ಮೆಲ್ಬೋರ್ನ್: ಮುಂಬರುವ ಟಿ20 ವಿಶ್ವಕಪ್ ಟೂರ್ನಿಯನ್ನು ನಿಗದಿಯಂತೆಯೇ ಆಯೋಜಿಸುವ ಅಥವಾ ಮುಂದೂಡುವ ಬಗ್ಗೆ ಯಾವುದೇ ಅವಸರದ ನಿರ್ಧಾರವನ್ನು ತೆಗೆದುಕೊಳ್ಳದಿರಲು ಐಸಿಸಿ ನಿರ್ಧರಿಸಿದೆ. ಕರೊನಾ ಹಾವಳಿಯ ನಡುವೆ ಟೂರ್ನಿ ಸಂಘಟಿಸಲು ಇರುವ ಎಲ್ಲ ಅವಕಾಶಗಳನ್ನು ಪರಿಶೀಲನೆ ನಡೆಸುತ್ತಿರುವ ಐಸಿಸಿ, ಸೂಕ್ತ ಸಮಯದಲ್ಲಿ ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಹಾಲಿ ವೇಳಾಪಟ್ಟಿಯ ಪ್ರಕಾರ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದೆ. ಆದರೆ ಈಗ ಜಗತ್ತಿನ ಎಲ್ಲೆಡೆ ಕ್ರೀಡಾ ಚಟುವಟಿಕೆಗಳು ಬಂದ್ ಆಗಿರುವುದರಿಂದ ಈ ಟೂರ್ನಿ ನಿಗದಿಯಂತೆ ನಡೆಯುವ ಬಗ್ಗೆ ಅನುಮಾನಗಳು ಮೂಡಿವೆ. ಆತಿಥೇಯ ಆಸ್ಟ್ರೇಲಿಯಾದಲ್ಲಿ 6 ತಿಂಗಳ ಕಾಲ ವಿದೇಶಿ ಪ್ರವಾಸಿಗರಿಗೆ ನಿರ್ಬಂಧವನ್ನೂ ಹಾಕಲಾಗಿದ್ದು, ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ಅಥವಾ 2022ಕ್ಕೆ ಮುಂದೂಡುವ ಬಗ್ಗೆಯೂ ವರದಿಗಳು ಬರುತ್ತಿವೆ.