ದಾವಣಗೆರೆ: ಗ್ರಾಮೀಣ ಪ್ರತಿಭೆಗಳು ಕ್ರಿಕೆಟ್‌ನಲ್ಲಿ ನಗರ ಪ್ರದೇಶದವರಿಗಿಂತ ತಾವೇನೂ ಕಡಿಮೆಯಿಲ್ಲ ಎನ್ನುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದರು.
ಅಸೋಸಿಯೇಷನ್ ವತಿಯಿಂದ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತುಮಕೂರು ವಲಯದ ವಾರ್ಷಿಕ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದಾವಣಗೆರೆಯಿಂದ ಬಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ವಿನಯ್ ಕುಮಾರ್ ಯುವ ಕ್ರಿಕೆಟಿಗರಿಗೆ ಉತ್ತಮ ಉದಾಹರಣೆಯಾಗಿದ್ದಾರೆ. ಭಾರತ ತಂಡದಲ್ಲಿ ಟೆಸ್ಟ್, ಏಕದಿನ ಮತ್ತು ಟಿ-20 ಪಂದ್ಯಗಳನ್ನು ಆಡಿ ಗಮನ ಸೆಳೆದಿದ್ದಾರೆ ಎಂದರು.
ಜಿಲ್ಲೆಗಳಲ್ಲಿರುವ ಪ್ರತಿಭಾವಂತ ಕ್ರಿಕೆಟಿಗರು ನಗರ ಪ್ರದೇಶಗಳಿಗೆ ಬಂದು ಅಲ್ಲಿನ ಆಟಗಾರರಿಗೆ ಕ್ರೀಡೆಯನ್ನು ಹೇಳಿಕೊಡುವ ಮಟ್ಟಕ್ಕೆ ಸಾಧನೆ ಮಾಡಬೇಕು. ಕೆ.ಎಸ್.ಸಿ.ಎ. ಕೂಡಾ ಇದಕ್ಕೆ ಪ್ರೋತ್ಸಾಹ ನೀಡುತ್ತದೆ. ದಾವಣಗೆರೆ ಜಿಲ್ಲೆ ಮತ್ತು ತುಮಕೂರು ವಲಯದಲ್ಲಿ ಕ್ರಿಕೆಟ್ ವಾತಾವರಣವನ್ನು ಸುಧಾರಿಸಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಉತ್ತಮ ಮೈದಾನಗಳನ್ನು ಹೊಂದಿದ್ದೇವೆ. ಸೌಲಭ್ಯಗಳ ದೃಷ್ಟಿಯಿಂದ ಸಂಸ್ಥೆಯು ಇಷ್ಟು ಕೆಲಸ ಮಾಡಿದೆ. ಇನ್ನುಮುಂದೆ ಯುವ ಕ್ರಿಕೆಟಿಗರನ್ನು ತರಬೇತಿಗೊಳಿಸುವ ಜವಾಬ್ದಾರಿ ಜಿಲ್ಲೆ ಮತ್ತು ವಲಯಗಳ ಹೆಗಲ ಮೇಲಿದೆ. ತುಮಕೂರು ವಲಯದಲ್ಲಿ ವಿನಯ್ ಕುಮಾರ್ ಅವರಂತೆ ಇನ್ನೂ ಅನೇಕ ಕ್ರಿಕೆಟಿಗರು ಬರುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮಾಜಿ ರಣಜಿ ಆಟಗಾರ ಜೆ. ಅಭಿರಾಮ್, ತುಮಕೂರು ವಲಯದ ಸಂಚಾಲಕ ಕೆ. ಶಶಿಧರ್, ಮಾಜಿ ಸಂಚಾಲಕ ಸತೀಶ್ಚಂದ್ರ, ಡಾ. ಜಯರಾಮ್, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಇದ್ದರು. ಗೋಪಿ ನಿರೂಪಿಸಿದರು. ಹರ್ಷಿತಾ ಪಿ.ಜಿ. ಪ್ರಾರ್ಥಿಸಿದರು.