ನವದೆಹಲಿ: ಭಾರತದ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಮನದ ಬೇಸರವೊಂದನ್ನು ಲಾಕ್ಡೌನ್ ಸಮಯದಲ್ಲಿ ಹೊರಹಾಕಿದ್ದಾರೆ. ಭಾರತ ತಂಡದ ನಾಯಕರ ಪೈಕಿ ಸೌರವ್ ಗಂಗೂಲಿ ಅವರಿಂದ ತಮಗೆ ದೊರೆತಷ್ಟು ಬೆಂಬಲ ಮತ್ತಿಬ್ಬರು ಪ್ರಮುಖ ನಾಯಕರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರಿಂದ ದೊರೆತಿರಲಿಲ್ಲ ಎಂದು ಯುವಿ ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
‘ನಾನು ಸೌರವ್ (ಗಂಗೂಲಿ) ನಾಯಕತ್ವದಡಿಯಲ್ಲಿ ಆಡಿದಾಗ ಅವರಿಂದ ಸಾಕಷ್ಟು ಬೆಂಬಲ ಲಭಿಸಿತ್ತು. ಬಳಿಕ ಮಹಿ (ಧೋನಿ) ನಾಯಕರಾದರು. ಸೌರವ್, ಮಹಿ ನಡುವೆ ಆಯ್ಕೆ ಕಷ್ಟ. ಸೌರವ್ ನಾಯಕತ್ವದಡಿ ಹೆಚ್ಚು ಸ್ಮರಣೀಯವಾಗಿತ್ತು. ಯಾಕೆಂದರೆ ಅವರು ಹೆಚ್ಚು ಬೆಂಬಲ ನೀಡಿದ್ದರು. ಮಹಿ, ವಿರಾಟ್ (ಕೊಹ್ಲಿ) ಅವರಿಂದ ನನಗೆ ಅಷ್ಟು ಬೆಂಬಲ ದೊರೆತಿರಲಿಲ್ಲ’ ಎಂದು ಮಾಜಿ ಆಲ್ರೌಂಡರ್ ಯುವರಾಜ್ ಹೇಳಿದ್ದಾರೆ. ಒಟ್ಟು 304 ಏಕದಿನ ಪಂದ್ಯವಾಡಿರುವ ಯುವರಾಜ್, ಈ ಪೈಕಿ 110 ಪಂದ್ಯಗಳನ್ನು ಗಂಗೂಲಿ, 104 ಪಂದ್ಯಗಳನ್ನು ಧೋನಿ ಮತ್ತು 11 ಪಂದ್ಯಗಳನ್ನು ನಾಯಕತ್ವದಡಿಯಲ್ಲಿ ಆಡಿದ್ದಾರೆ. ಧೋನಿ ನಾಯಕತ್ವದಲ್ಲಿ ಯುವಿ 55 ಟಿ20 ಪಂದ್ಯಗಳನ್ನೂ ಆಡಿದ್ದಾರೆ. 2017ರ ಜೂನ್ನಲ್ಲೇ ಭಾರತ ಪರ ಕೊನೇ ಪಂದ್ಯವಾಡಿದ್ದ ಯುವರಾಜ್, ಕಳೆದ ವರ್ಷವಷ್ಟೇ ಅಧಿಕೃತವಾಗಿ ವಿದಾಯ ಘೋಷಿಸಿದ್ದರು. -ಪಿಟಿಐ/ಏಜೆನ್ಸೀಸ್
ಟೀಕೆಗಳಿಗೆ ಯುವಿ ಉತ್ತರ
ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಫೌಂಡೇಷನ್ಗೆ ನೆರವಾಗಲು ಮನವಿ ಸಲ್ಲಿಸಿದ ಬಳಿಕ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಯುವರಾಜ್ ಸಿಂಗ್, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ‘ಆರೋಗ್ಯ ಸೇವೆ ಮತ್ತು ಬಡವರಿಗೆ ಸಹಾಯ ಮಾಡುತ್ತಿರುವ ಎರಡೂ ದೇಶಗಳ ಜನರಿಗೆ ನೆರವಾಗುವಂತೆ ನಾನು ಕೇಳಿಕೊಂಡಿದ್ದೆ. ಯಾರ ಭಾವನೆಗಳಿಗೂ ಧಕ್ಕೆ ತರುವುದು ನನ್ನ ಉದ್ದೇಶ ಆಗಿರಲಿಲ್ಲ. ನಾನು ಭಾರತೀಯ. ಯಾವಾಗಲೂ ಮಾನವತ್ವದ ಪರ ಇರುತ್ತೇನೆ. ಜೈ ಹಿಂದ್’ ಎಂದು ಯುವಿ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.