ಕ್ರೀಡೆ

ಭಾರತ-ಇಂಗ್ಲೆಂಡ್ ವೇಳಾಪಟ್ಟಿ ಪ್ರಕಟ, ಅಹಮದಾಬಾದ್‌ನಲ್ಲಿ ಅಹರ್ನಿಶಿ ಟೆಸ್ಟ್

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಒಂದು ಅಹರ್ನಿಶಿ ಪಂದ್ಯ ಸೇರಿದಂತೆ 2 ಟೆಸ್ಟ್ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಅಹಮದಾಬಾದ್‌ನಲ್ಲಿ ನಿರ್ಮಿಸಲಾಗಿರುವ ನೂತನ ಮೊಟೆರಾ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಇಂಗ್ಲೆಂಡ್ ತಂಡ ಭಾರತ ಪ್ರವಾಸದ ವೇಳೆ 4 ಟೆಸ್ಟ್, 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಮೂರು ಸರಣಿಗಳು ಕೇವಲ ಚೆನ್ನೈ, ಅಹಮದಾಬಾದ್ ಹಾಗೂ ಪುಣೆಯಲ್ಲಿ ಮಾತ್ರ ನಡೆಯಲಿವೆ. ಜನವರಿ 27 ರಂದು ಇಂಗ್ಲೆಂಡ್ ತಂಡ ಚೆನ್ನೈಗೆ ಆಗಮಿಸಲಿದೆ.

ಬಿಸಿಸಿಐ ಆವರ್ತನ ನಿಯಮದಂತೆ ಚೆನ್ನೈನಲ್ಲಿ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳು (ಫೆ.5 ರಿಂದ) ಹಾಗೂ ಮಾರ್ಚ್ 23 ರಿಂದ 28 ರವರೆಗೆ ಪುಣೆಯಲ್ಲಿ ಏಕದಿನ ಸರಣಿ ನಡೆಯಲಿದೆ. ಈ ಕುರಿತು ಗುರುವಾರ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಮೊಟೆರಾದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದ್ದು, ಟೆಸ್ಟ್ ಸರಣಿ ವೇಳೆ ಗುಜರಾತ್ ಕ್ರಿಕೆಟ್ ಸಂಸ್ಥೆಯ ಒಳಾಂಗಣ ಅಕಾಡೆಮಿಯ ಉದ್ಘಾಟನೆ ಮಾಡಲಾಗುವುದು ಎಂದರು. ಭಾರತದಲ್ಲಿ ನಡೆಯಲಿರುವ ಎರಡನೇ ಪಿಂಕ್ ಬಾಲ್ ಟೆಸ್ಟ್ ಇದಾಗಲಿದೆ. ಇದಕ್ಕೂ ಮೊದಲು ಕೋಲ್ಕತದಲ್ಲಿ ಬಾಂಗ್ಲಾದೇಶ ಎದುರು ಮೊದಲ ಅಹರ್ನಿಶಿ ಟೆಸ್ಟ್ ಆಯೋಜಿಸಲಾಗಿತ್ತು. ‘ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳು ಚೆನ್ನೈನಲ್ಲಿ ಹಾಗೂ ಬಳಿಕ ಅಹಮದಾಬಾದ್‌ನಲ್ಲಿ ಉಳಿದ ಎರಡು ಪಂದ್ಯಗಳು ನಡೆಯಲಿವೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಟೂರ್ನಿಯ ಕೊನೇ ಚರಣದ ಭಾಗವಾಗಿ ಏಕದಿನ ಸರಣಿಯೂ ಪುಣೆಯಲ್ಲಿ ನಡೆಯಲಿದೆ. ಕರೊನಾ ವೈರಸ್ ಭೀತಿಯಿಂದಾಗಿ ಸರಣಿಯನ್ನು ಕೇವಲ ಮೂರು ಸ್ಥಳಗಳಿಗಷ್ಟೇ ಸೀಮಿತಗೊಳಿಸಲಾಗಿದೆ ಎಂದು ಜಯ್ ಷಾ ಹೇಳಿದ್ದಾರೆ. ಬಯೋ ಸುರಕ್ಷತಾ ವಲಯದಲ್ಲಿ ಭಾರತ-ಇಂಗ್ಲೆಂಡ್ ಸರಣಿ ಆಯೋಜಿಸಲಾಗುತ್ತಿದೆ. ಚೆನ್ನೈ, ಅಹಮದಾಬಾದ್ ಹಾಗೂ ಪುಣೆಯಲ್ಲಿ ಸರಣಿ ಆಯೋಜಿಸಲು ಎದುರು ನೋಡುತ್ತಿದ್ದು, ಸರಣಿಯಲ್ಲಿ ಆಡಲು ಇಂಗ್ಲೆಂಡ್ ತಂಡ ಉತ್ಸುಕವಾಗಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಲಿ ಸಿಇಒ ಟಾಮ್ ಹ್ಯಾರಿಸನ್ ತಿಳಿಸಿದ್ದಾರೆ.

* ಪುಣೆ, ಚೆನ್ನೈ ಆಯ್ಕೆಗೆ ಕಾರಣ

ಅಹಮದಾಬಾದ್ ಹೊರತುಪಡಿಸಿ ಚೆನ್ನೈ ಹಾಗೂ ಪುಣೆ ನಗರಗಳಿಗೆ ಮಾತ್ರ ಮಣೆ ಹಾಕಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಗಳು, ಬಿಸಿಸಿಐ ಆವರ್ತನಾ ನಿಯಮದ ಪ್ರಕಾರ ಪುಣೆ ಹಾಗೂ ಚೆನ್ನೈ ಹಲವು ದಿನಗಳಿಂದ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಿರಲಿಲ್ಲ. ಹೀಗಾಗಿ ಈ ನಗರಗಳಿಗೆ ಮಣೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

* 14ನೇ ಐಪಿಎಲ್‌ಗೆ ಬುನಾದಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಯಶಸ್ವಿಯಾಗಿ ಆಯೋಜನೆಗೊಂಡರೆ 14ನೇ ಆವೃತ್ತಿಯ ಐಪಿಎಲ್‌ಗೆ ಭದ್ರ ಬುನಾದಿ ಹಾಕಿಕೊಟ್ಟಂತಾಗುತ್ತದೆ. ಕರೊನಾ ಭೀತಿಯಿಂದಾಗಿ ಯುಎಇಯಲ್ಲಿ 13ನೇ ಆವೃತ್ತಿ ಆಯೋಜಿಸಲಾಗಿತ್ತು.

* ಅಹಮದಾಬಾದ್‌ಗೆ ಸಿಂಹಪಾಲು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಷಾ ಅವರ ತವರು ಅಹಮದಾಬಾದ್‌ಗೆ ಸಿಂಹಪಾಲು ಒಲಿದಿದೆ. ನೂತನ ಸ್ಟೇಡಿಯಂ ನಿರ್ಮಾಣದ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ಅಹಮದಾಬಾದ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿರಲಿಲ್ಲ. 2014 ರ ನವೆಂಬರ್‌ನಲ್ಲಿ ಶ್ರೀಲಂಕಾ ಹಾಗೂ ಭಾರತ ನಡುವಿನ ಪಂದ್ಯವೇ ಕಡೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದರೆ, 2015ರಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯವೇ ಕಡೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವಾಗಿತ್ತು. ನೂತನ ಮೈದಾನದಲ್ಲಿ 11 ಪಿಚ್‌ಗಳನ್ನು ನಿರ್ಮಿಸಲಾಗಿದ್ದು, ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇದೇ ಮೈದಾನದಲ್ಲಿ ಪ್ರಾಯೋಗಿಕವಾಗಿ ಪಂದ್ಯವೊಂದನ್ನು ಆಯೋಜಿಸುವ ಸಾಧ್ಯತೆಗಳಿವೆ.ನೂತನ ಮೊಟೆರಾ ಸ್ಟೇಡಿಯಂಗೆ ಕಳೆದ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಮೊಟೆರಾ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದ್ದು, 1 ಲಕ್ಷದ 10 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.

* ಪ್ರೇಕ್ಷಕರಿಗಿದೆಯೇ ಅವಕಾಶ..?

ಪಂದ್ಯಗಳ ವೇಳೆ ಪ್ರೇಕ್ಷಕರಿಗೆ ಪ್ರವೇಶ ನೀಡುವ ಕುರಿತು ಬಿಸಿಸಿಐ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಂಡಂತೆ ಕಾಣುತ್ತಿಲ್ಲ. ಖಾಲಿ ಸ್ಟೇಡಿಯಂ ಅಥವಾ ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಕುರಿತು ಬಿಸಿಸಿಐ ಇನ್ನಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಭಾರತ ಸರ್ಕಾರದ ಕೋವಿಡ್-19 ಮಾರ್ಗಸೂಚಿಯಂತೆ ಪ್ರೇಕ್ಷಕರಿಗೆ ಅವಕಾಶ ನೀಡಲು ತೀರ್ಮಾನಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

* ಕರೊನಾ ಕಾಲದ ಮೊದಲ ಸರಣಿ

ಭಾರತದಲ್ಲಿ ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಲಿದೆ. ಕಳೆದ ಮಾರ್ಚ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಕಡೇ ಆಯೋಜನೆ ಗೊಂಡಿತ್ತು. ಆದರೆ, ಕರೊನಾ ವೈರಸ್ ಅಟ್ಟಹಾಸದಿಂದಾಗಿ ಪ್ರವಾಸಿ ತಂಡ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಸಾಗಿತ್ತು.

ಸರಣಿ ವೇಳಾಪಟ್ಟಿ

ಟೆಸ್ಟ್ ಸರಣಿ

ಪಂದ್ಯ, ದಿನಾಂಕ, ಸ್ಥಳ

ಮೊದಲ, ಫೆ.5-9, ಚೆನ್ನೈ

2ನೇ,ಫೆ.13-17, ಚೆನ್ನೈ

3ನೇ,ಫೆ.24-28, ಅಹಮದಾಬಾದ್

4ನೇ, ಮಾ.4-8, ಅಹಮದಾಬಾದ್

ಟಿ20 ಸರಣಿ

ಪಂದ್ಯ, ದಿನಾಂಕ, ಸ್ಥಳ

ಮೊದಲ, ಮಾ.12, ಅಹಮದಾಬಾದ್

2ನೇ, ಮಾ.14, ಅಹಮದಾಬಾದ್

3ನೇ, ಮಾ.16, ಅಹಮದಾಬಾದ್

4ನೇ, ಮಾ.18, ಅಹಮದಾಬಾದ್

5ನೇ, ಮಾ.20, ಅಹಮದಾಬಾದ್

ಏಕದಿನ ಸರಣಿ

ಪಂದ್ಯ, ದಿನಾಂಕ, ಸ್ಥಳ

ಮೊದಲ, ಮಾ.23, ಪುಣೆ

ಎರಡನೇ, ಮಾ.26, ಪುಣೆ

ಮೂರನೇ, ಮಾ.28, ಪುಣೆ

‘ಬಿಸಿಸಿಐ ಹಾಗೂ ಇಸಿಬಿ ವೈದ್ಯಕೀಯ ತಂಡಗಳ ಒಪ್ಪಿಗೆ ಹಾಗೂ ಮಾರ್ಗಸೂಚಿಯಂತೆ ಸರಣಿ ಆಯೋಜಿಸಲಾಗುತ್ತಿದೆ. ವಿಶ್ವ ಕ್ರಿಕೆಟ್‌ನ ಎರಡು ಬಲಿಷ್ಠ ತಂಡಗಳ ಸರಣಿ ಆಯೋಜಿಸಲು ಸನ್ನದ್ಧವಾಗಿದ್ದು, ಕರೊನಾ ಕಾಲದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮೊದಲ ಸರಣಿ ಇದಾಗಿದ್ದು, ಈ ಸರಣಿ ಅಭಿಮಾನಿಗಳಿಗೆ ರಂಜಿಸುವುದರಲ್ಲಿ ಅನುಮಾನವಿಲ್ಲ’ ಜಯ್ ಷಾ, ಬಿಸಿಸಿಐ ಕಾರ್ಯದರ್ಶಿ.