ಸಾಂದರ್ಭಿಕ ಚಿತ್ರ  
ಟೆಕ್ನಾಲಜಿ

ಕೆಲವೇ ಗಂಟೆಗಳಲ್ಲಿ ಮೊಬೈಲ್​ ಬ್ಯಾಟರಿ​ ಡೌನ್ ಆಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

ಮೋಹನ್​ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಹೊಟ್ಟೆಗೆ ಹಿಟ್ಟಿಲ್ಲದೆ ಹೋದರೂ ಮೊಬೈಲ್​ಗೆ ನೆಟ್ಟಿರಲೇಬೇಕು
  • ಸ್ಮಾರ್ಟ್​ಫೋನ್​ ಇದ್ದರೂ ದೀರ್ಘಕಾಲ ಚಾರ್ಚ್​ ಉಳಿಸಿಕೊಳ್ಳುವುದು ಸವಾಲಾಗಿದೆ
  • ಕೆಲವು ಸೆಟ್ಟಿಂಗ್​ಗಳನ್ನು ಆಫ್​ ಮಾಡಿದ್ರೆ ಬ್ಯಾಟರಿ ಹೆಚ್ಚು ಸಮಯ ಬರುತ್ತದೆ
Battery Drain: ಇದು ಡಿಜಿಟಲ್ ಯುಗ. ಅಂದಮೇಲೆ ಸ್ಮಾರ್ಟ್​ಫೋನ್​ ಇಲ್ಲದೆ ಹೇಗೆ? ಹೊಟ್ಟೆಗೆ ಹಿಟ್ಟಿಲ್ಲದೆ ಹೋದರೂ ಮೊಬೈಲ್​ಗೆ ನೆಟ್ಟಿರಲೇಬೇಕು ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಇಂದು. ಹಿಂದೆಲ್ಲ ಕೀಪ್ಯಾಡ್​ ಬಟನ್​ಗಳ ಮೊಬೈಲ್​ ಹೆಚ್ಚು ಬಳಕೆಯಲ್ಲಿತ್ತು. ಆಗ ನಾವೆಲ್ಲ ಕಳೆದ ಸಮಯ ನಿಜಕ್ಕೂ ಅವಿಸ್ಮರಣೀಯ. ಈ ಬಟನ್​ ಫೋನ್​ಗಳ ಬ್ಯಾಟರಿ ಬ್ಯಾಕಪ್​ ಕೂಡ ಅಷ್ಟೇ ಚೆನ್ನಾಗಿರುತ್ತಿತ್ತು. ಆದರೆ, ಕಾಲ ಕ್ರಮೇಣ ಎಲ್ಲವೂ ಬದಲಾಗಬೇಕು ಎಂಬ ಮಾತಿನಂತೆ ಮೊಬೈಲ್​ ಯುಗ ಇಂದು 6 ಇಂಚು ಉದ್ದದ ಸ್ಮಾರ್ಟ್​ಫೋನ್ ಎಂಬ ಆಧುನಿಕ ತಂತ್ರಜ್ಞಾನಕ್ಕೆ ಬಂದು ನಿಂತಿದೆ.
ಇಂತಹ ಫೋನ್​ಗಳನ್ನು ಉಪಯೋಗಿಸುವವರ ಸಂಖ್ಯೆ ಎಷ್ಟು ಹೆಚ್ಚಿದೆಯೋ ಅಷ್ಟೇ ಪ್ರಮಾಣದಲ್ಲಿ ಬ್ಯಾಟರಿ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆಯೂ ಇದೆ. ಆರಂಭದಲ್ಲಿ ಬ್ಯಾಟರಿ ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ಚೆನ್ನಾಗಿ ನೋಡಿ, ಆನಂತರ ಖರೀದಿಸುವ ಜನಸಾಮಾನ್ಯರು, ಎಷ್ಟೇ ಬಾರಿ ಫುಲ್ ಚಾರ್ಚ್​ ಮಾಡಿದರು, ದಿನ ಮುಗಿಯುವುದರೊಳಗೆ ಚಾರ್ಚ್​ ಖಾಲಿಯಾಗಿದೆ ಎಂದು ತೀವ್ರ ಬೇಸರಕ್ಕೆ ಒಳಗಾಗುತ್ತಾರೆ. ಇದರಿಂದ ಸಿಟ್ಟಾಗಿ, ಸ್ಮಾರ್ಟ್​ಫೋನ್ ಕಂಪನಿಗೂ ಹಿಗ್ಗಾಮುಗ್ಗಾ ಬೈಗುಳವನ್ನಿಡುತ್ತಾರೆ. ಪದೇ ಪದೇ ಚಾರ್ಚ್​ ಮಾಡುವಂತ ಪರಿಸ್ಥಿತಿ ನಿಮ್ಮ ಫೋನ್​ನಲ್ಲಿ ಕಾಡುತ್ತಿದ್ದರೆ, ಈ ಕೂಡಲೇ ನೀವು ಈ ಸೆಟ್ಟಿಂಗ್ಸ್​ಗಳನ್ನು ಆಫ್​ ಮಾಡುವ ಮೂಲಕ ಬ್ಯಾಟರಿ ಆರೋಗ್ಯವನ್ನು ಕಾಪಾಡಬಹುದು. ಹೇಗೆ ಅಂತೀರಾ? ಇಲ್ಲಿದೆ ನೋಡಿ ಉತ್ತರ.

ಬ್ಯಾಟರಿ ಸಮಸ್ಯೆಗೆ ಮೂಲ ಕಾರಣಗಳು

ಸ್ಮಾರ್ಟ್​ಫೋನ್​ ಖರೀದಿಸಿದ ಬಳಿಕ ಅದರಲ್ಲಿನ ಹಲವು ಫೀಚರ್​ಗಳನ್ನು ನಾವು ಬದಲಿಸುತ್ತಲೇ ಇರುತ್ತವೆ. ಇದರೊಟ್ಟಿಗೆ ಬ್ಯಾಕ್​ಗ್ರೌಂಡ್​ನಲ್ಲಿ ಕೆಲವು ಆ್ಯಪ್​ಗಳನ್ನು ರನ್ನಿಂಗ್​ನಲ್ಲೇ ಇಟ್ಟಿರುತ್ತೇವೆ. ಇದು ಸಹ ಬ್ಯಾಟರಿ ಡೌನ್​ಗೆ ಒಂದು ಮೂಲ ಕಾರಣ. ಮೊಬೈಲ್​ನಲ್ಲಿ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಬೇಕು ಎಂದಾದರೆ, ಮೊದಲು ಕೆಳಗೆ ತಿಳಿಸಿರುವ ಸೆಟ್ಟಿಂಗ್ಸ್​ಗಳನ್ನು ಆಫ್​ ಮಾಡಿಕೊಳ್ಳಿ. ಈ ಮುಖೇನ ಮೊಬೈಲ್ ಬದಲಿಸುವುದು ಅಥವಾ ಹೊಸ ಬ್ಯಾಟರಿ ಹಾಕಿಸುವುದು ತಪ್ಪುತ್ತದೆ.

ಯಾವ ಸೆಟ್ಟಿಂಗ್ಸ್​?

ಬ್ಯಾಟರಿ ಪರ್ಸಂಟೆಂಜ್​ ಕುಸಿತಕ್ಕೆ ಬ್ರೈಟ್ನೆಸ್ ಪ್ರಮುಖ​ ಕಾರಣ. ನೀವು ಎಷ್ಟು ಹೆಚ್ಚು ಬೆಳಕು ಜಾಸ್ತಿ ಇಟ್ಟಿರುತ್ತೀರೋ, ಅಷ್ಟೇ ಪ್ರಮಾಣದಲ್ಲಿ ಬ್ಯಾಟರಿ ಕಡಿಮೆಯಾಗುತ್ತಿರುತ್ತದೆ. ಕೆಲವರು ಬೆಳಗಿನ ಸಮಯದಲ್ಲಿ ಕಡಿಮೆ ಇಟ್ಟಿರುತ್ತಾರೆ. ಇನ್ನೂ ಕೆಲವರು ರಾತ್ರಿ ಆಗ್ತಿದ್ದಂತೆ ಬ್ರೈಟ್ನೆಸ್​ ಜಾಸ್ತಿ ಮಾಡಿಕೊಳ್ಳುತ್ತಾರೆ. ಇದು ಬ್ಯಾಟರಿ ಬಾಳಿಕೆಗೆ ಕತ್ತರಿ ಹಾಕುತ್ತದೆ. ಇದನ್ನು ತಡೆಯಲು ಸೆಟ್ಟಿಂಗ್ಸ್​ನಲ್ಲಿ ಆಟೋಮೆಟಿಕ್ ಬ್ರೈಟ್ನೆಸ್​ ಅನ್ನು ಆಯ್ಕೆ ಮಾಡಿಕೊಳ್ಳಿ. ಇದು ಬೆಳಕಿನ ಅಗತ್ಯತೆ ನೋಡಿಕೊಂಡು ಬ್ರೈಟ್ನೆಸ್​ ಅಡ್ಜಸ್ಟ್​ ಮಾಡಿಕೊಳ್ಳುತ್ತೆ. ಈ ಸೆಟ್ಟಿಂಗ್​ ಇಟ್ಟುಕೊಳ್ಳುವುದರಿಂದ ಬ್ಯಾಟರಿ ಹೆಚ್ಚು ಬಳಕೆಯಾಗುವುದಿಲ್ಲ.

ಲೊಕೇಶನ್​ ಸರ್ವಿಸ್​ ಹೊಡೆತ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್​ಫೋನ್​ಗಳಲ್ಲಿ ಲೊಕೇಶನ್ ಆನ್ ಆಗಿದ್ದರೆ ತಮ್ಮ ಕೆಲಸಗಳು ಸುಲಭ ಎಂಬುದು ಕೆಲವರ ಅನಿಸಿಕೆ. ಲೊಕೇಶನ್​ ಸೆಟ್ಟಿಂಗ್​ನಲ್ಲಿ ತಾವು ಹೋಗಬೇಕಾದ ಸ್ಥಳವನ್ನು ಹಾಕಿ, ಬ್ಯಾಕ್​ಡ್ರಾಪ್​ನಲ್ಲಿ ಇಟ್ಟಿರುತ್ತಾರೆ. ಇದರಿಂದ ಬ್ಯಾಟರಿ ಲೈಫ್​ ಕ್ಷಿಣಿಸುತ್ತ ಹೋಗುತ್ತದೆ. ಸ್ಮಾರ್ಟ್‌ಫೋನ್ ಬಳಕೆದಾರರು ನಿಮ್ಮ ಮೊಬೈನಲ್ಲಿರುವ ಈ ಸೇವೆಗಳ ಸೆಟ್ಟಿಂಗ್‌ ಅನ್ನು ಆಫ್​ ಮಾಡಿಕೊಳ್ಳಿ.
ಅನಗತ್ಯ ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡುವುದರಿಂದ ಬ್ಯಾಟರಿ ತ್ವರಿತವಾಗಿ ಖಾಲಿಯಾಗುತ್ತದೆ. ಇದಲ್ಲದೆ, ನಿಮ್ಮ ವೈಯಕ್ತಿಕ ಡೇಟಾ ಕೂಡ ಹ್ಯಾಕ್ ಆಗುವ ಅಪಾಯವಿರುತ್ತದೆ. ನ್ಯಾವಿಗೇಷನ್ ಮತ್ತು ಹವಾಮಾನ ವರದಿಗಳ ಅಪ್ಲಿಕೇಶನ್‌ಗಳ ಸೆಟ್ಟಿಂಗ್‌ಗಳನ್ನು ಅಗತ್ಯವಿದ್ದಾಗ ಆನ್ ಮಾಡಿಕೊಳ್ಳುವುದರಿಂದ ಬ್ಯಾಟರಿ ಆರೋಗ್ಯ ದೀರ್ಘ ಕಾಲ ಬರುವಂತೆ ನೋಡಿಕೊಳ್ಳಬಹುದು