ಎನ್​ಕೌಂಟರಲ್ಲಿ ಗುಂಡು ತಿಂದು ಸಿಗರೇಟ್​ ಕೇಳಿದ ಖದೀಮ 
ಟ್ರೆಂಡಿಂಗ್

ಸಾರ್, ಒಂದೇ ಒಂದು ಸಿಗರೇಟ್ ಕೊಡ್ಸಿ! ಎನ್‌ಕೌಂಟರ್ ಬೆನ್ನಲ್ಲೇ ಪೊಲೀಸರ ಮುಂದೆ ಗೋಗರೆದ ಖದೀಮ; ವಿಡಿಯೋ ವೈರಲ್​! Police Encounter Viral Video

ಉತ್ತರಪ್ರದೇಶ್: ಪೊಲೀಸರ ಬುಲೆಟ್ ಕಾಲಿಗೆ ಬಿದ್ದಾಗ ಎಂಥಾ ಖದೀಮರಾದರೂ ಅಳುತ್ತಾ ಕ್ಷಮೆ ಕೇಳುವುದನ್ನು ನೋಡಿರುತ್ತೀರಿ. ಆದರೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಾಂಟೆಡ್ ಕ್ರಿಮಿನಲ್ ಒಬ್ಬ, ಪೊಲೀಸರ ಬಳಿಯೇ ಸಿಗರೇಟ್ ಕೇಳಿದ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ವೈರಲ್ (Police Encounter Viral Video)​ ಆಗುತ್ತಿದೆ.

ಸರ್​ ಒಂದೇ ಒಂದು ಸಿಗರೇಟ್!

ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಪೊಲೀಸರಿಂದ ಗುಂಡು ತಿಂದಿರುವ ವ್ಯಕ್ತಿ, ಸಾಹಬ್, ಏಕ್ ಸಿಗರೇಟ್ ಪಿಲ್ವಾ ದೋ... ಏಕ್ ಬೀಡಿ ಪಿಲ್ವಾ ದೋ (ಸರ್, ದಯವಿಟ್ಟು ಒಂದು ಸಿಗರೇಟ್ ಅಥವಾ ಬೀಡಿ ಕೊಡ್ಸಿ ಸರ್) ಅಂತ ಬೇಡಿಕೊಂಡಿದ್ದಾನೆ. ನೋವಿನಿಂದ ನರಳುತ್ತಿದ್ದರೂ ಆತ ಇಟ್ಟ ಈ ವಿಲಕ್ಷಣ ಬೇಡಿಕೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಇದ್ದು, ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ.

ಅಷ್ಟಕ್ಕೂ ಭಾನುವಾರ ಸಂಜೆ ನಡೆದಿದ್ದೇನು?

ಯುಪಿಯ ಮುಜಫರ್ ನಗರ ಜಿಲ್ಲೆಯ ರಾಮರಾಜ್ ಪೊಲೀಸ್ ಠಾಣೆಯ ಟೀಮ್ ಜಮಾಲ್ಪುರ್ ಕಾಲುವೆ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿತ್ತು. ಈ ವೇಳೆ ಮೋಟಾರ್ ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬನ ಮೂವ್‌ಮೆಂಟ್ ಪೊಲೀಸರಿಗೆ ಅನುಮಾನಾಸ್ಪದವಾಗಿ ಕಂಡಿದೆ.
ಪೊಲೀಸರು ಆತನನ್ನು ತಡೆಯಲು ಮುಂದಾದಾಗ, ಆ ಶಂಕಿತ ತಕ್ಷಣ ತನ್ನ ಬಳಿ ಇದ್ದ ಗನ್ ತೆಗೆದು ಪೊಲೀಸರ ಮೇಲೆಯೇ ಫೈರಿಂಗ್ ಮಾಡಿದ್ದಾನೆ. ಗುಂಡು ಹಾರಿಸುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಆತ್ಮ ರಕ್ಷಣೆಗಾಗಿ ಅವರೂ ಫೈರಿಂಗ್​ ಮಾಡಿದ್ದಾರೆ. ಪೊಲೀಸರ ಗುಂಡು ಆ ಪುಂಡನ ಕಾಲಿಗೆ ತಗುಲಿದ್ದು, ತಕ್ಷಣ ಆತ ಬೈಕ್ ಸಮೇತ ಕೆಳಗೆ ಬಿದ್ದಿದ್ದಾನೆ.

ಯಾರು ಈ 'ಬೀಡಿ' ಪ್ರೇಮಿ?

ಪೊಲೀಸರು ಆತನನ್ನು ವಶಕ್ಕೆ ಪಡೆದು ಚೆಕ್ ಮಾಡಿದಾಗ ಆತನ ಅಸಲಿ ಮುಖವಾಡ ಕಳಚಿದೆ. ಆತನ ಹೆಸರು ಇನಾಮ್ ಎಂದು ತಿಳಿದುಬಂದಿದ್ದು, ಪೊಲೀಸರ ಹಿರಿಯ ಅಧಿಕಾರಿಗಳ ಪ್ರಕಾರ, ಇನಾಮ್ ಮೇಲೆ ಈಗಾಗಲೇ 12 ಕ್ಕೂ ಹೆಚ್ಚಿನ ಪ್ರಕರಣಗಳಿವೆ ಎಂದು ಗೊತ್ತಾಗಿದೆ. ಆತನಿಂದ ಘಟನಾ ಸ್ಥಳದಲ್ಲಿ ಆತ ಪ್ರಯಾಣಿಸುತ್ತಿದ್ದ ಕದ್ದ ಬೈಕ್, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಕೆಲವು ಜೀವಂತ ಗುಂಡುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ!

ಈ ಎನ್‌ಕೌಂಟರ್ ಮುಗಿದ ಬೆನ್ನಲ್ಲೇ ಸ್ಥಳದಲ್ಲಿದ್ದ ಯಾರೋ ಮೊಬೈಲ್‌ನಲ್ಲಿ ಶೂಟ್ ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ವಿಡಿಯೋದಲ್ಲಿ ಇನಾಮ್ ಕಾಲಿಗೆ ಗುಂಡು ಬಿದ್ದು ರಕ್ತ ಸುರಿಯುತ್ತಿದ್ದರೂ, ನೋವಿನಲ್ಲೂ ಪೊಲೀಸರ ಕೈ ಮುಗಿದು ತನಗೆ ಸಿಗರೇಟ್ ಅಥವಾ ಬೀಡಿ ಕೊಡಿಸುವಂತೆ ಗೋಗರೆಯುತ್ತಿದ್ದಾನೆ.
ಸಾಹಬ್, ಏಕ್ ಸಿಗರೇಟ್ ಪಿಲ್ವಾ ದೋ... ಏಕ್ ಬೀಡಿ ಪಿಲ್ವಾ ದೋ... ಎಂಬ ಆತನ ಮಾತುಗಳು ಈಗ ಮೀಮ್ ಕ್ರಿಯೇಟರ್ಸ್‌ಗೆ ಭರ್ಜರಿ ಆಹಾರವಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಏನೇ ಆಗಲಿ, ನಮ್ಮಣ್ಣನ ಸಿಗರೇಟ್ ಪ್ರೇಮ ಮಾತ್ರ ಕಮ್ಮಿ ಆಗಿಲ್ಲ!, ಜೈಲಿಗೆ ಹೋಗುವ ಮುನ್ನ ಲಾಸ್ಟ್ ಪಫ್ ತಗೋಬೇಕಂತೆ! ಎಂದು ಕಾಮೆಂಟ್‌ಗಳನ್ನು ಹಾಕಿ ವಿಡಿಯೋವನ್ನು ಸಿಕ್ಕಾಪಟ್ಟೆ ಶೇರ್ ಮಾಡುತ್ತಿದ್ದಾರೆ.

ಕಾನೂನು ಕ್ರಮ ಕೈಗೊಂಡ ಪೊಲೀಸರು

ಘಟನೆ ಬಳಿಕ ಪೊಲೀಸರು ಇನಾಮ್‌ನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿ ರಿಷಿಕಾ ಸಿಂಗ್, ನಮ್ಮ ಪೊಲೀಸ್ ತಂಡ ನಿಯಮಾವಳಿಗಳ ಪ್ರಕಾರವೇ ಕಾರ್ಯಾಚರಣೆ ನಡೆಸಿದೆ. ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆ ನೀಡಲಾಗುತ್ತಿದ್ದು, ಈತನ ಗ್ಯಾಂಗ್‌ನಲ್ಲಿ ಇನ್ನು ಯಾರೆಲ್ಲಾ ಇದ್ದಾರೆ? ಮುಜಫರ್ ನಗರದಲ್ಲಿ ಈತ ಇನ್ನು ಎಲ್ಲೆಲ್ಲಿ ಕಳ್ಳತನ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್​).