ಹೈದರಾಬಾದ್, ಅಕ್ಟೋಬರ್ 26: ಪಂದ್ಯದ ಕೊನೆಯ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ತನ್ನ ಮೂರನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಟೈ ಸಾಧಿಸಿತು. ಹೀಗಾಗಿ ಎರಡೂ ತಂಡಗಳು ತಲಾ 3 ಅಂಕ ಹಂಚಿಕೊಂಡವು. ಇದು ಹಾಲಿ ಟೂರ್ನಿಯಲ್ಲಿ ಟೈ ಆದ ಮೊದಲ ಪಂದ್ಯ.
ಗಚ್ಚಿ ಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು 31-31ರಲ್ಲಿ ಸಮಬಲ ಸಾಧಿಸಿದವು. ಪಂದ್ಯ ಮುಕ್ತಾಯಕ್ಕೆ 2 ನಿಮಿಷಗಳಿರುವಾಗ 31-29ರಲ್ಲಿ ಮುನ್ನಡೆ ಹೊಂದಿದ್ದ ಮುಂಬಾ ಇದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳಿರುವಾಗ 3(30-27) ಅಂಕ ಮುನ್ನಡೆ ಸಂಪಾದಿಸಿದ ಮಾಜಿ ಚಾಂಪಿಯನ್ಸ್ ಮುಂಬಾ ತಂಡ, ಪಂದ್ಯದ ಕೊನೆಯವರೆಗೂ ಕಾಯ್ದುಕೊಳ್ಳಲು ವಿಫಲಗೊಂಡ ಕಾರಣ ಸತತ ಎರಡನೇ ಗೆಲುವಿನ ಅವಕಾಶವನ್ನು ಕೈಚೆಲ್ಲಿತು.
ಯು ಮುಂಬಾ ತಂಡದ ಪರ ಮಂಜೀತ್ (7 ಅಂಕ), ಸೋಂಬಿರ್ (5 ಅಂಕ), ರೋಹಿತ್ ರಾಘವ್ (4 ಅಂಕ) ಗಮನ ಸೆಳೆದರೆ, ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ (8 ಅಂಕ), ಮಯೂರ್ ಕದಂ (6) ಗರಿಷ್ಠ ಅಂಕ ಸಂಪಾದಿಸಿದರು.
7 ಅಂಕಗಳ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಬೆಂಗಾಲ್, ಮುಂದಿನ ಐದು ನಿಮಿಷಗಳವರೆಗೂ ಮುನ್ನಡೆಯ ಅಂತರವನ್ನು ಕಾಯ್ದುಕೊಂಡಿತು. ಇದರ ಮಧ್ಯೆಯೇ ಮುಂಬಾ ಆಟಗಾರರು ಸಹ ಹಿನ್ನಡೆ ತಗ್ಗಿಸಲು ಹೋರಾಡಿದರು. 30 ನಿಮಿಷಗಳ ಹೊತ್ತಿಗೆ ತಂಡದ ಹಿನ್ನಡೆಯನ್ನು 22-24ಕ್ಕೆ ತಗ್ಗಿಸಿದ ಮುಂಬಾ, ಪ್ರಬಲವಾಗಿ ಪುಟಿದೇಳುವ ವಿಶ್ವಾಸ ಮೂಡಿಸಿತು.
33ನೇ ನಿಮಿಷದಲ್ಲಿ ಬೆಂಗಾಲ್ ತಂಡವನ್ನು ಮೊದಲ ಬಾರಿಗೆ ಆಲೌಟ್ ಮಾಡಿದ ಮುಂಬಾ, ತಂಡದ ಹೋರಾಟವನ್ನು 27-27ರಲ್ಲಿ ಸಮಗೊಳಿಸುವಲ್ಲಿ ಯಶ ಕಂಡಿತು. ಜತೆಗೆ 35ನೇ ಮಿಷಗಳ ಅಂತ್ಯಕ್ಕೆ 29-27ರಲ್ಲಿ ಮೇಲುಗೈ ಸಾಧಿಸಿ ಎದುರಾಳಿ ಮೇಲೆ ಒತ್ತಡ ಹೇರಿತು.
ರೇಡಿಂಗ್, ಟ್ಯಾಕಲ್ ಜತೆಗೆ ಎರಡು ಆಲೌಟ್ ಹಾಗೂ ಒಂದು ಬೋನಸ್ ಅಂಕ ಗಿಟ್ಟಿಸಿದ ಬೆಂಗಾಲ್ ವಾರಿಯರ್ಸ್ ತಂಡ ಪಂದ್ಯದ ಮೊದಲಾರ್ಧಕ್ಕೆ 20-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಮಣಿಂದರ್ ಸಿಂಗ್ ಅತ್ಯುತ್ತಮ ಆಟದ ಜತೆಗೆ ಸುಶೀಲ್, ನಿತಿನ್ , ನಿತೇಶ್ ಮತ್ತು ಫಜ್ಹಲ್ ಕೂಡ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಮಂಜೀತ್ ಕೇವಲ 4 ಅಂಕಗಳಿಗೆ ಸೀಮಿತರಾಗಿದ್ದು, ಮುಂಬಾ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿತು.
ಇದ್ಕಕೂ ಮುನ್ನ ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟ ನಡೆಸಿದ ಉಭಯ ತಂಡಗಳು ಮೊದಲ ಹತ್ತು ನಿಮಿಷಗಳ ಆಟದಲ್ಲಿ ಮುನ್ನಡೆಗಾಗಿ ಹರಸಾಹಸ ನಡೆಸಿದವು. ಮುಂಬಾ ಪರ ಮಂಜೀತ್ ಮತ್ತು ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಪೈಪೋಟಿಗೆ ಸಾಕ್ಷಿಯಾದರು. ಆದಾಗ್ಯೂ ಮೊದಲ ಹತ್ತು ನಿಮಿಷಗಳ ಆಟ ಮುಕ್ತಾಯಗೊಂಡಾಗ ಬೆಂಗಾಲ್ 8-7ರಲ್ಲಿ ಮೇಲುಗೈ ಸಾಧಿಸಿತು.
ಅಲ್ಪ ವಿರಾಮದ ನಂತರ ಆಟ ಮುಂದುವರಿಸಿದ ಬೆಂಗಾಲ್ ವಾರಿಯರ್ಸ್, ನಿಯಮಿತವಾಗಿ 2 ಅಂಕ ಗಳಿಸಿ 9-7ಕ್ಕೆ ಮುನ್ನಡೆಯನ್ನು ವಿಸ್ತರಿಸಿಕೊಂಡಿತು. ಶುಭಂ ಕುಮಾರ್ ಅವರನ್ನು ಟ್ಯಾಕಲ್ ಮಾಡಿದ ಸುಶೀಲ್ ಕಾಂಬ್ರೆಕರ್ ಪಂದ್ಯದಲ್ಲಿ ಮೊದಲ ಬಾರಿ ಮುಂಬಾ ತಂಡವನ್ನು ಆಲೌಟ್ ಮಾಡುವಲ್ಲಿ ಬೆಂಗಾಲ್ ವಾರಿಯರ್ಸ್ ಯಶಸ್ವಿಯಾಯಿತು. ಇದರ ಫಲವಾಗಿ ಬೆಂಗಾಲ್ ತಂಡ 16-9ರಲ್ಲಿ ಮೇಲುಗೈ ಸಾಧಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು.
ಅಕ್ಟೋಬರ್ 27ರಂದು ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್ ಹಾಗೂ ಯು.ಪಿ. ಯೋಧಾಸ್ ಮತ್ತು ಗುಜರಾತ್ ಜಯಂಟ್ಸ್ ತಂಡಗಳು ಪೈಪೋಟಿ ನಡೆಸಲಿವೆ.