India 
ವಿಜಯವಾಣಿ ಸುದ್ದಿಜಾಲ

2025 ಭಾರತದ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯ ಐತಿಹಾಸಿಕ ವರ್ಷ: ಕೇಂದ್ರ ಸರ್ಕಾರ

ನವದೆಹಲಿ: 2025ನೇ ವರ್ಷವು ಭಾರತದ ಇತಿಹಾಸದಲ್ಲಿ ಒಂದು ಮಹತ್ವದ 'ಸುಧಾರಣಾ ಪರ್ವ'ವಾಗಿ ದಾಖಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ದೇಶದ ಆರ್ಥಿಕತೆ, ಆಡಳಿತ ಮತ್ತು ಸಾಮಾಜಿಕ ಭದ್ರತಾ ಚೌಕಟ್ಟನ್ನು ಆಮೂಲಾಗ್ರವಾಗಿ ಬದಲಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್ ಮತ್ತು ಹೊಸ ಕಾನೂನು

ಈ ವರ್ಷದ ಬಜೆಟ್ ಮಧ್ಯಮ ವರ್ಗದ ಜನರಿಗೆ ದೊಡ್ಡ ಉಡುಗೊರೆ ನೀಡಿದೆ. 12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸುವ ಮೂಲಕ ಜನರ ಕೈಯಲ್ಲಿ ಹೆಚ್ಚಿನ ಹಣ ಉಳಿಯುವಂತೆ ಮಾಡಲಾಗಿದೆ. ದಶಕಗಳ ಹಳೆಯ 1961ರ ಆದಾಯ ತೆರಿಗೆ ಕಾಯ್ದೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ಅತ್ಯಾಧುನಿಕ ಹಾಗೂ ಸರಳವಾದ 'ಆದಾಯ ತೆರಿಗೆ ಕಾಯ್ದೆ 2025' ಅನ್ನು ಜಾರಿಗೆ ತರಲಾಗಿದೆ. ಇದು ತೆರಿಗೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದೆ.

MSME ಮತ್ತು ಕಾರ್ಮಿಕ ಕಲ್ಯಾಣ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (MSME) ಉತ್ತೇಜಿಸಲು ವಹಿವಾಟು ಮಿತಿಗಳನ್ನು ವಿಸ್ತರಿಸಲಾಗಿದ್ದು, ಕೇಂದ್ರ ಸಚಿವಾಲಯಗಳು ಶೇ. 25ರಷ್ಟು ಖರೀದಿಯನ್ನು ಇವುಗಳಿಂದಲೇ ಮಾಡಬೇಕೆಂದು ಕಡ್ಡಾಯಗೊಳಿಸಲಾಗಿದೆ. ಇನ್ನು, ದಶಕಗಳಿಂದ ಬಾಕಿ ಉಳಿದಿದ್ದ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸರಳ ಸಂಹಿತೆಗಳಾಗಿ ವಿಲೀನಗೊಳಿಸಲಾಗಿದೆ. ಇದರಿಂದ ಗಿಗ್ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಲಭ್ಯವಾಗುವಂತಾಗಿದೆ.

ಗ್ರಾಮೀಣಾಭಿವೃದ್ಧಿಯಲ್ಲಿ ಹೊಸ ಪರ್ವ

MGNREGA ಯೋಜನೆಯನ್ನು 'VB-G RAM G' ಕಾಯ್ದೆಯಾಗಿ ಮರುನಾಮಕರಣ ಮಾಡಲಾಗಿದ್ದು, ಕೆಲಸದ ದಿನಗಳನ್ನು 125ಕ್ಕೆ ಹೆಚ್ಚಿಸಲಾಗಿದೆ. ಈ ಯೋಜನೆಯಲ್ಲಿ ಪಾರದರ್ಶಕತೆ ತರಲು AI ಮೇಲ್ವಿಚಾರಣೆ ಮತ್ತು ಬಯೋಮೆಟ್ರಿಕ್ ಹಾಜರಾತಿಯನ್ನು ಅಳವಡಿಸಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ 60:40ರ ಧನಸಹಾಯ ಅನುಪಾತವನ್ನು ನಿಗದಿಪಡಿಸುವ ಮೂಲಕ ರಾಜ್ಯಗಳ ಹೊಣೆಗಾರಿಕೆಯನ್ನು ಹೆಚ್ಚಿಸಲಾಗಿದೆ.

ಉದ್ಯಮ ಮತ್ತು ವಿದೇಶಿ ಹೂಡಿಕೆ

ವಿಮಾ ವಲಯದಲ್ಲಿ ಶೇ. 100ರಷ್ಟು ವಿದೇಶಿ ನೇರ ಹೂಡಿಕೆಗೆ (FDI) ಅವಕಾಶ ನೀಡುವ ಮೂಲಕ 'ಸಬ್ಕಾ ಬಿಮಾ ಸಬ್ಕಿ ರಕ್ಷಾ' ಮಂತ್ರಕ್ಕೆ ಬಲ ತುಂಬಲಾಗಿದೆ. ಸಮುದ್ರಯಾನ ಕ್ಷೇತ್ರವನ್ನು ಆಧುನೀಕರಿಸಲು ಐದು ಹೊಸ ಕಡಲ ಕಾನೂನುಗಳನ್ನು ತರಲಾಗಿದ್ದು, ಇದು ಲಾಜಿಸ್ಟಿಕ್ಸ್ ವೆಚ್ಚವನ್ನು ವಾರ್ಷಿಕ 10,000 ಕೋಟಿಯಷ್ಟು ಉಳಿಸುವ ನಿರೀಕ್ಷೆಯಿದೆ.

ಜಾಗತಿಕ ವ್ಯಾಪಾರ ಮತ್ತು ಶಿಕ್ಷಣ

ಒಮಾನ್, ಯುಕೆ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳೊಂದಿಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಪರಮಾಣು ಶಕ್ತಿ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡುವ 'ಶಾಂತಿ ಕಾಯ್ದೆ' ಮತ್ತು ಉನ್ನತ ಶಿಕ್ಷಣಕ್ಕಾಗಿ ಏಕ ನಿಯಂತ್ರಕವನ್ನು ತರುವ 'ವಿಕಸಿತ್ ಭಾರತ್ ಶಿಕ್ಷಾ ಅಧಿಷ್ಠಾನ ಮಸೂದೆ'ಗಳು 2047ರ ಸಮೃದ್ಧ ಭಾರತದ ಕನಸಿಗೆ ಬಲವಾದ ಅಡಿಪಾಯ ಹಾಕಿವೆ.
ಒಟ್ಟಾರೆಯಾಗಿ, 2025ರ ಈ ಸುಧಾರಣೆಗಳು ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿಯಾಗಿ ರೂಪಿಸುವಲ್ಲಿ ಮತ್ತು ಸಾಮಾನ್ಯ ಜನರ ಜೀವನಮಟ್ಟವನ್ನು ಸುಧಾರಿಸುವಲ್ಲಿ ಮೈಲಿಗಲ್ಲಾಗಿವೆ ಎಂದು ಕೇಂದ್ರ ಸಮರ್ಧಿಸಿಕೊಂಡಿದೆ,(ಏಜೆನ್ಸೀಸ್​).