ಸಾಂದರ್ಭಿಕ ಚಿತ್ರ  
ಟೆಕ್ನಾಲಜಿ

ಯುವತಿಯರೇ ಎಚ್ಚರ... ಸ್ಮಾರ್ಟ್​ ಗ್ಲಾಸ್​ಗಳಿಂದ ಮಹಿಳೆಯರ ಪ್ರೈವಸಿಗೆ ಅಪಾಯ! ಏನಿದು ಹೊಸ ಟೆಕ್ನಾಲಜಿ? Smart Glasses

ಪ್ರಮುಖ ಮುಖ್ಯಾಂಶಗಳು

  • ಇಡೀ ವಿಶ್ವದಲ್ಲಿ ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ
  • ಟೆಕ್ನಾಲಜಿ ಒಂದೆಡೆ ಒಳ್ಳೆಯದಾದರೆ ಅಷ್ಟೇ ಅಪಾಯಕಾರಿಯೂ ಹೌದು
  • ತಂತ್ರಜ್ಞಾನದ ಜೊತೆಗೆ ಭಯದ ವಾತಾವರಣವೂ ಬೆಳೆಯುತ್ತಿದೆ
  • ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಸ್ಮಾರ್ಟ್ ಗ್ಲಾಸ್‌ಗಳು ಗೌಪ್ಯತೆಗೆ ಬೆದರಿಕೆಯಾಗಿವೆ
Smart Glasses : ಇಡೀ ವಿಶ್ವದಲ್ಲಿ ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದು ಒಂದೆಡೆ ಒಳ್ಳೆಯದಾದರೆ, ಅಷ್ಟೇ ಅಪಾಯಕಾರಿಯೂ ಹೌದು. ಏಕೆಂದರೆ, ತಂತ್ರಜ್ಞಾನದ ಜೊತೆಗೆ ಭಯದ ವಾತಾವರಣವೂ ಬೆಳೆಯುತ್ತಿದೆ. ಇದೇ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಂದು ವಸ್ತು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದುವೇ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಸ್ಮಾರ್ಟ್ ಗ್ಲಾಸ್‌ಗಳು.
ಈ ಸ್ಮಾರ್ಟ್​ ಗ್ಲಾಸ್‌ಗಳನ್ನು ಫೋಟೋ ತೆಗೆಯಲು, ಅನುವಾದ ಮಾಡಲು ಮತ್ತು ಕೈಗಳಿಂದ ಯಾವುದೇ ಬಟನ್​ ಒತ್ತುವ ಅಗತ್ಯವಿಲ್ಲದೆ, ಆಡಿಯೋ ಕಮ್ಯಾಂಡ್​ ಮೂಲಕ ಬಳಸುವ ರೀತಿಯಲ್ಲಿ ಇದನ್ನು ತಯಾರಿಸಲಾಗಿದೆ. ಆದರೆ, ಈ ಗ್ಲಾಸ್‌ಗಳು ಈಗ ಮಹಿಳೆಯರ ಗೌಪ್ಯತೆಗೆ ಒಂದು ದೊಡ್ಡ ಬೆದರಿಕೆಯಾಗುತ್ತಿದೆ. ಕೆಲವರು ಈ ಸ್ಮಾರ್ಟ್ ಗ್ಲಾಸ್‌ಗಳನ್ನು ಹೊಸ ಗ್ಯಾಜೆಟ್‌ನಂತೆ ಸ್ಟೈಲ್‌ಗಾಗಿ ಬಳಸುತ್ತಿದ್ದಾರೆ. ಆದರೆ, ಕೆಲವರು ತಪ್ಪು ಉದ್ದೇಶದೊಂದಿಗೆ ಇವುಗಳನ್ನು ಬಳಕೆ ಮಾಡುತ್ತಿದ್ದಾರೆ.

ಗೊತ್ತಿಲ್ಲದೇ ವಿಡಿಯೋ ರೆಕಾರ್ಡ್​

ನಿರ್ದಿಷ್ಟವಾಗಿ ಹೇಳುವುದಾದರೆ, "ಪಿಕ್-ಅಪ್ ಆರ್ಟಿಸ್ಟ್​" ಎಂದು ಕರೆದುಕೊಳ್ಳುವ ಕೆಲವು ಪುರುಷರು, ಮಹಿಳೆಯರೊಂದಿಗೆ ಸಂಭಾಷಣೆಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಅವುಗಳನ್ನು ಕಂಟೆಂಟ್​ಗಳಾಗಿ ಪರಿವರ್ತಿಸುತ್ತಿದ್ದಾರೆ. ಬಸ್ ನಿಲ್ದಾಣಗಳು, ಬೀಚ್‌ಗಳು, ರಸ್ತೆಗಳು ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ಸ್ಮಾರ್ಟ್ ಗ್ಲಾಸ್‌ಗಳನ್ನು ಬಳಸಿ ಮಹಿಳೆಯರ ಅರಿವಿಲ್ಲದೆಯೇ ರೆಕಾರ್ಡ್ ಮಾಡುತ್ತಿದ್ದಾರೆ. ನಂತರ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ ಮತ್ತು ಅವಹೇಳನಕಾರಿ ಕಾಮೆಂಟ್‌ಗಳು ಮತ್ತು ಹ್ಯಾಶ್‌ಟ್ಯಾಗ್‌ಗಳೊಂದಿಗೆ ಮತ್ತಷ್ಟು ಕಿರುಕುಳ ನೀಡುತ್ತಿದ್ದಾರೆ. ಇಂತಹ ಘಟನೆಗಳು ಇದೀಗ ಪ್ರಪಂಚದಾದ್ಯಂತ ಹೆಚ್ಚುತ್ತಿವೆ.

ಇಂಗ್ಲೆಂಡ್​ ಮಹಿಳೆಗೆ ಕರಾಳ ಅನುಭವ

ಕಳೆದ ತಿಂಗಳು, ಇಂಗ್ಲೆಂಡ್‌ನ ಮಹಿಳೆಯೊಬ್ಬರು ಇದೇ ರೀತಿಯ ಘಟನೆಯನ್ನು ಎದುರಿಸಿದರು. ಸಂತ್ರಸ್ತ ಮಹಿಳೆ ಇತ್ತೀಚೆಗೆ ಹೋಟೆಲ್​ ಒಂದರಲ್ಲಿ ಪುರುಷನೊಂದಿಗೆ ಸಮಯ ಕಳೆದಿದ್ದರು. ಆದರೆ, ಆ ವ್ಯಕ್ತಿ ಆಕೆಗೆ ತಿಳಿಯದಂತೆ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ಅಲ್ಲದೆ, ತಾನು ತೆಗೆದುಕೊಂಡ ವಿಡಿಯೋಗಳನ್ನು ಆಕೆಗೆ ಕಳುಹಿಸಿದ್ದಾನೆ. ಇದರ ವಿರುದ್ಧ ಸಂತ್ರಸ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಇಲ್ಲಿ ಅಚ್ಚರಿಯ ಸಂಗತಿ ಏನೆಂದರೆ, ಈ ಪ್ರಕರಣದ ಬಗ್ಗೆ ನ್ಯಾಯಾಲಯವು ತೆಗೆದುಕೊಂಡ ನಿರ್ಧಾರ. ಅದೇನೆಂದರೆ, ಆರೋಪಿ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಅಂದಹಾಗೆ, ಇದೊಂದೇ ಪ್ರಕರಣವಲ್ಲ. ಇಂತಹ ಅನೇಕ ಘಟನೆಗಳು ಮಹಿಳೆಯರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಅಮೆರಿಕದಲ್ಲೂ ಇದೇ ಘಟನೆ

ಅಮೆರಿಕದಲ್ಲಿ ಮತ್ತೊಬ್ಬ ಮಹಿಳೆಗೂ ಇದೇ ರೀತಿ ಆಯಿತು. ಓರ್ವ ವ್ಯಕ್ತಿ ಸೂಪರ್ ಮಾರ್ಕೆಟ್​ನಲ್ಲಿ ಆಕೆಯನ್ನು ಗೇಲಿ ಮಾಡಿದನು. ಆಕೆಯನ್ನು ಹೊಗಳಿ ಅಲ್ಲಿಂದ ಹೊರಟುಹೋದನು. ಆ ಸಮಯದಲ್ಲಿ ಆಕೆಗೆ ಏನೂ ಅನುಮಾನ ಬರಲಿಲ್ಲ. ಆದರೆ, ಕೆಲವು ದಿನಗಳ ನಂತರ, ಇಬ್ಬರ ನಡುವಿನ ಸಂಭಾಷಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಯಿತು. ಇದು ಮಹಿಳೆಯ ಗಮನಕ್ಕೂ ಬಂತು. ತನ್ನ ಅನುಮತಿಯಿಲ್ಲದೆ ತನ್ನನ್ನು ರೆಕಾರ್ಡ್ ಮಾಡಲಾಗಿದೆ ಎಂಬುದನ್ನು ಅರಿತುಕೊಂಡ ಆಕೆ, ಕಣ್ಣೀರಾಕುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದಳು. ವಿಡಿಯೋ ನೋಡಿದ ಪ್ರತಿಯೊಬ್ಬರೂ ಆಘಾತ ವ್ಯಕ್ತಪಡಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿನ ಗೌಪ್ಯತೆ ಈಗ ಹೆಚ್ಚು ಅಪಾಯದಲ್ಲಿದೆ. ಮೊಬೈಲ್ ಫೋನ್‌ನಲ್ಲಿ ವಿಡಿಯೋ ತೆಗೆದುಕೊಂಡರೆ, ಕ್ಯಾಮೆರಾ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ, ಸ್ಮಾರ್ಟ್ ಗ್ಲಾಸ್‌ಗಳಲ್ಲಿ, ಕ್ಯಾಮೆರಾವನ್ನು ಕನ್ನಡಕದಲ್ಲಿ ಮರೆಮಾಡಲಾಗಿರುತ್ತದೆ. ಯಾರು ವಿಡಿಯೋ ರೆಕಾರ್ಡ್​ ಮಾಡುತ್ತಿದ್ದಾರೆ ಅನ್ನೋದೆ ಗೊತ್ತಾಗುವುದಿಲ್ಲ.

ಭಾರತದಲ್ಲಿ ಸೂಕ್ತ ಕಾನೂನಿಲ್ಲ

ಆದಾಗ್ಯೂ, ಭಾರತದಲ್ಲಿ ಸ್ಮಾರ್ಟ್ ಗ್ಲಾಸ್‌ಗಳ ಬಗ್ಗೆ ಯಾವುದೇ ನಿರ್ದಿಷ್ಟ ಕಾನೂನು ಇಲ್ಲ. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯು ನೀವು ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ ಇತರ ವ್ಯಕ್ತಿಗೆ ಹೇಳಬೇಕೆಂದು ಷರತ್ತು ವಿಧಿಸುವುದಿಲ್ಲ. ನಿಮ್ಮ ವಿಡಿಯೋವನ್ನು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ತಿಳಿದುಕೊಳ್ಳುವ ಹಕ್ಕು ಅಥವಾ ಅದನ್ನು ಡಿಲೀಟ್​ ಮಾಡುವಂತೆ ಕೇಳುವ ಸ್ಪಷ್ಟ ಮಾರ್ಗವಿಲ್ಲ. ಇದರರ್ಥ ಅಪರಿಚಿತ ಜನರು ಕೆಫೆ, ಮೆಟ್ರೋ, ಉದ್ಯಾನವನ ಅಥವಾ ದೇವಾಲಯದಲ್ಲಿ ಎಲ್ಲಿ ಬೇಕಾದರೂ ನಿಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆಯಬಹುದು. ಇಲ್ಲಿ ಮಹಿಳೆಯರ ಗೌಪ್ಯತೆಯನ್ನು ಸಂಪೂರ್ಣವಾಗಿ ರಕ್ಷಿಸಲು ಯಾವುದೇ ಸುಲಭ ಪರಿಹಾರವಿಲ್ಲ. ಅದಕ್ಕಾಗಿಯೇ ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು. ಸ್ಮಾರ್ಟ್ ಗ್ಲಾಸ್‌ಗಳು ಹೇಗೆ ಕಾಣುತ್ತವೆ ಮತ್ತು ಅವುಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿದುಕೊಳ್ಳುವುದು ಈಗ ಅಗತ್ಯವಾಗಿದೆ, (ಏಜೆನ್ಸೀಸ್​).