ವರದಕ್ಷಿಣೆ ಪಡೆಯುತ್ತಿರುವ ದೃಶ್ಯ
ಗಾಜಿಯಾಬಾದ್: ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಆದರೆ ಈಗ ವೈರಲ್ ಆಗಿರುವ ಒಂದು ವಿಡಿಯೋ ಮಾತ್ರ ಇಡೀ ದೇಶದ ಗಮನ ಸೆಳೆಯುವ ಜೊತೆಗೆ, ಜನರ ಆಕ್ರೋಶಕ್ಕೂ ಕಾರಣವಾಗಿದೆ. ಮದುವೆಯೊಂದರಲ್ಲಿ ಕೋಟಿ ಕೋಟಿ ಹಣ ಮತ್ತು ಐಷಾರಾಮಿ ಕಾರನ್ನು ವರದಕ್ಷಿಣೆ (Dowry Viral Video) ಯಾಗಿ ನೀಡುತ್ತಿರುವ ದೃಶ್ಯ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಘಟನೆಯಲ್ಲಿ ಏನಿದೆ?
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಮದುವೆಯೊಂದರ ವಿಡಿಯೋ ಇದೀಗ ಎಕ್ಸ್ (ಟ್ವಿಟರ್) ನಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೈಕ್ ಹಿಡಿದು ನೆರೆದಿದ್ದ ನೂರಾರು ಜನರ ಮುಂದೆ ಹೆಮ್ಮೆಯಿಂದ ವರದಕ್ಷಿಣೆ ಮೊತ್ತವನ್ನು ಘೋಷಿಸುತ್ತಿದ್ದಾನೆ. 1 ಬಿಎಂಡಬ್ಲ್ಯು (BMW) ಕಾರು, 1 ಕೋಟಿ 1 ಲಕ್ಷದ 11 ಸಾವಿರ ರೂಪಾಯಿ ನಗದು ಎಂದು ಆತ ಹೇಳುತ್ತಿದ್ದಂತೆ ಸುತ್ತಲಿದ್ದವರು ಆಶ್ಚರ್ಯದಿಂದ ನೋಡುತ್ತಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಮತ್ತು ದುಬಾರಿ ಕಾರನ್ನು ಹುಡುಗಿಯ ಕಡೆಯವರು ಹುಡುಗನಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆ!
ಈ ವಿಡಿಯೋ 'yuva_aas' ಎಂಬ ಖಾತೆಯಿಂದ ಹಂಚಿ ಕೊಳ್ಳಲಾಗಿದ್ದು, ಈಗಾಗಲೇ 1.7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇದನ್ನು ನೋಡಿದ ನೆಟ್ಟಿಗರು ಇದು ಮದುವೆಯೋ ಅಥವಾ ವ್ಯಾಪಾರವೋ? ಎಂದು ಪ್ರಶ್ನಿಸುತ್ತಿದ್ದಾರೆ.
ಹುಡುಗಿಯ ಕುಟುಂಬ ಮದುವೆಗೆ 1 ಕೋಟಿ ಕೊಡುವ ಬದಲು, ಅದೇ ಹಣದಲ್ಲಿ ಅವಳಿಗೆ ಒಂದು ಬ್ಯುಸಿನೆಸ್ ಶುರು ಮಾಡಿಕೊಡಬಹುದಿತ್ತು ಅಥವಾ ಆಸ್ತಿ ಕೊಡಿಸಬಹುದಿತ್ತು. ಅದೆಲ್ಲ ಬಿಟ್ಟು ಈ ರೀತಿ ವರನ ಕೈಗೆ ಹಣ ಕೊಡೋದು ಎಷ್ಟು ಸರಿ? ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು ಧಾರ್ಮಿಕ ಆಯಾಮದಲ್ಲಿ ಕಾಮೆಂಟ್ ಮಾಡಿ, ಧರ್ಮದ ಹೆಸರಿನಲ್ಲಿ ಇಂತಹ ಅನಿಷ್ಟ ಪದ್ಧತಿಗಳನ್ನು ಆಚರಿಸುವುದು ಸರಿಯಲ್ಲ. ಇಸ್ಲಾಂನಲ್ಲಿ ಇಂತಹ ಬೇಡಿಕೆಗಳಿಗೆ ಅವಕಾಶವಿಲ್ಲದಿದ್ದರೂ, ಕೆಲವರು ಇದನ್ನು ಹೆಮ್ಮೆಯಿಂದ ಮಾಡುತ್ತಿರುವುದು ವಿಪರ್ಯಾಸ ಎಂದಿದ್ದಾರೆ.
ಕಾನೂನು ಏನನ್ನುತ್ತದೆ?
ಭಾರತದಲ್ಲಿ 1961 ರಲ್ಲೇ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಇದರ ಪ್ರಕಾರ ವರದಕ್ಷಿಣೆ ಕೇಳುವುದು, ಕೊಡುವುದು ಅಥವಾ ಅದನ್ನು ಸ್ವೀಕರಿಸುವುದು ದೊಡ್ಡ ಅಪರಾಧ. ಈ ಕಾನೂನು ಉಲ್ಲಂಘಿಸಿದರೆ ಕನಿಷ್ಠ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲಾಗುತ್ತದೆ. ಆದರೆ, ಕಟ್ಟುನಿಟ್ಟಾದ ಕಾನೂನುಗಳಿದ್ದರೂ ಸಹ ಸಾರ್ವಜನಿಕವಾಗಿ ಇಂತಹ ಘೋಷಣೆಗಳು ನಡೆಯುತ್ತಿರುವುದು ಸಮಾಜದ ಕ್ರೂರ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಬಡವರಿಗೆ ಎದುರಾದ ಸಂಕಷ್ಟ!
ಶ್ರೀಮಂತರು ತಮ್ಮ ಪ್ರತಿಷ್ಠೆಗಾಗಿ ಕೋಟಿ ಕೋಟಿ ಹಣ ಚೆಲ್ಲಬಹುದು. ಆದರೆ ಇಂತಹ ಆಡಂಬರದ ಮದುವೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಮಾನಸಿಕ ಒತ್ತಡ ಹೇರುತ್ತಿವೆ. "ಶ್ರೀಮಂತರು ಮದುವೆಗಳನ್ನು ಇಷ್ಟು ದುಬಾರಿಯಾಗಿಸುವುದನ್ನು ನಿಲ್ಲಿಸಬೇಕು. ಇದರಿಂದ ಬಡವರು ತಮ್ಮ ಮಗಳ ಮದುವೆ ಮಾಡಲು ಸಾಧ್ಯವಾಗದೆ ಕಂಗಾಲಾಗುತ್ತಿದ್ದಾರೆ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ,(ಏಜನ್ಸೀಸ್).