ಪ್ರೊಫೆಸರ್ ಬಾಲಾಜಿ ರೆಡ್ಡಿ ಹಾಡಿನ ಮೋಡಿಗೆ ಮನಸೋತ ನೆಟ್ಟಿಗರು  
ಟ್ರೆಂಡಿಂಗ್

ಮೈಕ್​ ಹಿಡಿದು ಮೆಹಬೂಬಾ ಹಾಡಿದ ಪ್ರೊಫೆಸರ್: ಇವರೊಬ್ಬ ಹಿಡನ್​ ಹಿರೋ ಎಂದ ನೆಟ್ಟಿಗರು; ವಿಡಿಯೋ ವೈರಲ್​! Singer Professor

ಪ್ರಮುಖ ಮುಖ್ಯಾಂಶಗಳು

  • ಪುಣೆಯ ಶ್ರೀ ಬಾಲಾಜಿ ವಿಶ್ವವಿದ್ಯಾಲಯದಲ್ಲಿ ನಡೆದ ಫೆಸ್ಟ್​
  • ಪ್ರೊಫೆಸರ್ ಬಾಲಾಜಿ ರೆಡ್ಡಿ ಹಾಡಿನ ಮೋಡಿಗೆ ಮನಸೋತ ನೆಟ್ಟಿಗರು
  • ಲಕ್ಷಾಂತರ ವೀಕ್ಷಣೆ ಪಡೆದ ವೈರಲ್​ ವಿಡಿಯೋ
ಪುಣೆ: ಸಾಮಾನ್ಯವಾಗಿ ಕಾಲೇಜು ಉತ್ಸವ ಎಂದರೆ ನಮಗೆ ದೊಡ್ಡ ಸೆಲೆಬ್ರಿಟಿಗಳ ಆಗಮನ, ಹಿನ್ನಲೆ ಗಾಯಕರ ಸಂಗೀತ, ಗ್ಲಾಮರಸ್ ನೃತ್ಯಗಳು ಮತ್ತು ಡಿಜೆ ಸೌಂಡಗಳ ಅಬ್ಬರ ನೆನಪಿಗೆ ಬರುತ್ತವೆ.
ಆದರೆ ಪುಣೆಯ ಪ್ರತಿಷ್ಠಿತ ಶ್ರೀ ಬಾಲಾಜಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಅಚ್ಚರಿಪಡುವಂತಹ ಘಟನೆಯೊಂದು ನಡೆದಿದೆ. ವೇದಿಕೆಯ ಮೇಲೆ ಯಾವುದೇ ಸಿನೆಮಾ ನಟನಿಗೆ ಕಡಿಮೆ ಇಲ್ಲವೆಂಬಂತೆ ಪ್ರೊಫೆಸರ್ (Singer Professor) ಒಬ್ಬರು ತಮ್ಮ ಅದ್ಭುತ ಗಾಯನದ ಮೂಲಕ ಇಡೀ ಸಭಾಂಗಣವನ್ನೇ ಮಂತ್ರ ಮುಗ್ಧರಾಗಿಸಿದ್ದಾರೆ ಎಂದರೆ ಸುಳ್ಳಲ್ಲ.

ವೇದಿಕೆ ಏರುತ್ತಿದ್ದಂತೆ ಬದಲಾದ ವಾತಾವರಣ!

ಶ್ರೀ ಬಾಲಾಜಿ ವಿಶ್ವವಿದ್ಯಾಲಯದ ಮೆಗಾ-ಈವೆಂಟ್‌ನಲ್ಲಿ ಬಾಲಾಜಿ ರೆಡ್ಡಿ ಎಂಬ ಹೆಸರಿನ ಪ್ರಾಧ್ಯಾಪಕರು ವೇದಿಕೆ ಏರುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿತ್ತು. ಆದರೆ ಅವರು ಮೈಕ್ ಹಿಡಿದು ಹಾಡಲು ಶುರುಮಾಡಿದ ಕ್ಷಣ ಇಡೀ ಆಡಿಟೋರಿಯಂ ಸಂಗೀತ ಕಚೇರಿಯಂತೆ ಬದಲಾಯಿತು.
ಭಾರತೀಯ ಸಿನಿರಂಗದ ಐಕಾನಿಕ್​ ಸಿನಿಮಾ 'ಶೋಲೆ'ಯ ಸಾರ್ವಕಾಲಿಕ ಹಿಟ್ ಮೆಹಬೂಬಾ ಮೆಹಬೂಬಾ ಹಾಡನ್ನು ಅವರು ಹಾಡಲು ಪ್ರಾರಂಭಿಸಿದಾಗ, ಅವರ ಧ್ವನಿಯಲ್ಲಿದ್ದ ಶಕ್ತಿ ಮತ್ತು ಲಯಕ್ಕೆ ವಿದ್ಯಾರ್ಥಿಗಳು ಬೆಕ್ಕಸ ಬೆರಗಾಗಿದ್ದಾರೆ.

ಪ್ರೊಫೆಸರ್ ಗಾಯನಕ್ಕೆ ವಿದ್ಯಾರ್ಥಿಗಳು ಫಿದಾ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರೊಫೆಸರ್ ರೆಡ್ಡಿ ಅವರು ಅತ್ಯಂತ ಆತ್ಮವಿಶ್ವಾಸದಿಂದ ಮತ್ತು ಪರಿಪೂರ್ಣ ಲಯದಲ್ಲಿ ಹಾಡುತ್ತಿರುವುದನ್ನು ಕಾಣಬಹುದು. ಅವರ ಸುಮಧುರ ಧ್ವನಿಗೆ ಮನಸೋತ ನೂರಾರು ವಿದ್ಯಾರ್ಥಿಗಳು ತಮ್ಮ ಸೀಟುಗಳಿಂದ ಎದ್ದು ನಿಂತು ಶಿಳ್ಳೆ, ಚಪ್ಪಾಳೆ ತಟ್ಟುತ್ತಾ ನೃತ್ಯ ಮಾಡಲು ಆರಂಭಿಸಿದ್ದಾರೆ.
ಗಂಭೀರವಾಗಿ ಪಾಠ ಮಾಡುವ ಪ್ರೊಫೆಸರ್ ಒಳಗೆ ಇಂತಹೊಬ್ಬ ಪ್ರತಿಭಾವಂತ ಗಾಯಕನಿದ್ದಾನೆ ಎಂದು ವಿದ್ಯಾರ್ಥಿಗಳು ಊಹಿಸಿರಲಿಲ್ಲ. ಹಲವರು ಈ ಅಪರೂಪದ ಕ್ಷಣವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅಲೆ ಎಬ್ಬಿಸಿದ ಪ್ರೊಫೆಸರ್

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿದ್ದು, ಈಗಾಗಲೇ ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ. ಪ್ರೊಫೆಸರ್​ ಅವರ ಗಾಯನವನ್ನು ಆನಂದಿಸಿರುವ ನೆಟ್ಟಿಗರು ಮುಕ್ತ ಕಂಠದಿಂದ ಅವರನ್ನು ಹೊಗಳುತ್ತಿದ್ದಾರೆ.
ಒಬ್ಬ ಬಳಕೆದಾರರು, ನಮ್ಮ ಕಾಲೇಜಿನಲ್ಲಿ ಇಂತಹ ಪ್ರೊಫೆಸರ್ ಇದ್ದಿದ್ದರೆ ನಾವು ಒಂದೂ ಕ್ಲಾಸ್ ಬಂಕ್ ಮಾಡುತ್ತಿರಲಿಲ್ಲ! ಎಂದು ಬರೆದಿದ್ದಾರೆ. ಇನ್ನೊಬ್ಬರು, ಸರ್, ನೀವು ನಿಜವಾಗಿಯೂ ಒಬ್ಬ ಹಿಡನ್​ ಹಿರೋ. ನಿಮ್ಮಲ್ಲಿ ಇಷ್ಟೊಂದು ಅದ್ಭುತ ಪ್ರತಿಭೆ ಇರುವುದು ನಮಗೆ ತಿಳಿದಿರಲಿಲ್ಲ" ಎಂದು ಶ್ಲಾಘಿಸಿದ್ದಾರೆ. ಮತ್ತೊಬ್ಬರು, ವಿದ್ಯಾರ್ಥಿಗಳು ಇವರ ಕ್ಲಾಸ್‌ನಲ್ಲಿ ಯಾಕೆ ಅಷ್ಟು ಶಿಸ್ತಿನಿಂದ ಕೂರುತ್ತಾರೆ ಎಂದು ಈಗ ಅರ್ಥವಾಯಿತು, ಇವರ ಧ್ವನಿಯ ಮ್ಯಾಜಿಕ್ ಅಂಥದ್ದು! ಎಂದು ಬರೆದಿದ್ದಾರೆ.

ಕಲಿಕೆಗೆ ವಯಸ್ಸಿಲ್ಲ, ಪ್ರತಿಭೆಗೆ ಎಲ್ಲೆಯಿಲ್ಲ!

ಶಿಕ್ಷಕರು ಕೇವಲ ಪುಸ್ತಕದ ಪಾಠಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಆರೋಗ್ಯಕರ ಶೈಕ್ಷಣಿಕ ವಾತಾವರಣಕ್ಕೆ ಸಾಕ್ಷಿಯಾಗಿದೆ. ಪುಣೆಯ ಈ ಪ್ರಾಧ್ಯಾಪಕರು ಇಂದು ಕೇವಲ ಬೋಧಕರಾಗಿ ಉಳಿಯದೆ, ಸಾಮಾಜಿಕ ಜಾಲತಾಣದ ರಿಯಲ್ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ,(ಏಜನ್ಸೀಸ್​).