ನೈಜ ಘಟನೆಯಾಧಾರಿತ ಸಿನಿಮಾ, ವೆಬ್ಸರಣಿಗಳ ಮೂಲಕವೇ ಬಾಲಿವುಡ್ನಲ್ಲಿ ಛಾಪು ಮೂಡಿಸಿರುವ ಹೆಗ್ಗಳಿಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಲ್ ಮೆಹ್ತಾಗೆ ಸಲ್ಲುತ್ತದೆ. "ಶಾಹಿದ್', "ಅಲಿಘಡ್', "ಒಮೆರ್ಟಾ' ಚಿತ್ರಗಳು ಸೇರಿ "ಗಾಂಧಿ', "ಸ್ಕೂಪ್' ಸರಣಿಗಳನ್ನು ನಿರ್ದೇಶಿಸಿದ್ದಾರೆ. ಇಂತಹ ಹನ್ಸಲ್ ಭಾರತದ ಸ್ಟಾಕ್ ಮಾರ್ಕೆಟ್ನಲ್ಲಿ ನಡೆದ ಮಹಾವಂಚನೆಯ ಕುರಿತ "ಸ್ಕ್ಯಾಮ್ 1992: ದ ಹರ್ಷದ್ ಮೆಹ್ತಾ ಸ್ಟೋರಿ' ಸರಣಿಯ ಮೂಲಕ 2020ರಲ್ಲಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ವಂಚನೆ ಪ್ರಕರಣಗಳ ಬೆನ್ನು ಹತ್ತಿದರು. "ಸ್ಕ್ಯಾಮ್ 1992'ಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರ 2023ರಲ್ಲಿ "ಸ್ಕ್ಯಾಮ್ 2003: ದ ತೆಲಗಿ ಸ್ಟೋರಿ' ಮೂಲಕ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಮ್ ತೆಲಗಿ ಕುರಿತ ಸರಣಿಯ ಶೋರನ್ನರ್ ಆಗಿದ್ದರು. ಇದೀಗ ಮತ್ತೊಂದು ಹೊಸ ಸ್ಕ್ಯಾಮ್ ಜತೆ ಹನ್ಸಲ್ ವಾಪಸ್ಸಾಗಿದ್ದಾರೆ. ಹೆಸರು "ಸ್ಕ್ಯಾಮ್ 2010'. ಪೋಸ್ಟರ್ ಮೂಲಕ ಶೂಟಿಂಗ್ ಪ್ರಾರಂಭಿಸಿರುವ ಬಗ್ಗೆ ಮಾಹಿತಿ ನೀಡಿರುವ ಹನ್ಸಲ್ ಈ ಬಾರಿ ಸಹಾರಾ ಗ್ರೂಪ್ನ ಸುಬ್ರತ ರಾಯ್ ಕಥೆ ಹೇಳಲು ಮುಂದಾಗಿದ್ದಾರೆ. ತಮಲ್ ಬಂಡ್ಯೋಪಾಧ್ಯಾಯ್ರ "ಸಹಾರಾ : ದ ಅನ್ಟೋಲ್ಡ್ ಸ್ಟೋರಿ' ಪುಸ್ತಕವನ್ನು ಆಧರಿಸಿ, ಈ ಸರಣಿಯನ್ನು ನಿರ್ಮಿಸಲಾಗುತ್ತಿದೆ. "ದೃಶ್ಯಂ 3', "ದೇವ' ಸೇರಿ ಕೆಲ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಸಿದ್ಧಾರ್ಥ್ ಬೊಡ್ಕೆ, ಸುಬ್ರತ ಪಾತ್ರದಲ್ಲಿ ನಟಿಸುತ್ತಿದ್ದು, ಕೃತಿಕಾ ಸಿಂಗ್, ಮೂನ್ ಬ್ಯಾನರ್ಜಿ ತಾರಾಗಣದಲ್ಲಿದ್ದಾರೆ.
ಯಾರು ಸುಬ್ರತ ರಾಯ್?
ಪಶ್ಚಿಮ ಬಂಗಾಳ ಮೂಲಕ ಸುಬ್ರತ ರಾಯ್, 2000ರ ದಶಕದಲ್ಲಿ 5000ಕ್ಕೂ ಹೆಚ್ಚು ಕಚೇರಿಗಳು, 12 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇದ್ದ ಸಹಾರಾ ಗ್ರೂಪ್, ಭಾರತೀಯ ರೈಲ್ವೇ ಬಳಿಕ ಅತಿಹೆಚ್ಚು ಸಿಬ್ಬಂದಿ ಹೊಂದಿರುವ ಕಂಪನಿ ಎನಿಸಿಕೊಂಡಿತ್ತು. ಹೀಗೆ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ್ದ ಸುಬ್ರತರನ್ನು ಜನ ಸಹಾರಾಶ್ರೀ ಎಂದು ಕರೆಯುತ್ತಿದ್ದರು. ಜತೆಗೆ 2001ರಿಂದ 2013ರವರೆಗೆ ಭಾರತ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ನೀಡಿತ್ತು. ಆದರೆ, ₹24 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರತ ಬಂಧಿತರಾದರು. ನಂತರ ಬೇಲ್ ಪಡೆದು ಹೊರಬಂದರೂ ಹಲವು ವರ್ಷಗಳ ಕಾನೂನು ಸಮರದ ನಡುವೆ 2023ರಲ್ಲಿ ವಿಧಿವಶರಾದರು.