆ.
ಇದು ಮೇಲ್ನೋಟಕ್ಕೆ ಭಯಾನಕ ಅನಿಸಿದರೂ, ಈ ರಕ್ಷಣಾ ವಿಧಾನವು ಹುಟ್ಟುವಾಗಲೇ ಹಲ್ಲಿಗಳಿಗೆ ಸಿಕ್ಕಿರುವ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಇದು ಕಣ್ಣಿನ ಹತ್ತಿರವಿರುವ ವಿಶೇಷ ಸೈನಸ್‌ಗಳಲ್ಲಿ ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ ಮತ್ತು ರಕ್ತವನ್ನು ಹೊರಬಿಡುತ್ತದೆ. ಇದರಿಂದ ಯಾವುದೇ ಗಂಭೀರವಾದ ಶಾಶ್ವತ ಗಾಯವಾಗುತ್ತದೆ ಎಂದು ಸಂಶೋಧನೆಗಳಲ್ಲಿ ಕಂಡುಬಂದಿಲ್ಲ.
ಪ್ರಕೃತಿಯಲ್ಲಿ ಬದುಕುಳಿಯಲು ಸಕಲ ಜೀವರಾಶಿಗಳು ಹೊಂದಿರುವ ವಿಶೇಷ ಹಾಗೂ ವಿಚಿತ್ರ ಸಾಮರ್ಥ್ಯ ಎಂಬುದಕ್ಕೆ ಇದೊಂದು ಅದ್ಭುತ ನಿದರ್ಶನ. ತಮ್ಮನ್ನು ತಿಂದು ಹಾಕಲು ಬರುವ ದೈತ್ಯ ಜೀವಿಗಳಿಂದ ತಪ್ಪಿಸಿಕೊಳ್ಳಲು ಕೇವಲ ಗಾತ್ರ ಅಥವಾ ಬಲದ ಅಗತ್ಯ ಮಾತ್ರವಲ್ಲ, ಕೆಲವೊಮ್ಮೆ ತಮ್ಮಲ್ಲೇ ಇರುವ ಇಂತಹ ಸಾಮರ್ಥ್ಯವನ್ನು ಆಯುಧವಾಗಿ ಬಳಸಬಹುದು ಎಂಬುದಕ್ಕೆ ಈ ಹಾರ್ನ್ಡ್ ಲಿಜರ್ಡ್ ಜ್ವಲಂತ ಸಾಕ್ಷಿ ಎಂದೇ ಹೇಳಬಹುದು,(ಏಜೆನ್ಸೀಸ್).