ಕ್ರೀಡೆ

ರನ್ ಸುರಿಮಳೆಯಲ್ಲಿ ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ: ಬೆಂಗಳೂರು ಮೂಲದ ರಚಿನ್ ರವೀಂದ್ರ ಆಟ ವ್ಯರ್ಥ

ಧರ್ಮಶಾಲಾ: ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಸರ್ವಾಧಿಕ ರನ್ ಸುರಿಮಳೆ ಕಂಡ ಪಂದ್ಯದಲ್ಲಿ ಹಾಲಿ ರನ್ನರ್‌ಅಪ್ ನ್ಯೂಜಿಲೆಂಡ್ ತಂಡ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು 5 ರನ್‌ಗಳಿಂದ ವೀರೋಚಿತ ಸೋಲು ಅನುಭವಿಸಿದೆ. ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ (116 ರನ್, 89 ಎಸೆತ, 9 ಬೌಂಡರಿ, 5 ಸಿಕ್ಸರ್) ಭರ್ಜರಿ ಶತಕ ಹಾಗೂ ಕೊನೆಯಲ್ಲಿ ಆಲ್ರೌಂಡರ್ ಜೇಮ್ಸ್ ನೀಶಾಮ್ (58 ರನ್, 39 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಹೋರಾಟದ ನಡುವೆಯೂ ಕಿವೀಸ್ ತಂಡ ಟೂರ್ನಿಯಲ್ಲಿ ಸತತ 2ನೇ ಸೋಲು ಕಂಡರೆ, ಪ್ಯಾಟ್ ಕಮ್ಮಿನ್ಸ್ ಪಡೆ ಸತತ 4ನೇ ಜಯದೊಂದಿಗೆ ಸೆಮೀಸ್ ಅವಕಾಶ ವೃದ್ಧಿಸಿಕೊಂಡಿದೆ.

ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸೀಸ್, ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ (109 ರನ್, 67 ಎಸೆತ, 10 ಬೌಂಡರಿ, 7 ಸಿಕ್ಸರ್) ಸ್ಫೋಟಕ ಶತಕ ಹಾಗೂ ಡೇವಿಡ್ ವಾರ್ನರ್ (81) ಒದಗಿಸಿದ ಭರ್ಜರಿ ಆರಂಭದ ನಡುವೆಯೂ, ಮಧ್ಯಮ ಸರದಿಯ ಬ್ಯಾಟರ್‌ಗಳ ವೈಲ್ಯದಿಂದ 49.2 ಓವರ್‌ಗಳಲ್ಲಿ 388 ರನ್‌ಗಳಿಗೆ ಆಲೌಟ್ ಆಯಿತು. ನಂತರ ಕೊನೇ ಎಸೆತದವರೆಗೂ ಹೋರಾಡಿದ ಕಿವೀಸ್ 9 ವಿಕೆಟ್‌ಗೆ 383 ರನ್‌ಗಳಿಸಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ: 49.2 ಓವರ್‌ಗಳಲ್ಲಿ 388 (ವಾರ್ನರ್ 81, ಹೆಡ್ 109, ಮಾರ್ಷ್ 36, ಮ್ಯಾಕ್ಸ್‌ವೆಲ್ 41, ಇಂಗ್ಲಿಸ್ 38, ಕಮ್ಮಿನ್ಸ್ 37*, ಫಿಲಿಪ್ಸ್ 37ಕ್ಕೆ3, ಬೌಲ್ಟ್ 77ಕ್ಕೆ 3). ನ್ಯೂಜಿಲೆಂಡ್: 9 ವಿಕೆಟ್‌ಗೆ 383 (ಕಾನ್ ವೇ 28, ಯಂಗ್ 32, ರಚಿನ್ 116, ಡೆರಿಲ್ 54, ಲಾಥಮ್ 21, ನಿಶಾಮ್ 58, ಆಡಂ ಜಂಪಾ 74ಕ್ಕೆ 3, ಕಮ್ಮಿನ್ಸ್ 66ಕ್ಕೆ 2). ಪಂದ್ಯಶ್ರೇಷ್ಠ: ಟ್ರಾವಿಸ್ ಹೆಡ್.