ಕ್ರೀಡೆ

ಟೆಸ್ಟ್​ ವಿಶ್ವಕಪ್​ ಫೈನಲ್‌ಗೇರಲು ಭಾರತ-ಇಂಗ್ಲೆಂಡ್ ಪೈಪೋಟಿ, ರೇಸ್‌ನಲ್ಲಿವೆ ಆಸೀಸ್, ಕಿವೀಸ್

ಬೆಂಗಳೂರು: ಪ್ರಮುಖ ಆಟಗಾರರ ಗೈರಿನ ನಡುವೆಯೂ ಆಸ್ಟ್ರೇಲಿಯಾ ತಂಡವನ್ನು ಅದರದೇ ನೆಲದಲ್ಲಿ ಮಣಿಸಿ ಬೀಗಿರುವ ಭಾರತ ಮತ್ತು ಶ್ರೀಲಂಕಾದಲ್ಲಿ ಭರ್ಜರಿ ಗೆಲುವು ದಾಖಲಿಸಿ ಏಷ್ಯಾ ಉಪಖಂಡದಲ್ಲೂ ದಿಟ್ಟ ನಿರ್ವಹಣೆ ತೋರಬಲ್ಲೆನೆಂದು ಸಾಬೀತುಪಡಿಸಿರುವ ಇಂಗ್ಲೆಂಡ್ ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಸರಣಿಯ ಫಲಿತಾಂಶ "ಟೆಸ್ಟ್​ ವಿಶ್ವಕಪ್​" ಖ್ಯಾತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್ ಪ್ರವೇಶದ ದೃಷ್ಟಿಯಿಂದಲೂ ಉಭಯ ತಂಡಗಳಿಗೆ ಮಹತ್ವದ್ದೆನಿಸಿದೆ. ತವರಿನ ಅನುಕೂಲ ಹೊಂದಿರುವ ಭಾರತ ತಂಡ ‘ವಿಶ್ವ ಟೆಸ್ಟ್ ಚಾಂಪಿಯನ್’ ಪಟ್ಟಕ್ಕೆ ಸೆಣಸಲು ಹೆಚ್ಚಿನ ಅವಕಾಶ ಹೊಂದಿದ್ದರೆ, ಇಂಗ್ಲೆಂಡ್ ತಂಡ ತವರಿನಲ್ಲಿಯೇ (ಲಾರ್ಡ್ಸ್) ಜೂನ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಸಿ ಫೈನಲ್‌ಗೇರಲು ಕೊನೇಕ್ಷಣದವರೆಗೂ ಹೋರಾಡುವ ಹಂಬಲದಲ್ಲಿದೆ. ಇವೆರಡು ತಂಡಗಳ ಜತೆಗೆ ನ್ಯೂಜಿಲೆಂಡ್, ಅಸ್ಟ್ರೇಲಿಯಾ ತಂಡಗಳು ಡಬ್ಲ್ಯುಟಿಸಿ ಫೈನಲ್‌ಗೇರುವ ರೇಸ್‌ನಲ್ಲಿವೆ. ಅಲ್ಪ ಅವಕಾಶ ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡ, ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಸೋಲಿನೊಂದಿಗೆ ರೇಸ್‌ನಿಂದ ಹೊರಬಿದ್ದಿದೆ. ಡಬ್ಲ್ಯುಟಿಸಿ ಫೈನಲ್‌ಗೇರುವ ರೇಸ್‌ನಲ್ಲಿ ಉಳಿದಿರುವ 4 ತಂಡಗಳ ಸಂಕ್ಷಿಪ್ತ ಲೆಕ್ಕಾಚಾರ ಇಲ್ಲಿದೆ.

ಕರೊನಾದಿಂದ ನಿಯಮ ಬದಲು

2019ರಲ್ಲಿ ಮೊದಲ ಆವೃತ್ತಿಯ ಡಬ್ಲ್ಯುಟಿಸಿ ಆರಂಭಗೊಂಡಾಗ ಎಲ್ಲ 9 ತಂಡಗಳು ಆಡುವ ಗರಿಷ್ಠ 6 ಸರಣಿಗಳ ಪೈಕಿ ಗರಿಷ್ಠ ಅಂಕ ಗಳಿಸಿದ ತಂಡಗಳೆರಡು ಫೈನಲ್‌ಗೇರುವುದೆಂದು ನಿರ್ಧಾರವಾಗಿತ್ತು. ಆದರೆ ಕರೊನಾ ಹಾವಳಿಯಿಂದಾಗಿ ಡಬ್ಲ್ಯುಟಿಸಿಯ ಕೆಲ ಸರಣಿಗಳು ಮುಂದೂಡಲ್ಪಟ್ಟವು. ಈ ಪೈಕಿ ಕೆಲ ಸರಣಿಗಳು ಈಗಾಗಲೆ ರದ್ದುಗೊಂಡಿದ್ದರೆ, ಇನ್ನು ಕೆಲವು ಮರುನಿಗದಿಯಾಗಿವೆ. ರದ್ದುಗೊಂಡ ಸರಣಿಗಳನ್ನು ಐಸಿಸಿ, ಡ್ರಾ ಎಂದು ಪರಿಗಣಿಸಿದ್ದು ಉಭಯ ತಂಡಗಳಿಗೂ ಅಂಕ ಹಂಚಲಿದೆ. ಆದರೆ ಫೈನಲ್‌ಗೇರುವ 2 ತಂಡಗಳನ್ನು ಅಂಕಪಟ್ಟಿಯಲ್ಲಿ ಶೇಕಡಾವಾರು ಗರಿಷ್ಠ ಅಂಕಗಳಿಸಿದ ಆಧಾರದಲ್ಲಿ ನಿರ್ಧರಿಸಲಿದೆ. ಹೀಗಾಗಿ ಒಟ್ಟಾರೆಯಾಗಿ ಕಡಿಮೆ ಅಂಕ ಹೊಂದಿರುವ ತಂಡಗಳೂ, ಹೆಚ್ಚಿನ ಶೇಕಡಾವಾರು ಅಂಕ ಹೊಂದಿದ್ದರೆ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯುತ್ತದೆ.

ಭಾರತಕ್ಕೆ 80 ಅಂಕ ಅಗತ್ಯ

ಡಬ್ಲ್ಯುಟಿಸಿಯಲ್ಲಿ ಭಾರತಕ್ಕೆ ಈಗ ಇಂಗ್ಲೆಂಡ್ ವಿರುದ್ಧದ ಸರಣಿ ಮಾತ್ರ ಆಡಲು ಬಾಕಿ ಉಳಿದಿದೆ. ಅಂಕ ಗಳಿಕೆಯಲ್ಲಿ ಅಗ್ರಸ್ಥಾನ ಹೊಂದಿದ್ದರೂ, ಈ ಮುನ್ನ ಶೇಕಡಾವಾರು ಅಂಕ ಗಳಿಕೆಲ್ಲಿ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದ ಭಾರತ ತಂಡ ಬ್ರಿಸ್ಬೇನ್‌ನಲ್ಲಿ ಸಾಧಿಸಿದ ಐತಿಹಾಸಿಕ ಗೆಲುವಿನ ಬಳಿಕ ಮತ್ತೆ ಅಗ್ರಸ್ಥಾನಕ್ಕೆ ನೆಗೆದಿದೆ. ಶೇ. 71.7 ಅಂಕ ಹೊಂದಿರುವ ಈ ಸ್ಥಾನವನ್ನು ಉಳಿಸಿಕೊಂಡು ಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಬೇಕಾದರೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಕನಿಷ್ಠ 80 ಅಂಕ ಗಳಿಸುವುದು ಅಗತ್ಯ. ಅಂದರೆ ಭಾರತ ತಂಡ ಕನಿಷ್ಠ 2-0 ಅಥವಾ 3-1 ಅಂತರದಿಂದ ಸರಣಿ ಜಯಿಸಬೇಕಾಗುತ್ತದೆ. ಆಗ ಬೇರೆ ಯಾವ ಸರಣಿಯ ಫಲಿತಾಂಶಗಳೂ ಭಾರತದ ಫೈನಲ್ ಪ್ರವೇಶಕ್ಕೆ ಅಡ್ಡಿಯಾಗುವುದಿಲ್ಲ. ಇಲ್ಲದಿದ್ದರೆ ಕಿವೀಸ್ ಅಗ್ರಸ್ಥಾನಕ್ಕೇರಲಿದ್ದು, ಭಾರತ 2ನೇ ಸ್ಥಾನಕ್ಕೆ ಕುಸಿಯಲಿದೆ. ಆಗ ಭಾರತದ ಫೈನಲ್ ಪ್ರವೇಶ ಖಾತ್ರಿಯಾಗಬೇಕಾದರೆ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಫಲಿತಾಂಶದವರೆಗೆ ಕಾಯಬೇಕಾಗುತ್ತದೆ.

ಇಂಗ್ಲೆಂಡ್‌ಗೆ ಭಾರಿ ಗೆಲುವಿನ ಅನಿವಾರ‌್ಯತೆ

ಆಂಗ್ಲರಿಗೂ ಭಾರತ ವಿರುದ್ಧದ ಸರಣಿ ಡಬ್ಲ್ಯುಟಿಸಿಯ ಅಂತಿಮ ಸವಾಲಾಗಿದೆ. ಹೀಗಾಗಿ ಫೈನಲ್‌ಗೇರುವ ಹೋರಾಟಕ್ಕೆ ಇದುವೇ ನಿರ್ಣಾಯಕ ಸರಣಿಯಾಗಿದೆ. ಸದ್ಯ ಶೇ. 68.7 ಅಂಕದೊಂದಿಗೆ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್, ಫೈನಲ್‌ಗೇರಬೇಕಾದರೆ ಭಾರತವನ್ನು 3-0 ಅಥವಾ 4-0ಯಿಂದ ಮಣಿಸುವುದು ಅನಿವಾರ‌್ಯವಾಗಿದೆ. ಇಲ್ಲದಿದ್ದರೆ ಇಂಗ್ಲೆಂಡ್ ತಂಡಕ್ಕೆ ಭಾರತ, ನ್ಯೂಜಿಲೆಂಡ್ ತಂಡಗಳನ್ನು ಹಿಂದಿಕ್ಕಿ ಫೈನಲ್‌ಗೇರಲು ಯಾವುದೇ ಅವಕಾಶ ಬಾಕಿ ಉಳಿದಿರುವುದಿಲ್ಲ.

ನ್ಯೂಜಿಲೆಂಡ್ ಫೇವರಿಟ್

ನ್ಯೂಜಿಲೆಂಡ್ ತಂಡ ಡಬ್ಲ್ಯುಟಿಸಿಯಲ್ಲಿ ಈಗಾಗಲೆ ತನ್ನೆಲ್ಲ ಸರಣಿಗಳನ್ನು ಆಡಿ ಮುಗಿಸಿದೆ. ಆದರೂ ಸದ್ಯದ ಲೆಕ್ಕಾಚಾರದ ಪ್ರಕಾರ ಕಿವೀಸ್ ತಂಡ ಫೈನಲ್‌ಗೇರುವ 2 ತಂಡಗಳ ಪೈಕಿ ಒಂದಾಗಿರುವ ನಿರೀಕ್ಷೆ ಹೆಚ್ಚಿದೆ. ಸದ್ಯ ಶೇ. 70 ಅಂಕದೊಂದಿಗೆ 2ನೇ ಸ್ಥಾನದಲ್ಲಿರುವ ಕಿವೀಸ್, ಒಂದಕ್ಕಿಂತ ಹೆಚ್ಚು ತಂಡ ತನ್ನ ಶೇಕಡಾವಾರು ಅಂಕವನ್ನು ಮೀರಿಸದಿರಲಿ ಎಂದಷ್ಟೇ ಪ್ರಾರ್ಥಿಸಿಕೊಳ್ಳಬೇಕಿದೆ. ಇಂಗ್ಲೆಂಡ್ ತಂಡ ಭಾರತ ವಿರುದ್ಧ 4-0ಯಿಂದ ಗೆದ್ದು, ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾವನ್ನು 2-0ಯಿಂದ ಮಣಿಸಿದರಷ್ಟೇ ನ್ಯೂಜಿಲೆಂಡ್‌ಗೆ ಫೈನಲ್ ಸ್ಥಾನ ಕೈತಪ್ಪಲಿದೆ.

ಆಸ್ಟ್ರೇಲಿಯಾಕ್ಕೂ ಇದೆ ಅವಕಾಶ

ಬ್ರಿಸ್ಬೇನ್‌ನಲ್ಲಿ ಕಂಡ ಆಘಾತಕಾರಿ ಸೋಲು, ಡಬ್ಲ್ಯುಟಿಸಿ ಫೈನಲ್ ರೇಸ್‌ನಲ್ಲಿ ಆಸೀಸ್‌ಗೆ ಸ್ವಲ್ಪಮಟ್ಟಿನ ಹಿನ್ನಡೆ ತಂದಿದೆ. ಹೀಗಾಗಿ ಡಬ್ಲ್ಯುಟಿಸಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿರುವ 3 ಟೆಸ್ಟ್ ಪಂದ್ಯಗಳ ಕೊನೇ ಸರಣಿ ಆಸೀಸ್ ಪಾಲಿಗೆ ನಿರ್ಣಾಯಕವೆನಿಸಿದೆ. ಆದರೆ ದಕ್ಷಿಣ ಆಫ್ರಿಕಾದ ಕರೊನಾ ಪರಿಸ್ಥಿತಿಯಿಂದಾಗಿ ಈ ಸರಣಿ ಮುಂದಿನ ಮಾರ್ಚ್‌ನಲ್ಲಿ ನಡೆಯುವುದು ಇನ್ನೂ ಖಚಿತಗೊಂಡಿಲ್ಲ. ಈ ಸರಣಿ ರದ್ದುಗೊಂಡರೆ ಆಸೀಸ್ ಫೈನಲ್ ಆಸೆ ಕೈಚೆಲ್ಲಬೇಕಾಗುತ್ತದೆ. ಸದ್ಯ ಶೇ. 69.1 ಅಂಕದೊಂದಿಗೆ 3ನೇ ಸ್ಥಾನದಲ್ಲಿರುವ ಆಸೀಸ್, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕನಿಷ್ಠ 2-0ಯಿಂದ ಗೆದ್ದರಷ್ಟೇ ಫೈನಲ್‌ಗೇರಲಿದೆ. ಇದಕ್ಕಿಂತ ಕಡಿಮೆ ಅಂತರದಲ್ಲಿ ಸರಣಿ ಗೆದ್ದರೆ ಆಗ ಇತರ ಸರಣಿಗಳ ಫಲಿತಾಂಶದ ಆಧಾರದಲ್ಲಿ ಫೈನಲ್ ಸ್ಥಾನ ನಿರ್ಧಾರವಾಗಲಿದೆ.