ಈ ಮೂಲಕ 'ಪಿಎಂ-ಸೇತು' ಯೋಜನೆಯಡಿ ಅನುಮೋದನೆ ಪಡೆದ ದೇಶದ ಮೊಟ್ಟಮೊದಲ ಖಾಸಗಿ ಕೈಗಾರಿಕಾ ಸಂಸ್ಥೆಯಾಗಿ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್' ಹೊರಹೊಮ್ಮಿದೆ. ಅಲ್ಲದೆ, ಖಾಸಗಿ ಕೈಗಾರಿಕೆಗಳ ಜೊತೆ ಒಪ್ಪಂದ ಮಾಡಿಕೊಂಡು ಈ ಯೋಜನೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿ ಆಂಧ್ರಪ್ರದೇಶ ಇತಿಹಾಸ ಬರೆದಿದೆ.
ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ತನ್ನ ಶೈಕ್ಷಣಿಕ ಪಾಲುದಾರ ಸಂಸ್ಥೆಯಾದ NAMTECH ಜೊತೆಗೂಡಿ ಈ ಐಟಿಐ ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸಲಿದೆ.
ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅನುಮೋದನೆ
ನವದೆಹಲಿಯ ಕೌಶಲ್ ಭವನದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂಎಸ್‌ಡಿಇ) ಮೂರನೇ ರಾಷ್ಟ್ರೀಯ ಸಂಚಾಲನಾ ಸಮಿತಿ ಸಭೆಯಲ್ಲಿ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡಲಾಯಿತು.
ಸಚಿವಾಲಯದ ಕಾರ್ಯದರ್ಶಿ ದೇಬಾಶ್ರೀ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಡಿಜಿಟಿ ಮಹಾನಿರ್ದೇಶಕ ದಿಲೀಪ್ ಕುಮಾರ್, ಕಾರ್ಮಿಕ ಸಚಿವಾಲಯ, ವಾಣಿಜ್ಯ ಸಚಿವಾಲಯದ ಅಧಿಕಾರಿಗಳು, ಎಚ್‌ಎಎಲ್, ಹೀರೋ ಮೋಟೊಕಾರ್ಪ್, ಬಜಾಜ್ ಆಟೋ, ಐಟಿಸಿ ಸೇರಿದಂತೆ ಹಲವು ಪ್ರಮುಖ ಕೈಗಾರಿಕೆಗಳ ಪ್ರತಿನಿಧಿಗಳು ಹಾಗೂ ವಿಶ್ವಬ್ಯಾಂಕ್ ಪ್ರತಿನಿಧಿಗಳು ಭಾಗವಹಿಸಿದ್ದರು.
ಐಟಿಐ ಅಭಿವೃದ್ಧಿಗೆ ಯಾಕೆ ಈ ಒಪ್ಪಂದ?
ಸಾಮಾನ್ಯವಾಗಿ ಸರ್ಕಾರಿ ಐಟಿಐಗಳಲ್ಲಿ ಹಳೆಯ ಪಠ್ಯಕ್ರಮಗಳಿರುತ್ತವೆ. ಆದರೆ ಪ್ರಸ್ತುತ ಕೈಗಾರಿಕೆಗಳಿಗೆ ಹೊಸ ತಂತ್ರಜ್ಞಾನ ತಿಳಿದಿರುವ ಕಾರ್ಮಿಕರ ಅಗತ್ಯವಿದೆ. ಈ ಕೊರತೆಯನ್ನು ನೀಗಿಸಲು, ಐಟಿಐಗಳನ್ನು ಖಾಸಗಿ ಕೈಗಾರಿಕೆಗಳೇ ನಿರ್ವಹಿಸುವಂತೆ ಮಾಡಲು ಈ ಯೋಜನೆ ರೂಪಿಸಲಾಗಿದೆ. ವಿಶಾಖಪಟ್ಟಣಂ ಐಟಿಐ ಕ್ಲಸ್ಟರ್‌ನ ಈ ಹೊಸ ಒಪ್ಪಂದವು ದೇಶದ ಉಳಿದ ರಾಜ್ಯಗಳಿಗೂ ಇದೀಗ ಮಾದರಿಯಾಗಿದೆ.
ಏನಿದು ಪಿಎಂ-ಸೇತು ಯೋಜನೆ?
'ಪ್ರಧಾನ ಮಂತ್ರಿ ಸ್ಕಿಲ್ಲಿಂಗ್ ಆಂಡ್ ಎಂಪ್ಲಾಯಬಿಲಿಟಿ ಟ್ರಾನ್ಸ್‌ಫಾರ್ಮೇಶನ್ ತ್ರೂ ಅಪ್‌ಗ್ರೇಡೆಡ್ ಐಟಿಐಸ್' ಎನ್ನುವುದು ಪಿಎಂ ಸೇತುವಿನ ಪೂರ್ಣ ರೂಪ. ಬರೋಬ್ಬರಿ 60,000 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಇದರ ಮೂಲಕ ದೇಶದ 1,000 ಸರ್ಕಾರಿ ಐಟಿಐಗಳನ್ನು ಆಧುನೀಕರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಖಾಸಗಿ ಕೈಗಾರಿಕೆಗಳ ಪಾಲುದಾರಿಕೆಯೊಂದಿಗೆ, ಐಟಿಐಗಳಲ್ಲಿ ಹೊಸ ತಂತ್ರಜ್ಞಾನದ ಮೂಲಸೌಕರ್ಯ ಅಭಿವೃದ್ಧಿಪಡಿಸಿ, ಭವಿಷ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗವಕಾಶಗಳನ್ನು ಹೆಚ್ಚಿಸುವುದು ಇದರ ಮೂಲ ಉದ್ದೇಶವಾಗಿದೆ.
ಈಗಾಗಲೇ ದೇಶದ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. 12 ರಾಜ್ಯಗಳು ಖಾಸಗಿ ಕಂಪನಿಗಳನ್ನು ಆಹ್ವಾನಿಸಲು ಟೆಂಡರ್ (ಆರ್‌ಎಫ್‌ಪಿ) ಅನ್ನೂ ಕರೆದಿವೆ. ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ರಾಜ್ಯಗಳು ಹಾಗೂ ಕೈಗಾರಿಕೆಗಳ ನಡುವೆ ಇದೇ ರೀತಿಯ ಒಪ್ಪಂದಗಳು ನಡೆಯಲಿದ್ದು, 'ವಿಕಸಿತ್ ಭಾರತ್ 2047' ಕನಸನ್ನು ನನಸು ಮಾಡಲು ಕೌಶಲ್ಯಪೂರ್ಣ ಯುವಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ.