ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಯೋಜಿಸಿರುವ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಶ್ರೀಶೈಲ ಜಗದ್ಗುರುಗಳು, ಸಿಂಧಗಿ, ಎಡೆಯೂರು, ಮಳಲಿ ಮಠದ ಶ್ರೀಗಳು, ಶಂಕರ್ ಬಿದರಿ ಮತ್ತಿತರರು ಉಪಸ್ಥಿತರಿದ್ದರು.  
ವಿಜಯವಾಣಿ ಸುದ್ದಿಜಾಲ

ಸಮನ್ವಯದಿಂದ ಸಮಾಜ ಸದೃಢವಾಗಲು ಸಾಧ್ಯ; ಶ್ರೀಶೈಲ ಜಗದ್ಗುರುಗಳ ಅಭಿಮತ

ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ

ಬೆಂಗಳೂರು : ಸಮಾಜದಲ್ಲಿ ಎದ್ದಿರುವ ಒಡಕಿನ ಧ್ವನಿಯನ್ನು ನಿವಾರಿಸಿ, ಸದೃಢ ಸಮಾಜವನ್ನು ನಿರ್ಮಾಣ ಮಾಡುವ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಸಮನ್ವಯ ಬಹಳ ಮುಖ್ಯ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿರುವ 2 ದಿನಗಳ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇತ್ತಿಚೆಗೆ ಆರಂಭವಾಗಿರುವ ಪತ್ಯೇಕತೆಯ ಕೂಗಿಗೆ ಯಾವುದೇ ಆಧಾರವಿಲ್ಲ. ಅಂತಹ ಕೂಗನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಸಮನ್ವಯದ ಅಗತ್ಯವಿದೆ. ಭಕ್ತರಲ್ಲಿ ಗುರು-ವಿರಕ್ತರು ಒಂದಾಗಬೇಕೆಂಬ ಹೆಬ್ಬಯಕೆ ಇದೆ. ಈ ನಿಟ್ಟಿನಲ್ಲಿ ಶಿವಾಚಾರ್ಯ ಸಂಸ್ಥೆ ತೆಗೆದುಕೊಳ್ಳುವ ನಿರ್ಣಯ ಮತ್ತು ನೀಡುವ ಸಲಹೆ ಬಹಳ ಮುಖ್ಯವಾದುದ್ದು. ವಿರಕ್ತ ಮಠಗಳಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ, ಪಂಚಪೀಠಗಳಲ್ಲಿ ಬಸವಪುರಾಣದ ಪ್ರವಚನ ಮಾಡಲು ಎರಡೂ ಪರಂಪರೆಯ ಮಠಗಳು ಮುಂದಾಗಬೇಕೆಂಬ ಸಮಾಜದ ಮುಖಂಡರು ಸಲಹೆ ಔಚಿತ್ಯಪೂರ್ಣವಾಗಿದೆ. ಈ ಬಗ್ಗೆ ಎರಡೂ ಕಡೆಯವರು ಸಹಮತ ವ್ಯಕ್ತಪಡಿಸಿ ಮುನ್ನಡೆಯಬೇಕು ಎಂದು ಶ್ರೀಶೈಲ ಜಗದ್ಗುರುಗಳು ವಿವರಿಸಿದರು.

ಆಶಯ ಭಾಷಣ ಮಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಿ, ಸಮುದಾಯದ ರಾಜಕೀಯ ಶಕ್ತಿಯನ್ನು ಒಡೆಯುವ ಷಡ್ಯಂತ ನಡೆದಿದೆ. ಈ ಬಗ್ಗೆ ಸಮಾಜ ಎಚ್ಚರ ವಹಿಸಬೇಕು. ಮಹಾಸಭೆಯಿಂದ ಇಂತಹ ಗಂಭೀರ ವಿಷಯಗಳ ಚಿಂತನೆಗೆ ಪ್ರತಿವರ್ಷ ಧರ್ಮ ಸಂಸತ್ ನಡೆಸುವ ಅಗತ್ಯವಿದೆ ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿಂಧಗಿ ಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮಿಗಳು, ಗೌರವಾಧ್ಯಕ್ಷರಾದ ಎಡೆಯೂರಿನ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು, ಮುಕ್ತಿಮಂದಿರದ ಶ್ರೀವಿಮಲ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಉಪಾಧ್ಯಕ್ಷರಾದ ಹುಕ್ಕೇರಿ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಮಹಾರಾಷ್ಟ್ರದ ನಾಗಣಸೂರ ಶ್ರೀಕಂಠ ಶಿವಾಚಾರ್ಯ ಸ್ವಾಮಿಗಳು, ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಮಳಲಿಮಠದ ಶ್ರೀನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಎಂ.ಚಂದರಗಿ, ವಿಭೂತಿಪುರ, ಶಿವಗಂಗೆ, ತೊಗರ್ಸಿ, ಮಾಗಣಗೆರೆ ಮತ್ತಿತರ ಮಠಗಳ ಶ್ರೀಗಳು ಉಪಸ್ಥಿತರಿದ್ದರು. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯದಿಂದ 150ಕ್ಕೂ ಹೆಚ್ಚು ಮಠಾಧೀಶರು ಆಗಮಿಸಿದ್ದರು. ಅಭಾವೀಮ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಗಾನಸುಧೆಯ ಶಿವಶಂಕರ್ ಶಾಸಿಗಳು ಮತ್ತಿತರರು ಪಾಲ್ಗೊಂಡಿದ್ದರು.

ಸಮ್ಮೇಳನಾಧ್ಯಕ್ಷ ಡಾ.ಸಿ.ಶಿವಕುಮಾರಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಚಿಂತನ ಗೋಷ್ಠಿಯಲ್ಲಿ ವಿದ್ವಾಂಸರಾದ ಮೃತ್ಯುಂಜಯ ರುಮಾಲೆ, ಕೋ.ರಂ. ಬಸವರಾಜ್, ರವಿ ಹಂಜ್, ಚೌಕಿಮಠ ಮತ್ತಿತರರು ಉಪನ್ಯಾಸ ನೀಡಿದರು.

ಸದಾಚಾರ, ಸಿದ್ಧಾಂತ ಮತ್ತು ಮೌಲ್ಯಗಳ ಬುನಾದಿ ಮೇಲೆ ನಡೆಯುತ್ತಿರುವ ನಮ್ಮ ಧರ್ಮವನ್ನು ಪ್ರಗತಿಪರ ಹಾಗೂ ವೈಚಾರಿಕತೆಯ ಹೆಸರಿನಲ್ಲಿ ಬದಲಿಸುವ ಪ್ರಯತ್ನಗಳೂ ನಡೆಯುತ್ತಿರುವುದು ದುರದೃಷ್ಟಕರ. ಸರ್ಕಾರದಿಂದ ಮಾಡಲು ಸಾಧ್ಯವಾಗದ ಕಾರ್ಯವನ್ನು ವೀರಶೈವ ಮಠಗಳು ಮಾಡಿವೆ. ವೀರಶೈವ ಸಮಾಜದ ಒಗ್ಗಟ್ಟಿನಲ್ಲಿ ರಾಜ್ಯದ ಅಭಿವೃದ್ಧಿ ಅಡಗಿದೆ.
ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಭಾನುವಾರ ಧರ್ಮ ಸಂರಕ್ಷಣಾ ಸಮ್ಮೇಳನ

ಬೆಳಗ್ಗೆ 10.30ಕ್ಕೆ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವು ಜಗದ್ಗುರು ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವರಾದ ಈಶ್ವರ ಖಂಡ್ರೆ, ವಿಜಯಾನಂದ ಕಾಶಪ್ಪನವರ್, ಅಬ್ಬೆತುಮಕೂರಿನ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮಿಗಳು, ಜಾಲಹಳ್ಳಿಯ ಜಯಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.