115 ಮಿಲಿಯನ್ ವರ್ಷಗಳ ಹಳೆಯ ಡೈನೋಸಾರ್ ಪಳೆಯುಳಿಕೆಯಲ್ಲಿ ರಕ್ತದ ಕಣ ಪತ್ತೆ: ಸಂಶೋಧನೆ ಅಚ್ಚರಿ ಸಂಗತಿ ಬಯಲು! 
ಟ್ರೆಂಡಿಂಗ್

115 ಮಿಲಿಯನ್ ವರ್ಷಗಳ ಹಳೆಯ ಡೈನೋಸಾರ್ ಪಳೆಯುಳಿಕೆಯಲ್ಲಿ ರಕ್ತದ ಕಣ ಪತ್ತೆ: ಸಂಶೋಧನೆಯಲ್ಲಿ ಅಚ್ಚರಿ ಸಂಗತಿ ಬಯಲು! Dinosaur Blood Cells

Dinosaur Blood Cells : ಭೂಮಿಯ ಮೇಲೆ ಕೋಟ್ಯಂತರ ವರ್ಷಗಳ ಹಿಂದೆ ಬದುಕಿದ್ದ ಡೈನೋಸಾರ್‌ಗಳ ಬಗ್ಗೆ ತಿಳಿದುಕೊಳ್ಳಲು ವಿಜ್ಞಾನಿಗಳು ಇಂದಿಗೂ ಸಂಶೋಧನೆ ನಡೆಸುತ್ತಿದ್ದಾರೆ. ಅವುಗಳ ಮೂಳೆ, ಹಲ್ಲು, ಚರ್ಮ, ಗರಿಗಳು ಸೇರಿದಂತೆ ಹಲವು ಪಳೆಯುಳಿಕೆಗಳು ಈಗಾಗಲೇ ಪತ್ತೆಯಾಗಿವೆ. ಆದರೆ ಇದೀಗ ವಿಜ್ಞಾನಿಗಳ ಗಮನ ಸೆಳೆದಿರುವುದು ಬರೋಬ್ಬರಿ 11.5 ಕೋಟಿ ವರ್ಷಗಳಷ್ಟು ಹಳೆಯ ಡೈನೋಸಾರ್ ಮೂಳೆಯೊಳಗೆ ಪತ್ತೆಯಾಗಿರುವ ರಕ್ತಕಣಗಳ ಕುರುಹುಗಳು ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಸಂಶೋಧನೆಯು ಪ್ರಾಚೀನ ಜೀವಿಗಳ ಬಗ್ಗೆ ಹೊಸ ಕುತೂಹಲ ಮೂಡಿಸಿದೆ.

ಬ್ರೆಜಿಲ್‌ನಲ್ಲಿ ಸಿಕ್ಕಿತ್ತು ಅಪರೂಪದ ಪಳೆಯುಳಿಕೆ

2008ರಲ್ಲಿ ಬ್ರೆಜಿಲ್‌ನ ಗಣಿಯೊಂದರಲ್ಲಿ ಡೈನೋಸಾರ್‌ನ ಮೂಳೆಗಳು ಪತ್ತೆಯಾಗಿದ್ದವು. ಇವು ಸುಮಾರು 11.5 ಕೋಟಿ ವರ್ಷಗಳ ಹಿಂದೆ ಬದುಕಿದ್ದ ಅರಾಟಾಸಾರಸ್ ಮ್ಯೂಸಿಯುನಾಸಿಯಾಲಿ ಎಂಬ ಮಾಂಸಾಹಾರಿ ಡೈನೋಸಾರ್‌ನ ಬಲಗಾಲಿನ ಮೂಳೆಗಳಾಗಿದ್ದವು. ಸುಮಾರು ಮೂರು ಮೀಟರ್ ಉದ್ದವಿದ್ದ ಈ ಡೈನೋಸಾರ್‌ನ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಹಲವು ವರ್ಷಗಳ ಬಳಿಕ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪರಿಶೀಲಿಸಿದ್ದಾರೆ.

ಮೂಳೆಯೊಳಗೆ ರಕ್ತನಾಳಗಳು ಹಾದುಹೋಗುತ್ತಿದ್ದ ಸೂಕ್ಷ್ಮ ಕಾಲುವೆಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಈ ಕಾಲುವೆಗಳೊಳಗೆ ಅಂಡಾಕಾರದ ಆಕಾರ ಹೊಂದಿದ್ದ ಅನೇಕ ಸೂಕ್ಷ್ಮ ರಚನೆಗಳು ಕಂಡುಬಂದಿವೆ. ಇವು ಕೆಂಪು ರಕ್ತಕಣಗಳನ್ನು ಹೋಲುತ್ತಿದ್ದವು. ಕೇವಲ ಸೂಕ್ಷ್ಮದರ್ಶಕದಲ್ಲಿ ಕಂಡುಬಂದ ಆಕಾರವನ್ನೇ ಆಧರಿಸಿ ನಿರ್ಧಾರಕ್ಕೆ ಬರದೆ, ಅವುಗಳ ರಾಸಾಯನಿಕ ಸಂಯೋಜನೆಯನ್ನೂ ವಿಜ್ಞಾನಿಗಳು ಪರೀಕ್ಷಿಸಿದ್ದಾರೆ.

ರಕ್ತದ ಪ್ರಮುಖ ಅಣುವಿನ ಕುರುಹು ಪತ್ತೆ

ಸಂಶೋಧನೆಯ ವೇಳೆ ಹೀಮ್ ಬಿ ಎಂಬ ಅಣುವಿನ ಕುರುಹು ಪತ್ತೆಯಾಗಿದೆ. ಇದು ರಕ್ತದಲ್ಲಿರುವ ಹಿಮೋಗ್ಲೋಬಿನ್‌ನ ಪ್ರಮುಖ ಭಾಗವಾಗಿದ್ದು, ದೇಹದ ವಿವಿಧ ಅಂಗಗಳಿಗೆ ಆಮ್ಲಜನಕ ಸಾಗಿಸಲು ನೆರವಾಗುತ್ತದೆ. ಸೂಕ್ಷ್ಮ ರಚನೆಗಳಲ್ಲಿ ಕಬ್ಬಿಣ, ಇಂಗಾಲ ಮತ್ತು ಸಾರಜನಕದ ಅಂಶಗಳೂ ಪತ್ತೆಯಾಗಿವೆ. ಈ ಅಂಶಗಳು ರಕ್ತಕ್ಕೆ ಸಂಬಂಧಿಸಿದ ರಾಸಾಯನಿಕ ಸಂಯೋಜನೆಯೊಂದಿಗೆ ಹೊಂದಿಕೆಯಾಗಿವೆ. ಇದರ ಜತೆಗೆ, ಮೂಳೆಯ ಸುತ್ತಲಿನ ಮಣ್ಣಿನಲ್ಲಿದ್ದ ರಾಸಾಯನಿಕ ಅಂಶಗಳನ್ನೂ ಪರಿಶೀಲಿಸಲಾಗಿದೆ. ಸತ್ತ ನಂತರ ಮೂಳೆಯೊಳಗೆ ಸೇರಿಕೊಂಡಿರಬಹುದಾದ ಶಿಲೀಂಧ್ರಗಳು ಅಥವಾ ಸೂಕ್ಷ್ಮಜೀವಿಗಳಿಂದ ಈ ರಚನೆಗಳು ಉಂಟಾಗಿರಬಹುದೇ ಎಂಬ ಸಾಧ್ಯತೆಯನ್ನೂ ವಿಜ್ಞಾನಿಗಳು ಪರೀಕ್ಷಿಸಿದ್ದಾರೆ. ಹಲವು ಪ್ರತ್ಯೇಕ ಪರೀಕ್ಷೆಗಳ ಫಲಿತಾಂಶಗಳು ಈ ರಚನೆಗಳು ಮೂಲ ಡೈನೋಸಾರ್‌ನ ಜೈವಿಕ ಅವಶೇಷಗಳಾಗಿರಬಹುದೆಂಬ ವಾದಕ್ಕೆ ಬಲ ನೀಡಿವೆ.

ಕೋಟ್ಯಂತರ ವರ್ಷಗಳ ಕಾಲ ಹೇಗೆ ಉಳಿದವು?

ಸಾಮಾನ್ಯವಾಗಿ ಜೀವಿಗಳ ಮೃದು ಅಂಗಾಂಶಗಳು ಸತ್ತ ಕೆಲವೇ ಸಮಯದಲ್ಲಿ ಕೊಳೆಯುತ್ತವೆ. ಆದರೆ ಈ ಡೈನೋಸಾರ್‌ನ ಅವಶೇಷಗಳು ಆಮ್ಲಜನಕದ ಪ್ರಮಾಣ ಕಡಿಮೆ ಇದ್ದ, ಸೂಕ್ಷ್ಮಜೀವಿಗಳಿಂದ ಕೂಡಿದ ಪರಿಸರದಲ್ಲಿ ಹೂತುಹೋಗಿದ್ದವು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಅಲ್ಲದೆ, ಖನಿಜೀಕರಣ ಪ್ರಕ್ರಿಯೆಯು ಈ ಸೂಕ್ಷ್ಮ ರಚನೆಗಳನ್ನು ದೀರ್ಘಕಾಲ ಸಂರಕ್ಷಿಸಲು ನೆರವಾಗಿರಬಹುದು. ವಿಶೇಷವಾಗಿ ಮ್ಯಾಂಗನೀಸ್ ಹೊಂದಿರುವ ಹೌಸ್ಮನೈಟ್ ಖನಿಜವು ಈ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಇದು ನಿಜವಾದ ರಕ್ತವೇ? ಡಿಎನ್‌ಎ ಪತ್ತೆಯಾಗಿದೆಯೇ?

ಇಲ್ಲಿ ಒಂದು ಪ್ರಮುಖ ಅಂಶವನ್ನು ಗಮನಿಸಬೇಕು. ವಿಜ್ಞಾನಿಗಳು ಡೈನೋಸಾರ್‌ನ ದ್ರವರೂಪದ ರಕ್ತವನ್ನು ಪತ್ತೆಹಚ್ಚಿಲ್ಲ. ಬದಲಾಗಿ, ರಕ್ತಕಣಗಳನ್ನು ಹೋಲುವ ಖನಿಜೀಕೃತ ಸೂಕ್ಷ್ಮ ರಚನೆಗಳು ಮತ್ತು ರಕ್ತಕ್ಕೆ ಸಂಬಂಧಿಸಿದ ರಾಸಾಯನಿಕ ಅಣುಗಳ ಕುರುಹುಗಳನ್ನು ಮಾತ್ರ ಗುರುತಿಸಿದ್ದಾರೆ. ಡೈನೋಸಾರ್‌ನ ಡಿಎನ್‌ಎ ಅಥವಾ ಸಂಪೂರ್ಣ ಹಿಮೋಗ್ಲೋಬಿನ್ ಪತ್ತೆಯಾಗಿಲ್ಲ. ಅಲ್ಲದೆ, ಕೆಲವು ತಜ್ಞರು ಈ ಸೂಕ್ಷ್ಮ ರಚನೆಗಳನ್ನು ನಿಖರವಾಗಿ ರಕ್ತಕಣಗಳೆಂದು ಗುರುತಿಸುವ ವಿಚಾರದಲ್ಲಿ ಇನ್ನೂ ಹೆಚ್ಚಿನ ಪರಿಶೀಲನೆ ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಶೋಧನೆಯು ಭವಿಷ್ಯದಲ್ಲಿ ಪಳೆಯುಳಿಕೆಗಳ ಅಧ್ಯಯನಕ್ಕೆ ಹೊಸ ದಾರಿ ತೆರೆಯಬಹುದು. ವಸ್ತುಸಂಗ್ರಹಾಲಯಗಳಲ್ಲಿ ಹಲವು ವರ್ಷಗಳಿಂದ ಸಂರಕ್ಷಿಸಿಟ್ಟಿರುವ ಸಾವಿರಾರು ಪಳೆಯುಳಿಕೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಮರುಪರಿಶೀಲಿಸಿದರೆ, ಪ್ರಾಚೀನ ಜೀವಿಗಳ ಬಗ್ಗೆ ಯಾರೂ ಊಹಿಸದ ಸಂಗತಿಗಳು ಹೊರಬರಬಹುದು. ಈ ಮಹತ್ವದ ಸಂಶೋಧನೆಯು ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (PNAS) ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ, (ಏಜೆನ್ಸೀಸ್​).