ಯುವಕನ ಮನವೊಲಿಸಲು ಸ್ಥಳಕ್ಕೆ ಆಗಮಿಸಿದ ಶಾಸಕ
- ಪ್ರೇಯಸಿಗಾಗಿ ಮೊಬೈಲ್ ಟವರ್ ಏರಿದ ಯುವಕ
- ಯುವಕನ ಮನವೊಲಿಸಲು ಸ್ಥಳಕ್ಕೆ ಆಗಮಿಸಿದ ಶಾಸಕ
- ವಿಡಿಯೋ ವೈರಲ್; ನೆಟ್ಟಿಗರಿಂದ ಕಮೆಂಟ್ಗಳ ಮಹಾಪೂರ
ಬಿಹಾರ್: ಸಿನಿಮಾಗಳಲ್ಲಿ ಪ್ರೇಮಿಗಳು ಒಂದಾಗಲು ಏನೇನೋ ಸಾಹಸ ಮಾಡುವುದನ್ನು ನೋಡಿದ್ದೇವೆ. ಆದರೆ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದ ಈ ಘಟನೆ ಮಾತ್ರ ಶೋಲೆ ಸಿನಿಮಾದ ಧರ್ಮೇಂದ್ರನನ್ನೂ ಮೀರಿಸುವಂತಿದೆ. ಒಬ್ಬ ವಿವಾಹಿತ ವ್ಯಕ್ತಿ, ಮದುವೆಯಾಗಿ 15 ವರ್ಷಗಳಾದ್ರೂ ತನ್ನ ಹಳೆಯ ಗೆಳತಿಯ ನೆನಪಿನಲ್ಲಿ ಮೊಬೈಲ್ ಟವರ್ ಹತ್ತಿ ಕುಳಿತ ಪ್ರಸಂಗ ಈಗ ಸೋಶಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಏನಿದು ಘಟನೆ?
ಬಿಹಾರದ ವಾಸುದೇವ್ ಎಂಬ ಭೂಪನೇ ಈ ಹೈ-ವೋಲ್ಟೇಜ್ ನಾಟಕದ ಹಿರೋ. ವಾಸುದೇವ್‌ಗೆ ಮದುವೆಯಾಗಿ ಈಗಾಗಲೇ ಒಂದೂವರೆ ದಶಕ ಕಳೆದುಹೋಗಿದೆ. ಸಂಸಾರ ಹೂಡಿ ಮಕ್ಕಳನ್ನೂ ಹೊಂದಿರುವ ಈತ, ಕೆಲ ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇನ್ನೊಬ್ಬ ಮಹಿಳೆಯ ಪ್ರೇಮಪಾಶಕ್ಕೆ ಬಿದ್ದಿದ್ದ. ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ, ಅವಳ ಜೊತೆ ಓಡಿಹೋಗಿ ಮದುವೆಯೂ ಆಗಿದ್ದ ಎನ್ನಲಾಗಿದೆ.
ಆದರೆ, ಮೊದಲ ಹೆಂಡತಿ ಮತ್ತು ಕುಟುಂಬದವರು ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ, ಪೊಲೀಸರು ಎಂಟ್ರಿ ಕೊಟ್ಟು ಈ ಹೊಸ ಜೋಡಿಯನ್ನು ಬೇರ್ಪಡಿಸಿದ್ದರು. ಪ್ರೇಯಸಿಯಿಂದ ದೂರಾದ ದುಃಖದಲ್ಲಿದ್ದ ವಾಸುದೇವ್, ಹೇಗಾದರೂ ಮಾಡಿ ಅವಳನ್ನು ಮತ್ತೆ ಪಡೆಯಲೇಬೇಕು ಎಂದು ಪಣತೊಟ್ಟು ಈ ವಿಲಕ್ಷಣ ಸಾಹಸಕ್ಕೆ ಕೈಹಾಕಿದ್ದಾನೆ.
7 ಗಂಟೆಗಳ ಕಾಲ ಟವರ್ ಮೇಲೆ ಕುಳಿತ ಭೂಪ!
ಒಂದು ಮುಂಜಾನೆ ದಿಢೀರನೆ ಮೊಬೈಲ್ ಟವರ್ ಏರಿದ ವಾಸುದೇವ್, ನನ್ನ ಗೆಳತಿಯನ್ನು ಕರೆದುಕೊಂಡು ಬನ್ನಿ, ಇಲ್ಲದಿದ್ದರೆ ಇಲ್ಲಿಂದಲೇ ಜಿಗಿದು ಪ್ರಾಣ ಬಿಡುತ್ತೇನೆ ಎಂದು ಕೂಗಾಡಲಾರಂಭಿಸಿದ. ನೋಡನೋಡುತ್ತಿದ್ದಂತೆ ಟವರ್ ಕೆಳಗೆ ನೂರಾರು ಜನ ನೆರೆದರು. ಪೊಲೀಸರು ಬಂದರು, ಆಂಬ್ಯುಲೆನ್ಸ್ ಸಿದ್ಧವಾಯಿತು, ಇಡೀ ಗ್ರಾಮವೇ ಟವರ್ ಕೆಳಗೆ ಜಮಾಯಿಸಿತು.
ಪೊಲೀಸರು ಎಷ್ಟು ಬೇಡಿಕೊಂಡರೂ ವಾಸುದೇವ್ ಮಾತ್ರ ಕೆಳಗೆ ಇಳಿಯುವ ಹೆಸರೇ ಎತ್ತಲಿಲ್ಲ. ಸುಮಾರು 7 ಗಂಟೆಗಳ ಕಾಲ ಪೊಲೀಸರು ಮತ್ತು ಸ್ಥಳೀಯರು ಆತನನ್ನು ಮನವೊಲಿಸಲು ಹೈರಾಣಾದರು. ಜನವಂತೂ ಮೊಬೈಲ್ ಹಿಡಿದು ಲೈವ್ ವಿಡಿಯೋ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟರು.
ಶಾಸಕರ ಎಂಟ್ರಿ - ಕೊನೆಗೂ ಸುಖಾಂತ್ಯ!
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಸ್ಥಳೀಯ ಶಾಸಕ ರಣವಿಜಯ್ ಸಾಹು ಅವರು ಸ್ಥಳಕ್ಕೆ ಧಾವಿಸಿದರು. ಮೈಕ್ ಹಿಡಿದು ವಾಸುದೇವ್ ಜೊತೆ ಮಾತುಕತೆ ನಡೆಸಿದ ಶಾಸಕರು, ನಿನ್ನ ಸಮಸ್ಯೆ ಏನೇ ಇದ್ದರೂ ನಾವು ಕುಳಿತು ಬಗೆಹರಿಸೋಣ, ಕೆಳಗೆ ಬಾರಪ್ಪಾ ಎಂದು ಭರವಸೆ ನೀಡಿದರು. ಶಾಸಕರ ಮಾತಿಗೆ ಬೆಲೆ ಕೊಟ್ಟ ವಾಸುದೇವ್, ಕೊನೆಗೂ ಮನಸ್ಸು ಬದಲಿಸಿ ಮೆಲ್ಲಗೆ ಕೆಳಗೆ ಇಳಿದು ಬಂದ. ಆತ ಕೆಳಗೆ ಬರುತ್ತಿದ್ದಂತೆ ನೆರೆದಿದ್ದ ಜನರೆಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆ!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, ಪ್ರೀತಿ ಅಂದ್ರೆ ಇದಪ್ಪಾ, ಹೈ-ವೋಲ್ಟೇಜ್ ಕರೆಂಟ್ ತಂತಿ ಪಕ್ಕದಲ್ಲೇ ಪ್ರೇಮ ಪುರಾಣ! ಎಂದು ಕಿಚಾಯಿಸಿದ್ದಾರೆ. ಇನ್ನೊಬ್ಬರು, ಈಗಿನ ಕಾಲದಲ್ಲಿ ಲವ್ ಮ್ಯಾಟರ್ ಬಗೆಹರಿಸಲು ಎಂಎಲ್‌ಎ ಬರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದಿದ್ದಾರೆ,(ಏಜನ್ಸೀಸ್).