Abusive comments through fake accounts Aishwarya Sindogi Complaint 
ಟ್ರೆಂಡಿಂಗ್

ಐಶ್ವರ್ಯಾ ಸಿಂಧೋಗಿಗೆ ಆಕ್ಷೇಪಾರ್ಹ ಕಾಮೆಂಟ್​​; ನಕಲಿ ಅಕೌಂಟ್​​ಗಳ ವಿರುದ್ಧ ಸೈಬರ್​ ಪೊಲೀಸರಿಗೆ ದೂರು ಕೊಟ್ಟ ಕಿರುತರೆ ನಟಿ..Aishwarya Sindogi

ಪ್ರಮುಖ ಮುಖ್ಯಾಂಶಗಳು

  • ಕನ್ನಡದ ಮತ್ತೊಬ್ಬ ನಟಿಗೆ ಅವಹೇಳನಕಾರಿ ಕಾಮೆಂಟ್ ಆರೋಪ
  • ಐಶ್ವರ್ಯಾ ಸಿಂಧೋಗಿ ಮಾಡಿರುವ ಪೋಸ್ಟ್​ಗಳಿಗೆ ಅವಹೇಳನಕಾರಿ ಕಾಮೆಂಟ್​​​​
  • ದೂರು ಹಿನ್ನೆಲೆ ಬೆಂಗಳೂರಿನ ಸಂಜಯ್ ನಗರ ಠಾಣೆಯಲ್ಲಿ FIR ದಾಖಲು
Aishwarya Sindogi Complaint: ನಟಿಯರ ಜೀವನ ಶೈಲಿ, ಉಡುಪನ್ನು ಗುರಿಯಾಗಿಸಿಕೊಂಡು ಸೋಶಿಯಲ್​​ ಮೀಡಿಯಾದಲ್ಲಿ ಅವಹೇಳನಾಕಾರಿ ಕಾಮೆಂಟ್, ನಿಂದಿಸೋ ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಇದರ ವಿರುದ್ಧ ಮೋಹಕ ತಾರೆ ರಮ್ಯಾ, ನಟಿ ಚೈತ್ರಾ ಜೆ ಆಚಾರ್​ ಹಾಗೂ ದರ್ಶನ್​ ಪತ್ನಿ ವಿಜಯಲಕ್ಷ್ಮಿ, ಸಪ್ತಮಿ ಗೌಡ ಧ್ವನಿ ಎತ್ತಿದ್ದರು. ಸದ್ಯ ಅದೇ ಸಾಲಿನಲ್ಲಿ ಬಿಗ್​ಬಾಸ್​ ಮಾಜಿ ಸ್ಪರ್ಧಿ ಹಾಗೂ ಕಿರುತರೆ ನಟಿ ಐಶ್ವರ್ಯಾ ಸಿಂಧೋಗಿ ಇದ್ದಾರೆ.

ಪರಿಚಯಸ್ಥನಿಂದಲೇ ಬ್ಯಾಡ್ ಕಾಮೆಂಟ್

ಹೌದು, ಇನ್​​ಸ್ಟಾಗ್ರಾಮ್​ನಲ್ಲಿ ನಟಿ ಐಶ್ವರ್ಯಾ ಸಿಂಧೋಗಿ ಪೋಸ್ಟ್ ಮಾಡುವ ಫೋಟೋಗಳಿಗೆ ಸತತವಾಗಿ ಪರಿಚಯಸ್ಥ ವ್ಯಕ್ತಿಯೊಬ್ಬ ಅವಹೇಳನಾಕಾರಿ ಕಾಮೆಂಟ್ ಮಾಡುತ್ತಿದ್ದ ಬಗ್ಗೆ ಬೆಂಗಳೂರಿನ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ನಟಿ ಐಶ್ವರ್ಯಾ ಸಿಂಧೋಗಿ ಅವರಿಗೆ ಪರಿಚಯ ಇರುವ ವ್ಯಕ್ತಿಯಿಂದಲೇ ಆಕ್ಷೇಪಾರ್ಹ ಕಾಮೆಂಟ್ ಮಾಡಿರುವುದು ಬೆಳಕಿಗೆ ಬಂದಿದೆ. ಆ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಸಹ ಇದೇ ವ್ಯಕ್ತಿ ತಮಗೆ ಜೀವ ಬೆದರಿಕೆ ಹಾಕಿದ್ದಾಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈಗ ಅದೇ ವ್ಯಕ್ತಿ ತನ್ನ ಅಸ್ತಿತ್ವವನ್ನು ಮರೆಮಾಚಿ, ನಕಲಿ ಖಾತೆಗಳ ಮೂಲಕ ತಮಗೆ ಸೋಷಿಯಲ್ ಮೀಡಿಯಾದಲ್ಲಿ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ಶಂಕೆ ವ್ಯಕ್ತಪಡಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಅವಹೇಳನಕಾರಿ ಕಾಮೆಂಟ್​ ಮಾಡಿ ನನ್ನ ಖಾಸಗಿತನಕ್ಕೆ ಧಕ್ಕೆ ತರುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಟಿ ಐಶ್ವರ್ಯಾ ಅವರು ಕೊಟ್ಟ ದೂರಿನ ಮೇರೆಗೆ ಬೆಂಗಳೂರಿನ ಸಂಜಯ್​ನಗರ ಪೊಲೀಸ್​ ಠಾಣೆಯಲ್ಲಿ ಆರೋಪಿ ವಿರುದ್ಧ 66C ಅಡಿ, IT ಆ್ಯಕ್ಟ್ 66C ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್, ಪೋಸ್ಟ್ ಮಾಡಿದ್ದವರ ವಿರುದ್ಧವೂ ಇದೇ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು. ಪ್ರಕರಣದಲ್ಲಿ ಅರೆಸ್ಟ್ ಆಗಿ ಆರೇಳು ತಿಂಗಳು ಬೇಲ್‌ ಸಿಗದೆ ಆರೋಪಿಗಳು ಒದ್ದಾಡಿದ್ದರು. ಈಗ ಐಶ್ವರ್ಯಾ ಸಿಂಧೋಗಿ ನೀಡಿದ ದೂರಿನಲ್ಲೂ 66c ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಬಿಸಿದ್ದಾರೆ,(ಏಜೆನ್ಸೀಸ್).