ರೈಲಿನ ಸೀಟನ್ನು ಕಿತ್ತುತ್ತಿರುವ ಯುವಕರು
ವಿಕೃತಿಯ ಪರಮಾವಧಿ: ಏನಿದು ಘಟನೆ?
ವೈರಲ್ ಆಗಿರುವ ವೀಡಿಯೊದಲ್ಲಿ, ಒಬ್ಬ ಯುವಕ ರೈಲಿನ ಸೀಟುಗಳನ್ನು ಬಲವಂತವಾಗಿ ಎಳೆದು, ಒಡೆದು ಹಾಕುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಲ್ಲಿ ಆಘಾತಕಾರಿ ವಿಷಯವೆಂದರೆ, ಆತ ಈ ಕೃತ್ಯವನ್ನು ಗುಟ್ಟಾಗಿ ಮಾಡುತ್ತಿಲ್ಲ; ಬದಲಾಗಿ ಆತನ ಗೆಳೆಯನೇ ಈ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದಾನೆ.
ನಮಗೆ ಯಾರೂ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂಬ ಅಹಂಕಾರ ಆ ಯುವಕನ ಮುಖದಲ್ಲಿ ಎದ್ದು ಕಾಣುತ್ತಿದೆ. ವಿಡಿಯೋ ಚಿತ್ರೀಕರಿಸುವ ವ್ಯಕ್ತಿಯು ಈ ಅಪಾಯಕಾರಿ ನಡವಳಿಕೆಯನ್ನು ಖಂಡಿಸುವ ಬದಲು, ಆತನಿಗೆ ಪ್ರೋತ್ಸಾಹ ನೀಡುತ್ತಿರುವುದು ವೀಕ್ಷಕರಲ್ಲಿ ಅಸಹ್ಯ ಹುಟ್ಟಿಸಿದೆ.
ನೆಟ್ಟಿಗರ ಆಕ್ರೋಶ: ಇವರನ್ನು ಜೈಲಿಗೆ ಹಾಕಿ!
ಈ ದೃಶ್ಯಗಳು ಹರಿದಾಡುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇದು ನಮ್ಮ ತೆರಿಗೆ ಹಣದಲ್ಲಿ ನಿರ್ಮಿಸಿದ ಆಸ್ತಿ, ಇವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಿ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು, ರೀಲ್ಸ್ ಮಾಡಿ ಸ್ಟಾರ್ ಆಗಲು ಹೋಗಿ ಇಂದು ಇಡೀ ದೇಶದ ಮುಂದೆ ವಿಲನ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರೈಲ್ವೇ ಇಲಾಖೆಯ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡುವ ಮೂಲಕ, ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಸಾವಿರಾರು ಮಂದಿ ಒತ್ತಾಯಿಸುತ್ತಿದ್ದಾರೆ.
ಆಸ್ತಿ ಹಾನಿ ಅಷ್ಟೇ ಅಲ್ಲ, ಇದು ಸುರಕ್ಷತೆಯ ಪ್ರಶ್ನೆ
ಸಾರ್ವಜನಿಕ ಸಾರಿಗೆಯಾದ ರೈಲುಗಳನ್ನು ಲಕ್ಷಾಂತರ ಜನರು ಪ್ರತಿದಿನ ಅವಲಂಬಿಸಿದ್ದಾರೆ. ಸೀಟುಗಳನ್ನು ಹಾಳು ಮಾಡುವುದು ಕೇವಲ ಆರ್ಥಿಕ ನಷ್ಟವಲ್ಲ, ಇದು ಇತರ ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವೇ ನಿಮಿಷಗಳ ವಿಡಿಯೋ ಲೈಕ್ಸ್‌ಗಾಗಿ ಸಾವಿರಾರು ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುವುದು ಅಕ್ಷಮ್ಯ ಅಪರಾಧವಾಗಿದೆ, (ಏಜನ್ಸೀಸ್).