ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಮನೆಯಲ್ಲೇ ಲಾಕ್ ಆಗಿರುವ ಕ್ರೀಡಾಪಟುಗಳು ಫಿಟ್ನೆಸ್, ಆನ್ಲೈನ್ ಮೂಲಕ ತರಬೇತಿ, ಟೂರ್ನಿಗಳಲ್ಲಿ ಮಗ್ನರಾಗಿದ್ದಾರೆ. ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದಲ್ಲೇ ಲಾಕ್ ಆಗಿರುವ ಭಾರತ ಮಹಿಳಾ ಹಾಕಿ ತಂಡ, ವಲಸೆ ಕಾರ್ವಿುಕರಿಗೆ ನೆರವಾಗುವ ಸಲುವಾಗಿ ’ಫನ್ ಫಿಟ್ನೆಸ್ ಚಾಲೆಂಜ್’ ಮೂಲಕ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ಮುಂದಿನ 18 ದಿನಗಳ ಕಾಲ ಚಾಲೆಂಜ್ ಮುಂದುವರಿಸಲು ನಿರ್ಧರಿಸಿರುವ ತಂಡ ಕನಿಷ್ಠ 1,000 ಕುಟುಂಬಗಳಿಗೆ ಸಹಾಯ ನೀಡಲು ಮುಂದಾಗಿದೆ.
ಚಾಲೆಂಜ್ ಹೇಗೆ: ಪ್ರತಿದಿನ ಆಟಗಾರ್ತಿಯೊಬ್ಬರು ಹೊಸ ಫಿಟ್ನೆಸ್ ಅಭ್ಯಾಸ ಮಾಡಲು ಸಾಮಾಜಿಕ ಜಾಲಾತಾಣದಲ್ಲಿ 10 ಮಂದಿಗೆ ಚಾಲೆಂಜ್ ಹಾಕುತ್ತಾರೆ. ಚಾಲೆಂಜ್ ಸ್ವೀಕರಿಸುವ ಮಂದಿ ಕನಿಷ್ಠ 100 ರೂಪಾಯಿ ದೇಣಿಗೆ ನೀಡಬೇಕು. ಈ ಮೂಲಕ ದೇಣಿಗೆ ಸಂಗ್ರಹಿಸಲು ತಂಡ ನಿರ್ಧರಿಸಿದೆ. ಸಂಗ್ರಹವಾದ ಮೊತ್ತವನ್ನು ದೆಹಲಿ ಮೂಲದ ಎನ್ಜಿಒ ಉದಯ ಫೌಂಡೇಷನ್ಗೆ ನೀಡಲಿದ್ದು, ಸ್ಥಳೀಯವಾಗಿ ಕಾಣಸಿಗುವ ವಲಸೆ ಕಾರ್ವಿುಕರು, ಸ್ಲಂ ನಿವಾಸಿಗಳಿಗೆ ಇದನ್ನು ವಿನಿಯೋಗಿಸಲಾಗುವುದು ಎಂದು ನಾಯಕಿ ರಾಣಿ ರಾಂಪಾಲ್ ಹೇಳಿದ್ದಾರೆ.