ದುಬೈ: ವೈದ್ಯಕೀಯ ಅಧಿಕಾರಿ ನೇಮಕ, ಆಟಗಾರರಿಗೆ 14 ದಿನ ಐಸೋಲೇಷನ್ ಶಿಬಿರ, ಅಂಪೈರ್ಗಳು ಗ್ಲೌಸ್ ಬಳಕೆ ಕಡ್ಡಾಯ ಸೇರಿದಂತೆ, ಕರೊನಾ ವೈರಸ್ ಭೀತಿಯಿಂದ ಮುಕ್ತಗೊಂಡ ಬಳಿಕ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡರೆ ಅಳವಡಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಾರ್ಗಸೂಚಿ ಪ್ರಕಟಿಸಿದೆ. ಪಂದ್ಯಗಳ ವೇಳೆ ಹೆಚ್ಚು ಸುರಕ್ಷತೆ ಕಾಯ್ದುಕೊಳ್ಳುವ ಸಲುವಾಗಿ ಐಸಿಸಿ ಕೆಲವೊಂದು ಶಿಷ್ಟಾಚಾರ ರೂಪಿಸಿದೆ. ಮೂರು ಮಾದರಿಯಲ್ಲಿ ಮಾರ್ಗಸೂಚಿಗಳನ್ನು ಸಿದ್ಧತೆ ಪಡಿಸಿದೆ. ತರಬೇತಿಗಾಗಿ, ಆಟಕ್ಕಾಗಿ ಹಾಗೂ ಪ್ರವಾಸಕ್ಕಾಗಿ ಹೀಗೆ ಮೂರು ಮಾದರಿಗೂ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಬೌಲರ್ಗಳಿಗೆ ಸಿದ್ಧತೆಗೆ ಬೇಕು 2-3 ತಿಂಗಳು: ಟೆಸ್ಟ್ ಸರಣಿ ಆರಂಭಗೊಂಡರೆ ಸಿದ್ಧತೆಗಾಗಿ ಬೌಲರ್ಗಳಿಗೆ 2 ರಿಂದ 3 ತಿಂಗಳು ಬೇಕಾಗುತ್ತದೆ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ. 2-3 ತಿಂಗಳು ಅವಕಾಶ ನೀಡಿದರಷ್ಟೇ ಬೌಲರ್ಗಳು ಗಾಯದ ಸಮಸ್ಯೆಗೆ ತುತ್ತಾಗುವುದಿಲ್ಲ. ಕ್ರಿಕೆಟ್ನಲ್ಲಿ ಹೆಚ್ಚು ಗಾಯಕ್ಕೆ ತುತ್ತಾಗುವುದೇ ಬೌಲರ್ಗಳು, ಇದರಿಂದ ಬೌಲರ್ಗಳ ಸುರಕ್ಷತೆ ಬಗ್ಗೆ ಐಸಿಸಿ ಹೆಚ್ಚು ನಿಗಾವಹಿಸಿದೆ. ಟೆಸ್ಟ್ ಮಾದರಿಯಲ್ಲೆ ಬೌಲರ್ಗಳಿಗೆ ಟಿ20 ಕ್ರಿಕೆಟ್ ಸಿದ್ಧತೆಗೆ 5 ರಿಂದ 6 ವಾರ ಹಾಗೂ ಏಕದಿನ ಕ್ರಿಕೆಟ್ ಸಿದ್ಧತೆಗೆ 6 ವಾರ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: ಸೋಮವಾರದಿಂದ ದೇಶೀಯ ವಿಮಾನಯಾನ ಆರಂಭವಾಗುವುದು ಅನುಮಾನ
ಸುರಕ್ಷತಾ ಕ್ರಮಗಳಿಗೆ ಸೂಚನೆ: ಕ್ರಿಕೆಟ್ ಚಟುವಟಿಕೆಗಳು ಪುನರಾರಂಭಗೊಂಡರೆ ಸ್ಥಳೀಯ ಸರ್ಕಾರ ಗಳು ರೂಪಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಐಸಿಸಿ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿದೆ. ಜತೆಗೆ ಅಭ್ಯಾಸಕ್ಕಾಗಿ ಕ್ರಿಕೆಟಿಗರಿಗೆ ಸುರಕ್ಷಿತ ಸ್ಥಳ ನೀಡಬೇಕು. ಆಟಗಾರರು ಪರಸ್ಪರ ಅಂತರ ಕಾಯ್ದುಕೊಂಡು ಅಭ್ಯಾಸ ಮಾಡಬೇಕು. ಹೆಚ್ಚಾಗಿ ವೈಯಕ್ತಿಕವಾಗಿ ವಸ್ತುಗಳನ್ನೇ ಬಳಸಬೇಕು ಎಂದು ಐಸಿಸಿ ತಿಳಿಸಿದೆ.
ಅಭ್ಯಾಸದ ವೇಳೆ ಮೂತ್ರಕ್ಕೂ ಹೋಗುವಂತಿಲ್ಲ ! ಆಟಗಾರರು ಅಭ್ಯಾಸದ ವೇಳೆ ಮೂತ್ರವಿಸರ್ಜನೆಗೂ ತೆರಳುವಂತಿಲ್ಲ. ಜತೆಗೆ ಕ್ಯಾಪ್ ಅಥವಾ ಸನ್ಗ್ಲಾಸ್ಗಳನ್ನು ಮೈದಾನದ ಅಂಪೈರ್ಗೆ ನೀಡುವಂತಿಲ್ಲ. ಮೈದಾನದಲ್ಲಿದ್ದಾಗ ಆಟಗಾರರು ಹಾಗೂ ಅಂಪೈರ್ಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಆಟಗಾರರು ಪರಸ್ಪರ ಕೈಕುಲುಕುವಂತಿಲ್ಲ. ಆದರೆ, ಆಟಗಾರರ ಪರಿಕರಗಳನ್ನು ಯಾರು ಇಟ್ಟುಕೊಳ್ಳಬೇಕು ಎಂಬುದು ಮಾತ್ರ ತೀರ್ವನವಾಗಿಲ್ಲ.
ಪ್ರಮುಖ ಮಾರ್ಗಸೂಚಿಗಳು..
* ತಂಡಗಳ ಮೇಲೆ ನಿಗಾವಹಿಸಲು ವೈದ್ಯಾಧಿಕಾರಿಗಳ ನೇಮಕ
* ಸರಣಿ ಆರಂಭಕ್ಕೂ ಮುನ್ನ 14ದಿನ ಐಸೋಲೇಷನ್ ಶಿಬಿರ
* ಓವರ್ ಮಾಡುವಾಗ ಅಂಪೈರ್ಗಳಿಗೆ ಕ್ಯಾಪ್, ಟವಲ್ ನೀಡುವಂತಿಲ್ಲ
* ಮೈದಾನದ ಅಂಪೈರ್ಗಳು ಕೈಗಳಿಗೆ ಗ್ಲೌಸ್ ಧರಿಸಬೇಕು
* ಸುರಕ್ಷಿತ ಸ್ಥಳದಲ್ಲಿ ಅಭ್ಯಾಸಕ್ಕೆ ಸೂಚನೆ
* ಅಭ್ಯಾಸದ ವೇಳೆ ಆಟಗಾರರ ನಡುವೆ 1.5 ಮೀಟರ್ ಅಂತರವಿರಬೇಕು