ನವದೆಹಲಿ/ಕೊಲಂಬೊ: ಲಾಕ್ಡೌನ್ ನಡುವೆಯೂ ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಗಾಗಲೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್ 13ನೇ ಆವೃತ್ತಿಯನ್ನು ಭಾರತದಲ್ಲಿ ಆಯೋಜಿಸಲು ಯಾವಾಗ ಅನುಮತಿ ದೊರೆಯಬಹುದು ಎಂಬ ಯಾರಲ್ಲೂ ಸ್ಪಷ್ಟತೆ ಇಲ್ಲ.
ಇನ್ನೂ 3ರಿಂದ 6 ತಿಂಗಳ ಕಾಲ ಭಾರತದಲ್ಲಿ ಐಪಿಎಲ್ ಆಯೋಜನೆ ಕಷ್ಟ ಎನ್ನಲಾಗುತ್ತಿದೆ. ಇದರ ನಡುವೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಐಪಿಎಲ್ ಆಯೋಜನೆಗೆ ಮುಂದೆ ಬಂದಿದೆ. ಆದರೆ ಈ ಬಗ್ಗೆ ಈಗಲೇ ಏನನ್ನೂ ಹೇಳಲಾಗದು ಎಂದು ಬಿಸಿಸಿಐ ಸದ್ಯಕ್ಕೆ ಜಾರಿಕೊಂಡಿದೆ. ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 13 ಸಾವಿರ ದಾಟಿದ್ದರೆ, ಶ್ರೀಲಂಕಾದಲ್ಲಿ 238 ಪ್ರಕರಣಗಳಷ್ಟೇ ದಾಖಲಾಗಿವೆ. ಈ ಪೈಕಿ 7 ಮಂದಿ ಮೃತಪಟ್ಟಿದ್ದರೆ, 70 ಮಂದಿ ಚೇತರಿಕೆ ಕಂಡಿದ್ದಾರೆ. ಹೀಗಾಗಿ ಭಾರತಕ್ಕಿಂತ ಬೇಗನೆ ಶ್ರೀಲಂಕಾದಲ್ಲಿ ಕರೊನಾ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ.
ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಶ್ರೀಲಂಕಾದ ಅಧ್ಯಕ್ಷ ಶಮ್ಮಿ ಸಿಲ್ವಾ, ನಾವು ಐಪಿಎಲ್ಗೆ ಆತಿಥ್ಯ ವಹಿಸಲು ಸಿದ್ಧರಿದ್ದೇವೆ. ಶೀಘ್ರದಲ್ಲೇ ಪತ್ರ ಬರೆಯುವ ಮೂಲಕ ಬಿಸಿಸಿಐಗೆ ಆಹ್ವಾನ ನೀಡಲಿದ್ದೇವೆ ಎಂದಿದ್ದಾರೆ.