ರೋಲ್ಸ್ ರಾಯ್ಸ್ ಕಾರಿನಲ್ಲಿ ಚಹಾ ಮಾರಿದ ಯುವಕ
Viral Video: ಇದು ಡಿಜಿಟಲ್ ಯುಗ ಅಂದಮೇಲೆ ವಿಚಿತ್ರ, ವಿಭಿನ್ನ ದೃಶ್ಯಗಳ ಬಗ್ಗೆ ಕೇಳಬೇಕಾ? ಇಡೀ ಜಗತ್ತೇ ಆರು ಇಂಚಿನ ಸ್ಮಾರ್ಟ್ಫೋನ್ ಡಿಸ್ಪ್ಲೇಯಲ್ಲಿ ಗೋಚರಿಸುವಾಗ, ಜನರ ಆಲೋಚನೆ ಖಂಡಿತ ದೊಡ್ಡದಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಕೈಬೆರಳಿನಲ್ಲಿ ಎಲ್ಲಾ ಸಿಗುತ್ತಿರುವ ಈ ಕಾಲದಲ್ಲಿ ವಿಚಿತ್ರ ವಿಷಯಗಳು, ಪ್ರಯತ್ನಗಳು ಜನರನ್ನು ಅಚ್ಚರಿಗೊಳಿಸುತ್ತಿವೆ. ಅದಕ್ಕೆ ಇಲ್ಲೊಬ್ಬ ಯುವಕನ ದುಬಾರಿ ಬಿಜಿನೆಸ್ ಐಡಿಯಾನೇ ಸಾಕ್ಷಿ.
ಇತ್ತೀಚಿನ ದಿನಗಳಲ್ಲಂತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು, ಅತಿ ಹೆಚ್ಚಿನ ವೀಕ್ಷಣೆ ಪಡೆಯಲು ಎಲ್ಲವನ್ನೂ ತೊರೆದು ನಿಲ್ಲುವ ಮಂದಿ ಗಣನೀಯವಾಗಿ ಹೆಚ್ಚಾಗಿದ್ದಾರೆ. ಇದರಲ್ಲಿ ಯುವಜನತೆಯೇ ಅಧಿಕ. ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬಹುದಾದ ಸಾಮಾಜಿಕ ಮಾಧ್ಯಮವನ್ನು ಬೇಡದ ಕೆಲಸಗಳಿಗೆ ಉಪಯೋಗಿಸಿಕೊಂಡು ಕೊನೆಯದಾಗಿ ಅವಮಾನ ಸಹಿಸಲಾಗದೆ ಪ್ರಾಣ ಕಳೆದುಕೊಂಡವರ ನಿದರ್ಶನಗಳು ಹಲವು. ಆದರೆ, ಈ ವಿಡಿಯೋ ಅದ್ಯಾವುದನ್ನು ಹೇಳುತ್ತಿಲ್ಲ. ಬದಲಿಗೆ, ಒಂದು ಸಣ್ಣ ವಿಭಿನ್ನ ಪ್ರಯತ್ನವಾಗಿದೆ ಅಷ್ಟೇ.
ಡಿಲಕ್ಸ್ ಭಯ್ಯಾಜಿ ಎಂಬ ಯುವಕನೊಬ್ಬ, ಬಾಡಿಗೆಗೆ ಪಡೆದ ರೋಲ್ಸ್ ರಾಯ್ಸ್ ಕಾರಿನಲ್ಲಿ ಟೀ ಮಾರಾಟ ಮಾಡುವ ಮೂಲಕ ವೈರಲ್ ಆಗಿದ್ದಾನೆ. ಲಕ್ಸುರಿ ಕಾರಿನಲ್ಲಿ ಕುಳಿತು ಚಹಾ ಕುಡಿಯುವ ಅನುಭವ ಕಲ್ಪಿಸಿರುವ ಈತ, ತನ್ನ ಗ್ರಾಹಕರಿಗೆ ಟೀ-ಬಿಸ್ಕತ್ತು ಕೊಡುವ ಜೊತೆಗೆ ಕಾರಿನಲ್ಲಿ ಕುಳಿತು ಸಿಟಿಯ ರೌಂಡ್ ಹಾಕಿಬರಲು ಅವಕಾಶ ಮಾಡಿಕೊಟ್ಟಿದ್ದು ವಿಶೇಷ.
ಒಂದು ಲಕ್ಷ ರೂ.ಗೆ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬಾಡಿಗೆಗೆ ಪಡೆದ ಈತ, ಬೀದಿ ಬದಿಯಲ್ಲಿ ರೆಡ್ ಕಾರ್ಪೆಟ್ ಹಾಸಿ, ಅಲ್ಲಿಗೆ ಬರುವ ಗ್ರಾಹಕರಿಗೆ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಕೊಡುವ ಆತಿಥ್ಯದಂತೆ, ಆರ್ಡರ್ ಪಡೆದುಕೊಂಡು ಚಹಾ ಮಾರುತ್ತಾನೆ. ಈತನ ಬಳಿ ಒಂದು ಕಪ್ ಟೀಗೆ 300 ರೂ. ಅದೇ ರೋಲ್ಸ್ ರಾಯ್ಸ್‌ನಲ್ಲಿ ಪ್ರಯಾಣಿಸಿ ಚಹಾ ಕುಡಿಯಲು ಬಯಸಿದರೆ, ಒಬ್ಬರಿಗೆ 1000 ರೂ. ಕೊಡಬೇಕಿದೆ. ಕೇಸರಿ ಹೂವುಗಳಿಂದ ತಯಾರಿಸಿದ ಚಹಾದೊಂದಿಗೆ ಬಿಸ್ಕತ್ತುಗಳನ್ನು ನೀಡಿದ ಈ ಯುವಕನಿಗೆ ಅಂದುಕೊಂಡಂತೆ ವ್ಯೂವ್ಸ್ ಸಿಕ್ಕಿದ್ದೇನೋ ನಿಜ. ಆದರೆ, ಲಾಭವಲ್ಲ.
ಯುವಕ-ಯುವತಿಯರು ಸೇರಿದಂತೆ ಕುಟುಂಸ್ಥರು ಬಂದು ಈತನ ಬಳಿ ಟೀ ಸವಿದಿದ್ದಾರೆ. ಆದರೆ, ಅಂತಿಮವಾಗಿ ವೈರಲ್ ಹುಡುಗನ ಬಂಡವಾಳದ ವೆಚ್ಚ 1,08,000 ರೂ. ಆಗಿದ್ದು, ಬಂದ ಆದಾಯ ಕೇವಲ 88,400 ರೂ.! ಅಲ್ಲಿಗೆ, ಈತನ ವಿಭಿನ್ನ ಪ್ರಯತ್ನ ಜನರ ಗಮನ ಸೆಳೆಯಿತೇ ವಿನಃ 20,000 ನಷ್ಟದ ಮೂಲಕ ಜೇಬಿಗೆ ಕತ್ತರಿ ಹಾಕಿದ್ದು ಗಮನಾರ್ಹ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).