ಕ್ರೀಡೆ

ಗೆಲುವಿನ ಹಳಿ ಏರಲು ಆರ್‌ಸಿಬಿ-ಸಿಎಸ್‌ಕೆ ಹಣಾಹಣಿ

ದುಬೈ: ಅಂಕಪಟ್ಟಿಯಲ್ಲಿ ಮಧ್ಯಮ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್-13ರಲ್ಲಿ ಶನಿವಾರದ 2ನೇ ಪಂದ್ಯದಲ್ಲಿ ಎದುರಾಗಲಿವೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ದಕ್ಷಿಣ ಭಾರತದ ಡರ್ಬಿ ಎನಿಸಿಕೊಂಡಿದೆ. ಐಪಿಎಲ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಉಭಯ ತಂಡಗಳ ನಡುವಿನ ಕದನ ಕುತೂಹಲ ಕೆರಳಿಸಿದೆ. ಹಿಂದಿನ ಪಂದ್ಯಗಳಲ್ಲಿ ಸೋಲನುಭವಿಸಿರುವ ಉಭಯ ತಂಡಗಳು ಗೆಲುವಿನ ಲಯಕ್ಕೆ ಮರಳಲು ಹೋರಾಡಲಿವೆ. ಟೂರ್ನಿ ಇತಿಹಾಸದಲ್ಲಿ ಸಿಎಸ್‌ಕೆ ತಂಡವೇ ಇದುವರೆಗೆ ಮೇಲುಗೈ ಸಾಧಿಸುತ್ತ ಬಂದಿದೆ. ಆದರೆ ಹಾಲಿ ಫಾರ್ಮ್‌ನಲ್ಲಿ ಆರ್‌ಸಿಬಿ ತಂಡವೇ ಫೇವರಿಟ್ ಎನಿಸಿದೆ.

ಸುಧಾರಿಸುವುದೇ ಆರ್‌ಸಿಬಿ ನಿರ್ವಹಣೆ: ಹಾಲಿ ವರ್ಷ ಕೊಂಚ ಮಟ್ಟಿಗೆ ಲಯ ಕಂಡುಕೊಳ್ಳಲು ಯಶಸ್ವಿಯಾಗಿರುವ ಆರ್‌ಸಿಬಿ, ಇದುವರೆಗೆ ಆಡಿರುವ 5 ಪಂದ್ಯಗಳಿಂದ 3ರಲ್ಲಿ ಗೆದ್ದು, 2ರಲ್ಲಿ ಸೋತು, 6 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ನಾಯಕ ವಿರಾಟ್ ಕೊಹ್ಲಿ, ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್, ಎಬಿ ಡಿವಿಲಿಯರ್ಸ್‌, ಬ್ಯಾಟಿಂಗ್‌ನಲ್ಲಿ ಲಯದಲ್ಲಿದ್ದರೂ ಅಸ್ಥಿರ ನಿರ್ವಹಣೆ ತಂಡವನ್ನು ಕಾಡುತ್ತಿದೆ. ಇದಕ್ಕೆ ಡೆಲ್ಲಿ ವಿರುದ್ಧ ದಿಢೀರ್ ಕುಸಿತ ಕಂಡಿದ್ದೇ ಸಾಕ್ಷಿ. ಬೌಲಿಂಗ್ ವಿಭಾಗದಲ್ಲಿ ನೋಡಿದರೆ, ಯುಜುವೇಂದ್ರ ಚಾಹಲ್ ಹೊರತುಪಡಿಸಿದರೆ, ಉಮೇಶ್ ಯಾದವ್, ಮೊಹಮದ್ ಸಿರಾಜ್, ನವದೀಪ್ ಸೈನಿ ದುಬಾರಿಯಾಗುತ್ತಿದ್ದು, ವೇಗದ ಬೌಲಿಂಗ್‌ನಲ್ಲಿ ಆಯ್ಕೆಯೇ ದೊಡ್ಡ ಗೊಂದಲವಾಗಿದೆ. ಶ್ರೀಲಂಕಾದ ಅನುಭವಿ ಇಸುರು ಉದಾನಗೆ ಸೂಕ್ತ ಬೆಂಬಲದ ಅಗತ್ಯವಿದೆ.

ಬದಲಾವಣೆ ನಿರೀಕ್ಷೆಯಲ್ಲಿ ಸಿಎಸ್‌ಕೆ: ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು ಗೆಲುವಿನಂಚಿನಲ್ಲಿ ನಿರಾಸೆ ಅನುಭವಿಸಿದ ಎಂಎಸ್ ಧೋನಿ ಬಳಗ ಸ್ವತಃ ಅಭಿಮಾನಿಗಳಿಂದಲೇ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ. ಕೇದಾರ್ ಜಾಧವ್ ಮಂದಗತಿ ಬ್ಯಾಟಿಂಗ್ ಫಲವಾಗಿ ಸಿಎಸ್‌ಕೆ ಉತ್ತಮ ಆರಂಭದ ನಡುವೆಯೂ 10 ರನ್‌ಗಳಿಂದ ಸೋಲನುಭವಿಸಿತ್ತು. ಸಾಕಷ್ಟು ಟೀಕೆಗೆ ಗುರಿಯಾಗಿರುವ ಕೇದಾರ್ ಜಾಧವ್ ಅವರನ್ನು ತಂಡದಿಂದ ಹೊರಗಿಡುವ ಸಾಧ್ಯತೆ ಇದೆ. ಬೌಲಿಂಗ್ ಉತ್ತಮ ನಿರ್ವಹಣೆ ಬರುತ್ತಿದ್ದರೂ ಬ್ಯಾಟ್ಸ್‌ಮನ್‌ಗಳ ವೈಲ್ಯ ತಂಡವನ್ನು ಕಾಡುತ್ತಿದೆ. ಸಿಎಸ್‌ಕೆ ಟೂರ್ನಿಯಲ್ಲಿ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಜಯ ದಾಖಲಿಸಿ, 4ರಲ್ಲಿ ಸೋಲನುಭವಿಸಿದೆ.

ಟೀಮ್ ನ್ಯೂಸ್:

ಆರ್‌ಸಿಬಿ: ತಂಡದಲ್ಲಿ ಹೆಚ್ಚು ಬದಲಾವಣೆ ಕಾಣುವ ಸಾಧ್ಯತೆ ಕಡಿಮೆ. ಒಂದು ವೇಳೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡು ತಂಡಕ್ಕೆ ವಾಪಸಾದರೆ, ಮೊಯಿನ್ ಅಲಿ ಹೊರಗಳಿಯಲಿದ್ದಾರೆ. ಮೊಹಮದ್ ಸಿರಾಜ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಸಂಭಾವ್ಯ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿಕೀ), ಶಿವಂ ದುಬೆ, ಕ್ರಿಸ್ ಮಾರಿಸ್/ಮೊಯಿನ್ ಅಲಿ, ವಾಷಿಂಗ್ಟನ್ ಸುಂದರ್, ಇಸುರು ಉದಾನ, ನವದೀಪ್ ಸೈನಿ, ಮೊಹಮದ್ ಸಿರಾಜ್, ಯಜುವೇಂದ್ರ ಚಾಹಲ್.

ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ಎದುರು 59 ರನ್ ಸೋಲು.

ಸಿಎಸ್‌ಕೆ: ಅಗ್ರ ಕ್ರಮಾಂಕದ ಉತ್ತಮ ನಿರ್ವಹಣೆ ನಡುವೆಯೂ ಮಧ್ಯಮ ಕ್ರಮಾಂಕದಲ್ಲಿ ಸಿಎಸ್‌ಕೆ ದಿಢೀರ್ ಕುಸಿತ ಅನುಭವಿಸುತ್ತಿದೆ. ಕಳೆದ ಪಂದ್ಯದಲ್ಲಿ ತಂಡದ ಪಾಲಿಗೆ ವಿಲನ್ ಆಗಿದ್ದ ಕೇದಾರ್ ಜಾಧವ್ ಬದಲಿಗೆ ಋತುರಾಜ್ ಗಾಯಕ್ವಾಡ್ ಅಥವಾ ಆರ್.ಜಗದೀಶನ್ ಅವಕಾಶ ಪಡೆಯಬಹುದು. ಹಿಂದಿನ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದ್ದ ಕರ್ಣ್ ಶರ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ.

ಸಂಭಾವ್ಯ ತಂಡ: ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಫಾ ಫ್ ಡು ಪ್ಲೆಸಿಸ್, ಎಂಎಸ್ ಧೋನಿ (ನಾಯಕ, ವಿಕೀ), ಸ್ಯಾಮ್ ಕರ‌್ರನ್, ಕೇದಾರ್ ಜಾಧವ್/ಋತುರಾಜ್ ಗಾಯಕ್ವಾಡ್/ಜಗದೀಶನ್, ಡ್ವೈನ್ ಬ್ರಾವೊ, ರವೀಂದ್ರ ಜಡೇಜಾ, ಕರ್ಣ್ ಶರ್ಮ, ಶಾರ್ದೂಲ್ ಠಾಕೂರ್, ದೀಪಕ್ ಚಹರ್.

ಕಳೆದ ಪಂದ್ಯ: ಕೆಕೆಆರ್ ಎದುರು 10 ರನ್ ಸೋಲು.

ಪಂದ್ಯ ಆರಂಭ: ರಾತ್ರಿ: 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 24, ಆರ್‌ಸಿಬಿ: 8, ಸಿಎಸ್‌ಕೆ: 15, ರದ್ದು: 1