ಕ್ರೀಡೆ

ಕ್ರೀಡಾಸ್ಫೂರ್ತಿ ಯಶಸ್ಸಿಗೆ ಸಹಕಾರಿ: ಪ್ರೊ. ವೀರಭದ್ರಪ್ಪ

ಶಿವಮೊಗ್ಗ: ಯಾವುದೇ ಆಟೋಟ, ಕ್ರೀಡೆಗಳಲ್ಲಿ ಯಶಸ್ಸು ಪಡೆಯಲು ತಾಳ್ಮೆ, ಪರಿಶ್ರಮ, ಸತತ ಪ್ರಯತ್ನ ಹಾಗೂ ಕ್ರೀಡಾಸ್ಫೂರ್ತಿ ಅಗತ್ಯ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಲುವಾಗಿ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ದಿನಗಳ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೇಶವು ತಾಳ್ಮೆ, ಪರಿಶ್ರಮ, ಸತತ ಪ್ರಯತ್ನಗಳಂತಹ ಸ್ಫೂರ್ತಿಗಳನ್ನು ಅಳವಡಿಸಿಕೊಂಡು ಸುದೀರ್ಘ ಹೋರಾಟ ನಡೆಸಿ ಸ್ವಾತಂತ್ರೃ ಪಡೆಯಿತು. ಅಥ್ಲೆಟಿಕ್ ಸೇರಿದಂತೆ ಎಲ್ಲ ಕ್ರೀಡೆಗಳೂ ಇಂತಹುದೇ ಗುಣ ಮತ್ತು ಪ್ರಯತ್ನಶೀಲತೆಯನ್ನು ಬೇಡುತ್ತವೆ. ಕ್ರೀಡಾಸ್ಫೂರ್ತಿಯಂತಹ ನೈತಿಕ ಗುಣಗಳನ್ನು ಬೆಳೆಸಿಕೊಂಡಲ್ಲಿ ವೈಯಕ್ತಿಕ, ಸಾಮಾಜಿಕ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದರು.

ದೇಶವು ಸ್ವಾತಂತ್ರೃ ಪಡೆದುಕೊಂಡ ಸಂಭ್ರಮಕ್ಕೆ ಅಮೃತ ಮಹೋತ್ಸವ ಸುಸಂದರ್ಭ ಒದಗಿಬಂದಿದ್ದು, ಪ್ರತಿಯೊಬ್ಬ ಭಾರತೀಯನೂ ಇದನ್ನು ಆಚರಿಸಬೇಕು. ಈಗಾಗಲೇ ಸರ್ಕಾರವು ತಿಳಿಸಿರುವಂತೆ ನಾವೆಲ್ಲರೂ ಹಾಗೂ ವಿವಿಯ ಪ್ರತಿ ವಿದ್ಯಾರ್ಥಿಯು ತಮ್ಮ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆಯಬೇಕು. ಸ್ವಾತಂತ್ರೋತ್ಸವವನ್ನು ಸಂಭ್ರಮಿಸಬೇಕು ಎಂದರು. ಮೂರು ದಿನದ ಸ್ಪರ್ಧೆಯಲ್ಲಿ ಚಿತ್ರಕಲೆ, ಸ್ವಾತಂತ್ರೃ ಗೀತೆ ಗಾಯನ, ಸ್ವಾತಂತ್ರೃಕ್ಕಾಗಿ ಓಟದ ಸ್ಪರ್ಧೆ, ಚರ್ಚಾ ಸ್ಪರ್ಧೆ, ನಾಟಕ, ಪ್ರಬಂಧ ಲೇಖನ ಹಾಗೂ ಪೋಸ್ಟರ್ ತಯಾರಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.