- ಅಮಿತಾಭ್ ಬಚ್ಚನ್ ನಡೆಸಿಕೊಡುವ ಯಶಸ್ವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ
- 17ನೇ ಆವೃತ್ತಿ ಮುಗಿಸಿ, 18ನೇ ಸೀಸನ್ ಚಾಲ್ತಿಯಲ್ಲಿ
- ಶೋ ನಿಂದ ನಿರ್ಗಮಿಸುವ ಮಾತನಾಡಿದ ಬಾಲಿವುಡ್ ನಟ ಬಿಗ್ ಬಿ
ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಹಿಂದಿಯ ‘ಕೌನ್ ಬನೇಗಾ ಕರೋಡ್‌ಪತಿ’ ಕ್ವಿಜ್ ರಿಯಾಲಿಟಿ ಶೋ ದಾಖಲೆ ಬರೆದಿದೆ. ಕಳೆದ 25 ವರ್ಷಗಳಲ್ಲಿ ಯಶಸ್ವಿ 17 ಸೀಸನ್ ಪೂರ್ಣಗೊಂಡಿದ್ದು, ಇದೀಗ 18ನೇ ಸೀಸನ್ ಚಾಲ್ತಿಯಲ್ಲಿದೆ. ಅದರಲ್ಲಿ ಮೂರನೇ ಸೀಸನ್ ಹೊರತುಪಡಿಸಿ ಉಳಿದ 17 ಸೀಸನ್‌ಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಅಮಿತಾಭ್ ಬಚ್ಚನ್‌ಗೆ ಸಲ್ಲುತ್ತದೆ. ‘ಕೌನ್ ಬನೇಗಾ ಕರೋಡ್‌ಪತಿ’ ಎಂದರೆ ಮೊದಲು ಕೇಳಿಬರುವ ಹೆಸರು ಅಮಿತಾಭ್ ಅವರದ್ದು. ಈ ರಿಯಾಲಿಟಿ ಶೋ ಅಷ್ಟು ದೊಡ್ಡಮಟ್ಟದಲ್ಲಿ ಜನಪ್ರಿಯವಾಗಲು ಹಿರಿಯ ನಟನ ಕೊಡುಗೆ ಅಪಾರವಾದುದು. ಹೀಗಿರುವಾಗಲೇ, ಇತ್ತೀಚೆಗೆ ಅಮಿತಾಭ್ ‘ಕೆಬಿಸಿ’ಯಿಂದ ನಿವೃತ್ತಿ ತೆಗೆದುಕೊಳ್ಳುವ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಅವರು,‘ಕೆಬಿಸಿ’ಗೆ ಬರುವ ಕೆಲ ಸ್ಪರ್ಧಿಗಳ ಬದುಕಿನ ಕಥೆಗಳು ನನ್ನನ್ನು ಅಂತರಾಳದಲ್ಲಿ ಕಲುಕುತ್ತಿವೆ’ ಎಂದಿದ್ದಾರೆ. ‘ಹಲವಾರು ರೀತಿಯ ಸಮಸ್ಯೆಗಳು, ಕಷ್ಟಗಳನ್ನು ಎದುರಿಸಿರುವ ಸ್ಪರ್ಧಿಗಳು ‘ಕೆಬಿಸಿ’ಯಲ್ಲಿ ಬಂದು ಅವರ ಹಿನ್ನೆಲೆಯ ಬಗ್ಗೆ ಹೇಳಿದಾಗ, ನನಗೂ ಬೇಸರವಾಗುತ್ತದೆ. ಜತೆಗೆ ಆ ಸಮಯದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಅಸಾಧ್ಯ. ಅದರ ಪರಿಣಾಮ ಕಾರ್ಯಕ್ರಮದ ಮೇಲೂ ಬೀರುವ ಕಾರಣ ಕೆಲವೊಮ್ಮೆ ಮುಂದುವರಿಸಲು ಕಷ್ಟವಾಗುತ್ತದೆ. ಈ ಬಗ್ಗೆ ನಾನು ಹೆಚ್ಚು ವಿವರವಾಗಿ ಹೇಳಲು ಹೋಗುವುದಿಲ್ಲ. ‘ಕೆಬಿಸಿ’ಯಿಂದ ನಿವೃತ್ತಿ ಹೊಂದಲು ಬಯಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ನಷ್ಟದಲ್ಲಿದ್ದ ಅಮಿತಾಭ್ ಬಚ್ಚನ್‌ರ ಕೈ ಹಿಡಿದಿದ್ದು ‘ಕೆಬಿಸಿ’. ಹೀಗಾಗಿಯೇ 83 ವರ್ಷದ ಅಮಿತಾಭ್ ಮತ್ತು ರಿಯಾಲಿಟಿ ಶೋ ನಡುವೆ ವ್ಯಾವಹಾರಿಕ ಸಂಬಂಧಕ್ಕಿಂತ ಭಾವನಾತ್ಮಕ ಬೆಸುಗೆಯಿದೆ. -ಏಜೆನ್ಸೀಸ್