ಬೆಂಗಳೂರು : ಭಾರತೀಯ ಮಾನಕಗಳ ಬ್ಯೂರೋ (ಬಿಐಎಸ್) ಹಾಗೂ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (ಸಿಸಿಆರ್‌ಎಎಸ್) ನಡುವಿನ ಒಪ್ಪಂದದಡಿ ಆಯುರ್ವೇದ ವಿಜ್ಞಾನಿಗಳಿಗಾಗಿ ಸಂವೇದನಾ ಕಾರ್ಯಕ್ರಮ ಬೆಂಗಳೂರಿನ ಸೆಂಟ್ರಲ್ ಆಯುರ್ವೇದ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಇತ್ತೀಚೆಗೆ ನಡೆಯಿತು.
ದೇಶದ ವಿವಿಧ ಸಿಸಿಆರ್‌ಎಎಸ್ ಸಂಸ್ಥೆಗಳ ವಿಜ್ಞಾನಿಗಳು, ಸಂಶೋಧಕರು ಹಾಗೂ ಆಡಳಿತಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಯುರ್ವೇದ ಕ್ಷೇತ್ರದಲ್ಲಿ ಗುಣಮಟ್ಟ, ಸುರಕ್ಷತೆ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಮಾನಕೀಕರಣದ ಅಗತ್ಯತೆ ಮತ್ತು ಮಹತ್ವದ ಕುರಿತು ಚರ್ಚಿಸಲಾಯಿತು.
ಸಿಸಿಆರ್‌ಎಎಸ್ ಮಹಾನಿರ್ದೇಶಕ ರಬಿನಾರಾಯಣ ಆಚಾರ್ಯ ಮಾತನಾಡಿ, ಆಯುರ್ವೇದ ವಿಜ್ಞಾನಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಮಾನದಂಡಗಳನ್ನು ರೂಪಿಸುವಲ್ಲಿ ವಿಜ್ಞಾನಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಮಾನಕೀಕರಣ ಪ್ರಕ್ರಿಯೆಯ ಸಮಗ್ರ ಅರಿವು ಹೊಂದಿರುವ ವಿಜ್ಞಾನಿಗಳು ತಮ್ಮ ಕ್ಷೇತ್ರದಲ್ಲಿ ಮಾನದಂಡಗಳ ರೂಪಿಸುವಿಕೆಗೆ ಪರಿಣಾಮಕಾರಿ ಕೊಡುಗೆ ನೀಡಬೇಕು ಎಂದರು.
ಆಯುಷ್ ವಿಭಾಗದ ಮುಖ್ಯಸ್ಥೆ ಸೃಷ್ಟಿ ದೀಕ್ಷಿತ್ ಮಾತನಾಡಿ, ಆಯುರ್ವೇದದ ಗುಣಮಟ್ಟ ಮತ್ತು ಸುರಕ್ಷತೆಯ ಮೇಲಿನ ವಿಶ್ವಾಸಕ್ಕೆ ಮಾನದಂಡಗಳು ಅಡಿಪಾಯವಾಗಿದ್ದು, ಜಾಗತಿಕ ಮಟ್ಟದಲ್ಲಿ ಆಯುರ್ವೇದಕ್ಕೆ ಮಾನ್ಯತೆ ದೊರೆಯಲು ಇದು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ತಾಂತ್ರಿಕ ಅಧಿವೇಶನದಲ್ಲಿ ಬಿಐಎಸ್‌ನ ನೆಹಾ ಯಾದವ್, ಆಯುಷ್ ವಿಭಾಗದ ಡಾ. ರಾಘವೇಂದ್ರ ನಾಯಕ್ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಬಿಐಎಸ್ ಸಿಸಿಆರ್‌ಎಎಸ್ ಒಪ್ಪಂದದ ವ್ಯಾಪ್ತಿ, ಮಾನದಂಡ ರೂಪಿಸುವ ಪ್ರಕ್ರಿಯೆ, ಬಿಐಎಸ್‌ನ ಡಿಜಿಟಲ್ ಉಪಕ್ರಮಗಳು ಹಾಗೂ ಆಯುರ್ವೇದ ಮತ್ತು ಯೋಗ ಕ್ಷೇತ್ರದ ಅಂತಾರಾಷ್ಟ್ರೀಯ ಮಾನದಂಡಗಳ ಕುರಿತು ವಿವರಿಸಲಾಯಿತು.
ನಂತರ ನಡೆದ ಸಾರ್ವಜನಿಕ ಸಂವಾದ ಚರ್ಚೆಯಲ್ಲಿ ಮುಂದಿನ ಕಾರ್ಯಯೋಜನೆ, ಅಂತರ್‌ಶಿಸ್ತೀಯ ಸಂಶೋಧನೆ, ವಿಜ್ಞಾನಿಗಳ ಸಾಮರ್ಥ್ಯವರ್ಧನೆ ಹಾಗೂ ಆಯುರ್ವೇದ ಜ್ಞಾನವನ್ನು ಅಧಿಕೃತ ಮಾನದಂಡಗಳ ಚೌಕಟ್ಟಿಗೆ ಅಳವಡಿಸುವ ಕುರಿತು ವಿಚಾರ ವಿನಿಮಯ ನಡೆಯಿತು.