ವೈರಲ್​ ವಿಡಿಯೋ 
ಟ್ರೆಂಡಿಂಗ್

ಪೆಟ್ರೋಲ್ ಬಂಕ್‌ನಲ್ಲಿ ಪ್ರತ್ಯಕ್ಷನಾದ ಕುಬೇರ: ಡೆಲಿವರಿ ಬಾಯ್ಸ್‌ಗೆ ಉಚಿತ ಪೆಟ್ರೋಲ್ ಹಂಚಿದ ದಾನಿ; ವಿಡಿಯೋ ನೋಡಿ ದಂಗಾದ ನೆಟ್ಟಿಗರು! Free Petrol for Delivery Boys

ಹೈದರಾಬಾದ್​: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದು, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಭೀತಿ ಜನಸಾಮಾನ್ಯರನ್ನು ಕಾಡುತ್ತಿದೆ. ಇಂತಹ ಹಣದುಬ್ಬರದ ಸಮಯದಲ್ಲಿ, ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಎಲ್ಲರನ್ನೂ ಚಕಿತಗೊಳಿಸಿದೆ. ಹೌದು, ಪೆಟ್ರೋಲ್ ಬಂಕ್‌ವೊಂದರಲ್ಲಿ ವ್ಯಕ್ತಿಯೊಬ್ಬ ಸ್ವಿಗ್ಗಿ ಮತ್ತು ಜೊಮಾಟೊ ಡೆಲಿವರಿ ಹುಡುಗರಿಗೆ ಉಚಿತವಾಗಿ ಪೆಟ್ರೋಲ್ (Free Petrol for Delivery Boys) ಹಂಚುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಏನಿದು ಘಟನೆ?

ಎಕ್ಸ್ (ಟ್ವಿಟರ್​) ನಲ್ಲಿ @ChapraZila ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಪೆಟ್ರೋಲ್ ಬಂಕ್‌ನಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಅಲ್ಲಿಗೆ ಬರುವ ಡೆಲಿವರಿ ಏಜೆಂಟ್‌ಗಳನ್ನು ಕರೆದು ಉಚಿತವಾಗಿ ಪೆಟ್ರೋಲ್ ಹಾಕಿಸುತ್ತಿರುವುದು ಕಂಡುಬರುತ್ತದೆ. ವಿಶೇಷವಾಗಿ ಬಿಸಿಲಿನಲ್ಲಿ ಅಲೆದಾಡಿ ಆಹಾರ ತಲುಪಿಸುವ ಸ್ವಿಗ್ಗಿ ಮತ್ತು ಜೊಮಾಟೊ ಪ್ರತಿಯೊಬ್ಬ ಹುಡುಗರಿಗೂ ತಲಾ ಒಂದು ಬಾಟಲಿ ಪೆಟ್ರೋಲ್ ನೀಡಲಾಗುತ್ತಿದೆ. ಈ ಸುದ್ದಿ ಹರಡುತ್ತಿದ್ದಂತೆ, ಪೆಟ್ರೋಲ್ ಪಂಪ್‌ನಲ್ಲಿ ಡೆಲಿವರಿ ಬಾಯ್ಸ್‌ಗಳ ದೊಡ್ಡ ದಂಡೇ ಜಮಾಯಿಸಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ: ಇದು ದಾನವೋ ಅಥವಾ ಗಿಮಿಕ್ಕೋ?
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, ಈ ಕಷ್ಟದ ಕಾಲದಲ್ಲಿ ಇಂತಹ ಕೆಲಸ ಮಾಡುವ ಈತ ಖಂಡಿತ ಕುಬೇರನ ನಿಧಿ ಕಂಡಿರಬೇಕು ಅಥವಾ ಈ ಬಂಕ್ ಮಾಲೀಕನೇ ಇರಬೇಕು ಎಂದು ತಮಾಷೆ ಮಾಡಿದ್ದಾರೆ.
ಮತ್ತೊಬ್ಬರು, ನಿಯಮದ ಪ್ರಕಾರ ಬಾಟಲಿಯಲ್ಲಿ ಪೆಟ್ರೋಲ್ ನೀಡುವುದು ತಪ್ಪು, ಆದರೆ ಈ ಪರಿಸ್ಥಿತಿಯಲ್ಲಿ ಇವರ ಸಹಾಯ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದೊಂದು ಪಬ್ಲಿಸಿಟಿ ಸ್ಟಂಟ್ ಅಥವಾ ಯಾವುದೋ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಕೆಲಸ ಎಂದು ಕಿಡಿಕಾರಿದ್ದಾರೆ.

ವದಂತಿಗಳ ನಡುವೆ ಆಶಾಕಿರಣ

ಇತ್ತೀಚೆಗಷ್ಟೇ ತೈಲ ಅಭಾವದ ವದಂತಿ ಕೇಳಿಬಂದಾಗ ಜನ ಬಕೆಟ್, ಕುಕ್ಕರ್ ಹಿಡಿದು ಸಾಲಿನಲ್ಲಿ ನಿಂತಿದ್ದನ್ನು ನಾವು ನೋಡಿದ್ದೇವೆ. ಅಂತಹ ಆತಂಕದ ವಾತಾವರಣದ ನಡುವೆ, ಈ ವ್ಯಕ್ತಿಯ ಉಚಿತ ಪೆಟ್ರೋಲ್ ಅಭಿಯಾನ ಜನರಿಗೆ ಅಚ್ಚರಿ ಮೂಡಿಸಿದೆ. ಈ ಸಹಾಯದ ಹಿಂದಿನ ಅಸಲಿ ಉದ್ದೇಶ ಏನೇ ಇರಲಿ, ಸಂಕಷ್ಟದಲ್ಲಿರುವವರಿಗೆ ಒಂದು ಕ್ಷಣದ ನೆಮ್ಮದಿ ನೀಡಿದ್ದಂತೂ ನಿಜ,(ಏಜನ್ಸೀಸ್​).