ಉಬರ್ ನಂದಿನಿ, ಸುರೇಶ್ ಕೊಚಟ್ಟಿಲ್ ಅವರ ಟ್ವಿಟ್
ಹೈದರಾಬಾದ್: ನವದೆಹಲಿಯಲ್ಲಿ ಬಜೆಟ್ ಮಂಡನೆಯಾಗಿ ಅದರ ಬಗ್ಗೆ ಪರ-ವಿರೋಧ ಚರ್ಚೆಗಳು ಗಲ್ಲಿಯಿಂದ ದಿಲ್ಲಿಯವರೆಗೆ ಸದ್ದು ಮಾಡುತ್ತಿವೆ. ಹೈದರಾಬಾದ್‌ನಲ್ಲೂ ಇಂತಹದ್ದೇ ಒಂದು ಬಜೆಟ್ ಚರ್ಚೆಗೆ ತೆರಳುತ್ತಿದ್ದ ಹಿರಿಯ ಪತ್ರಕರ್ತ ಸುರೇಶ್ ಕೊಚಟ್ಟಿಲ್ ಅವರಿಗೆ ಅಂದು ವಿಭಿನ್ನವಾದ ಅನುಭವವೊಂದು ಕಾಯುತ್ತಿತ್ತು. ಸ್ಟುಡಿಯೋಗೆ ತೆರಳಲೆಂದು ಬುಕ್ ಮಾಡಿದ್ದ ಕ್ಯಾಬ್ ಜೀವನುತ್ಸಾಹದ ಒಂದು ಕತೆಯನ್ನು ಹೇಳ ಹೊರಟಿತ್ತು.
ಎರಡು ರದ್ದತಿಗಳ ನಂತರ ಸಿಕ್ಕ ವಿಜಯವಾಡದ 'ನಂದಿನಿ'
ಆ ದಿನ ಸುರೇಶ್ ಅವರು ನ್ಯಾಷನಲಿಸ್ಟ್ ಹಬ್‌ನಿಂದ ಟಿವಿ ಸ್ಟುಡಿಯೋಗೆ ಹೋಗಲು ಉಬರ್ ಬುಕ್ ಮಾಡಿದ್ದರು. ಇಬ್ಬರು ಚಾಲಕರು ರೈಡ್ ರದ್ದುಗೊಳಿಸಿದ ನಂತರ, ಮೂರನೆಯವರಾಗಿ ಆಪ್‌ನಲ್ಲಿ ಕಾಣಿಸಿಕೊಂಡ ಹೆಸರು 'ನಂದಿನಿ'. ಒಬ್ಬ ಮಹಿಳಾ ಚಾಲಕಿ ಬರುತ್ತಿರುವುದನ್ನು ಕಂಡು ಸುರೇಶ್ ಅವರಿಗೆ ಕುತೂಹಲ ಮತ್ತು ಆಶ್ಚರ್ಯ ಎರಡೂ ಒಟ್ಟಿಗೇ ಆಯಿತು.
ಕ್ಯಾಬ್ ಹತ್ತಿದ ನಂತರ ಶುರುವಾದ ಸಂಭಾಷಣೆಯಲ್ಲಿ ಬಿಚ್ಚಿಕೊಂಡಿದ್ದು ಒಂದು ಧೀಮಂತ ಮಹಿಳೆಯ ಬದುಕಿನ ಹೋರಾಟ. ನಂದಿನಿ ಅವರು ಮೂಲತಃ ವಿಜಯವಾಡದವರು. ಬದುಕಿನ ಏರಿಳಿತಗಳ ನಡುವೆ ಮೂವರು ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಈಕೆ ಒಬ್ಬ ಒಂಟಿ ತಾಯಿ. ಮಕ್ಕಳ ಉತ್ತಮ ಶಿಕ್ಷಣ ಮತ್ತು ಕುಟುಂಬದ ನಿರ್ವಹಣೆಗಾಗಿ ಹೈದರಾಬಾದ್‌ಗೆ ವಲಸೆ ಬಂದು, ಕಳೆದ ಒಂದು ವರ್ಷದಿಂದ ಉಬರ್ ಚಾಲಕಿಯಾಗಿ ರಸ್ತೆಗಿಳಿದಿದ್ದಾರೆ.
ಸಬಲೀಕರಣವೆಂದರೆ ಕೇವಲ ಭಾಷಣವಲ್ಲ!
ನಾವು ಟಿವಿ ಸ್ಟುಡಿಯೋಗಳಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಗಂಟೆಗಟ್ಟಲೆ ಚರ್ಚೆ ಮಾಡುತ್ತೇವೆ. ಆದರೆ ನಂದಿನಿ ಅವರಂತಹ ಮಹಿಳೆಯರು ಕಷ್ಟದ ಸಂದರ್ಭದಲ್ಲೂ ಧೃತಿಗೆಡದೆ, ಗೌರವಯುತವಾಗಿ ಕೆಲಸ ಮಾಡುತ್ತಾ ಸಬಲೀಕರಣಕ್ಕೆ ನಿಜವಾದ ಅರ್ಥ ನೀಡುತ್ತಿದ್ದಾರೆ, ಎಂದು ಸುರೇಶ್ ಕೊಚಟ್ಟಿಲ್ ಫೇಸ್‌ಬುಕ್ ಮತ್ತು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸಾವಿರಾರು ಜನರು ನಂದಿನಿ ಅವರ ಧೈರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ.
ನೆಟ್ಟಿಗರ ಬೆಂಬಲಗಳ ಮಹಾಪೂರ
ಈ ಪೋಸ್ಟ್ ನೋಡಿದ ನೆಟ್ಟಿಗರು ಕೇವಲ ಮೆಚ್ಚುಗೆ ವ್ಯಕ್ತಪಡಿಸುವುದಲ್ಲದೆ, ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಉಬರ್ ಮತ್ತು ಓಲಾ ಸಂಸ್ಥೆಗಳು ಮಹಿಳಾ ಪ್ರಯಾಣಿಕರಿಗೆ ಮಹಿಳಾ ಚಾಲಕರನ್ನೇ ಆಯ್ಕೆ ಮಾಡುವ ವಿಶೇಷ ಸೌಲಭ್ಯ ನೀಡಬೇಕು. ಇದರಿಂದ ಚಾಲಕಿಯರಿಗೂ ಸುರಕ್ಷತೆಯ ಭಾವನೆ ಮೂಡುತ್ತದೆ, ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಬ್ಬ ಬಳಕೆದಾರರು, ನಾನು ಫ್ಲಿಪ್‌ಕಾರ್ಟ್ ಡೆಲಿವರಿ ಗರ್ಲ್ಸ್ ಮತ್ತು ಇ-ರಿಕ್ಷಾ ಓಡಿಸುವ ಮಹಿಳೆಯರನ್ನು ನೋಡಿದ್ದೇನೆ. ಈಗಿನ ಮಹಿಳೆಯರು ಯಾವುದರಲ್ಲೂ ಹಿಂದೆ ಬಿದ್ದಿಲ್ಲ, ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಈ ಹಿಂದೆ ಆಟೋ ಓಡಿಸುವ ಮಹಿಳೆಯರ ವೀಡಿಯೊಗಳು ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನಂದಿನಿ ಅವರ ಕಥೆ ಕೇವಲ ಒಬ್ಬ ಚಾಲಕಿಯ ಕಥೆಯಲ್ಲ, ಇದು ತನಗಾಗಿ ಮತ್ತು ತನ್ನ ಮಕ್ಕಳ ಭವಿಷ್ಯಕ್ಕಾಗಿ ಸಮಾಜದ ಮುಜುಗರಗಳನ್ನು ಮೀರಿ ನಿಂತ ಪ್ರತಿಯೊಬ್ಬ ಮಹಿಳೆಯ ಕಥೆ. ಮುಂದಿನ ಬಾರಿ ನೀವು ಕ್ಯಾಬ್ ಬುಕ್ ಮಾಡಿದಾಗ ನಂದಿನಿ ಅವರಂತಹ ಸಾರಥಿಗಳು ಸಿಕ್ಕರೆ, ಒಂದು ಕಿರುನಗೆಯೊಂದಿಗೆ ಅವರ ಶ್ರಮಕ್ಕೆ ಗೌರವ ನೀಡಲು ಮರೆಯಬೇಡಿ ಎನ್ನುವುದು ಕೊಚಟ್ಟಿಲ್ ಅವರ ಕಿವಿಮಾತಾಗಿದೆ,(ಏಜನ್ಸೀಸ್).