- 7 ವರ್ಷಕ್ಕೆ 613 ಕೋಟಿ ರೂ. ಖರ್ಚು ಭರಿಸಲು ಸರ್ಕಾರದ ಸೂಚನೆ
- ಪ್ರತಿ ಸಾಲಿನ ಕಾಪೋರೇಷನ್ ಆಯವ್ಯಯದಲ್ಲಿ ಹಣ ನಿಗದಿ ಕಡ್ಡಾಯ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿರುವ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳ ಸ್ವಚ್ಛತೆಗಾಗಿ ಯಾಂತ್ರಿಕ ಕಸ ಗುಡಿಯುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ವೆಚ್ಚ ಮಾಡುವ 613.25 ಕೋಟಿ ರೂ. ಮೊತ್ತವು ಪಂಚ ಪಾಲಿಕೆಗಳಿಗೆ ಭಾರಿ ಹೊರೆಯಾಗಲಿದೆ ಎಂಬ ಆಕ್ಷೇಪ ಕೇಳಿಬಂದಿದೆ.
ಇತ್ತೀಚಿಗೆ ಸಚಿವ ಸಂಪುಟ ಸಭೆಯಲ್ಲಿ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಳ್ಳಲು ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆ ತನ್ನ ಅನುಮೋದನೆ ನೀಡಿದೆ. ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿಯಾಡಿದ್ದು, ತೆರಿಗೆದಾರರ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಉದ್ಭವಿಸಿದೆ. ಅದರಲ್ಲೂ ಚುನಾಯಿತ ಆಡಳಿತ ಇಲ್ಲದಿದ್ದಾಗ ಬೃಹತ್ ಮೊತ್ತವನ್ನು ಅಧಿಕಾರಿಗಳ ದರ್ಬಾರ್‌ನಲ್ಲಿ ಬಳಸಿಕೊಳ್ಳುವುದು ಹಗಲುದರೋಡೆಯೇ ಸರಿ ಎಂಬುದಾಗಿ ಖಾರವಾದ ಪ್ರತಿಕ್ರಿಯೆ ಬರತೊಡಗಿವೆ.
ಪಾಲಿಕೆಗಳ ಪಾಲಿಗೆ ಬಿಳಿಯಾನೆ:
ಉದ್ದೇಶಿತ ಯಾಂತ್ರಿಕ ಕಸಗುಡಿಸುವಿಕೆ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವುದು ಕಷ್ಟ. ಅದರಲ್ಲೂ ಏಳು ವರ್ಷಗಳ ದೀರ್ಘ ಅವಧಿಗೆ ಟೆಂಡರ್ ನೀಡಿ ಗುತ್ತಿಗೆದಾರರಿಂದ ಕೆಲಸ ತೆಗೆಯುವುದು ಅಷ್ಟು ಸುಲಭವಲ್ಲ. ಮುಖ್ಯವಾಗಿ ಯಂತ್ರಗಳನ್ನು ಬಾಡಿಗೆ ರೂಪದಲ್ಲಿ ಪಡೆಯುವಿಕೆಗೆ ವೆಚ್ಚ ಮಾಡುವ ಹಣವನ್ನು ಆಯಾ ಪಾಲಿಕೆಗಳೇ ಭರಿಸಬೇಕಾಗುತ್ತದೆ. ಜತೆಗೆ ಪ್ರತೀ ವರ್ಷವೂ ಆಯವ್ಯಯದಲ್ಲಿ ಈ ಬಾಬ್ತಿಗೆ ಕಡ್ಡಾಯವಾಗಿ ಹಣ ತೆಗೆದಿರಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ. ಇದು ಇತರ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡದಿದ್ದರೂ, ರಸ್ತೆ ಸ್ವಚ್ಛತೆಗೆ ಕೋಟ್ಯಂತರ ರೂ. ಅನುದಾನ ಮೀಸಲಿಡುವುದು ಅನಿವಾರ್ಯವಾಗಲಿದೆ. ಹಾಗಾಗಿ ಈ ಯೋಜನೆಯು ಪಾಲಿಕೆಗಳ ಪಾಲಿಗೆ ಬಿಳಿಯಾನೆ ಆಗದ ಇರದು ಎಂಬ ಆರೋಪ ಕೇಳಿಬಂದಿದೆ.
ಉತ್ತರದಾಯತ್ವ ಬೇಡವೆ?:
ಹಾಲಿ ಜಿಬಿಎ ವ್ಯಾಪ್ತಿಯಲ್ಲಿ 12,878.89 ಕಿ.ಮೀ. ಉದ್ದದಷ್ಟು ರಸ್ತೆಜಾಲ ಇದೆ. ಈ ಪೈಕಿ ಮುಖ್ಯ/ಉಪಮುಖ್ಯ ರಸ್ತೆಗಳ ಉದ್ದ 1,682.10 ಕಿ.ಮೀ. ಇದೆ. ಇಂತಹ ರಸ್ತೆಗಳಲ್ಲಿ ಮಾತ್ರ ಯಾಂತ್ರಿಕವಾಗಿ ಕಸ ಗುಡಿಸಲಾಗುತ್ತದೆ. ಅಂದರೆ ಪ್ರಮುಖ ರಸ್ತೆಗಳಲ್ಲಿ ಮಾತ್ರ ಮಷೀನ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೂ, ಇಷ್ಟು ಕಡಿಮೆ ರಸ್ತೆಜಾಲಕ್ಕೆ ಬೃಹತ್ ವೆಚ್ಚ ಮಾಡುವುದು ಸರಿಯೆ? ಸರ್ಕಾರ ಹಾಗೂ ನಗರಾಭಿವೃಧ್ಧಿ ಇಲಾಖೆಗೆ ಉತ್ತರದಾಯತ್ವ ಇಲ್ಲವೇ ಎಂದು ಕೆಲ ಮಾಜಿ ಕಾಪೋರೇಟರ್‌ಗಳು ಅಪಸ್ವರ ಎತ್ತಿದ್ದಾರೆ.
ಮಳೆಗಾಲದಲ್ಲಿ ರಸ್ತೆ ಸ್ವಚ್ಛತೆ ಬೇಕೆ:
ಬೆಂಗಳೂರು ನಗರದಲ್ಲಿ ವರ್ಷದ ಆರು ತಿಂಗಳು ಮಳೆ ಬೀಳುತ್ತದೆ. ದಿನವೊಂದಕ್ಕೆ 2.5 ಮಿ.ಮೀ. ಗಿಂತ ಹೆಚ್ಚು ಮಳೆಯಾದಲ್ಲಿ ‘ಮಳೆ ದಿನ’ ಎಂದು ಪರಿಗಣಿಸಲಾಗುತ್ತದೆ.ಪ್ರಮಾಣದ ವರ್ಷಧಾರೆ ಆಗುವುದನ್ನು ಮಳೆ ದಿನಗಳೆಂದು ವಾರ್ಷಿಕ 60-65 ಮಳೆ ದಿನಗಳು ಇದ್ದು, ಆ ಸಮಯದಲ್ಲಿ ಯಂತ್ರಗಳ ಮೂಲಕ ರಸ್ತೆ ಸ್ವಚ್ಛತೆ ಅಗತ್ಯವಿರುವುದಿಲ್ಲ ಎಂಬ ಚರ್ಚೆಯೂ ನಡೆದಿದೆ.
ರಸ್ತೆ ಸ್ವಚ್ಛತೆಗೆ ಯಂತ್ರ ಬಳಕೆ ಏಕೆ?:
ನಗರದ ರಸ್ತೆಗಳನ್ನು ಸ್ವಚ್ಛ ಹಾಗೂ ಕಸರಹಿತವಾಗಿ ಚಂದವಾಗಿ ಇಟ್ಟುಕೊಳ್ಳುವ ಪರಿಕಲ್ಪನೆ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಪ್ರಸ್ತುತ ರಸ್ತೆ ಸ್ವಚ್ಛತೆಗೆ ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಚಾರ ಸಿಕ್ಕು ಹಾಗೂ ವಾಹನಗಳ ಓಡಾಟ ಹೆಚ್ಚಿರುವುದರಿಂದ ರಸ್ತೆಯನ್ನು ಶುಚಿಗೊಳಿಸಲು ಕೆಲಸಗಾರರಿಗೆ ಕಷ್ಟವಾಗುತ್ತಿದೆ. ಕೆಲವೊಮ್ಮೆ ಅಪಘಾತವಾಗಿ ಕಾರ್ಮಿಕರು ಗಾಯಗೊಂಡಿರುವ ಉದಾಹರಣೆ ಇವೆ. ಹಾಗಾಗಿ ಯಂತ್ರಗಳನ್ನು ಬಳಸಿಕೊಳ್ಳುವ ಆಲೋಚನೆ ಇದೆ. ರಾತ್ರಿಯೂ ಸೇರಿ ಯಾವ ಸಮಯದಲ್ಲಾದರೂ ಈ ಯಂತ್ರಗಳಿಂದ ಕೆಲಸ ಮಾಡಿಸಬಹುದಾಗಿದೆ. ಹಾಲಿ ಪ್ರಸ್ತಾಪದಂತೆ 45 ಯಂತ್ರಗಳನ್ನು ಬಾಡಿಗೆ ರೂಪದಲ್ಲಿ 7 ವರ್ಷಕ್ಕೆ ಗುತ್ತಿಗೆ ಅಡಿಯಲ್ಲಿ ಬಳಸಿಕೊಳ್ಳಲು 613.25 ಕೋಟಿ ರೂ. ವೆಚ್ಚ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ.
ಪಾಲಿಕೆವಾರು ರಸ್ತೆಗಳ ಸ್ವಚ್ಛತೆಯ ವಿವರ:
ಪಾಲಿಕೆ ವಾಹನ ರಸ್ತೆ ಉದ್ದ* ಸ್ವಚ್ಛತಾ ರಸ್ತೆಉದ್ದ*
ಇತರ ನಗರಗಳಲ್ಲಿನ ದರ ಹೋಲಿಕೆ ವಿವರ:
ನಗರ ಟೆಂಡರ್ ಮಾದರಿ ಪ್ರತಿ ಕಿ.ಮೀ. ವೆಚ್ಚ
ಪುಣೆ ಬಾಡಿಗೆ ಆಧಾರಿತ 1,339 ರೂ.
ಪಟನಾ ಬಾಡಿಗೆ ಆಧಾರಿತ 1,299 ರೂ.
ಮೊಹಾಲಿ ಬಾಡಿಗೆ/ಆರಂಭಿಕ ಹಣ 923 ರೂ.
ಭುವನೇಶ್ವರ ಬಾಡಿಗೆ ಆಧಾರಿತ 946.12 ರೂ.
ಬೆಂಗಳೂರು ಬಾಡಿಗೆ ಆಧಾರಿತ 894.53 ರೂ.