ಕ್ರೀಡೆ

ಇಂದು ಬರೋಡ-ತಮಿಳುನಾಡು ನಡುವೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಫೈಟ್

ಅಹಮದಾಬಾದ್: ಹಾಲಿ ರನ್ನರ್‌ಅಪ್ ತಮಿಳುನಾಡು ಹಾಗೂ ಬರೋಡ ತಂಡಗಳು ಭಾನುವಾರ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಮುಖಾಮುಖಿಯಾಗಲಿವೆ. ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಲು ಉಭಯ ತಂಡಗಳು ಉತ್ಸುಕವಾಗಿವೆ. ಟೂರ್ನಿಯಲ್ಲಿ ಇದುವರೆಗೆ ಅಜೇಯ ಸಾಧನೆ ಮಾಡಿರುವ ಉಭಯ ತಂಡಗಳ ಕಾಳಗ ರೋಚಕತೆ ಹುಟ್ಟಿಸಿದೆ. ಕಳೆದ ಬಾರಿ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ ಒಂದು ರನ್‌ನಿಂದ ಸೋತು ಪ್ರಶಸ್ತಿ ಕೈಚೆಲ್ಲಿದ್ದ ತಮಿಳುನಾಡಿಗೆ ಈ ಬಾರಿಗೆ ಪ್ರಶಸ್ತಿ ಬರ ನೀಗಿಸುವ ಅವಕಾಶ ಲಭಿಸಿದೆ. 2006-07ರಲ್ಲಿ ಆರಂಭಗೊಂಡ ಟೂರ್ನಿಯ ಮೊದಲ ವರ್ಷವೇ ಪ್ರಶಸ್ತಿ ಗೆದ್ದಿದ್ದ ತಮಿಳುನಾಡು, 15 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆಗುವ ಹಂಬಲದಲ್ಲಿದೆ. ಎರಡೂ ಬಾರಿಯ ಚಾಂಪಿಯನ್ ಬರೋಡ 2014-15ರಲ್ಲಿ ಕಡೇ ಬಾರಿಗೆ ಪ್ರಶಸ್ತಿ ಗೆದ್ದಿತ್ತು.

ಪುಟಿದೆದ್ದ ಬರೋಡ: ಟೂರ್ನಿ ಆರಂಭಕ್ಕೂ ಮುನ್ನ ಹಿರಿಯ ಆಟಗಾರರಾದ ಕೃನಾಲ್ ಪಾಂಡ್ಯ ಹಾಗೂ ದೀಪಕ್ ಹೂಡಾ ನಡುವಿನ ಕಿತ್ತಾಟದಿಂದ ವಿವಾದಕ್ಕೀಡಾಗಿದ್ದ ಬರೋಡ, ಮೈದಾನದಲ್ಲಿ ಭರ್ಜರಿ ನಿರ್ವಹಣೆ ತೋರುತ್ತಾ ಗಮನ ಸೆಳೆದಿದೆ. ಅದರಲ್ಲೂ ಲೀಗ್ ಹಂತದಲ್ಲಿ ನಾಯಕ ಕೃನಾಲ್ ಪಾಂಡ್ಯ ತಂದೆ ನಿಧನರಾದ ಹಿನ್ನೆಲೆಯಲ್ಲಿ ತಂಡವನ್ನು ಅರ್ಧಕ್ಕೆ ತೊರೆದಿದ್ದರು. ಹಂಗಾಮಿ ನಾಯಕ ಕೇದಾರ್ ದೇವಧರ್ ಸಾರಥ್ಯದಲ್ಲಿ ಬಲಿಷ್ಠ ನಿರ್ವಹಣೆ ತೋರುತ್ತಾ ಬಂದಿರುವ ಬರೋಡ ತಂಡ, 3ನೇ ಬಾರಿಗೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ವಿಷ್ಣು ಸೋಲಂಕಿ, ಕೇದಾರ್ ದೇವಧರ್, ಕಾರ್ತಿಕ್ ಕಾಕಡೆಯಂಥ ಅನುಭವಿ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಧಾರವಾಗುತ್ತಿದ್ದರೆ, ಲುಕ್ಮಾನ್ ಮೆರಿವಾಲಾ, ಅತಿತ್ ಸೇಥ್, ನಿನಾದ್ ರಥ್ವ ಒಳಗೊಂಡ ಬೌಲಿಂಗ್ ಪಡೆಯೂ ಸಮರ್ಥವಾಗಿದೆ.

ಆತ್ಮವಿಶ್ವಾಸದಲ್ಲಿ ಕಾರ್ತಿಕ್ ಪಡೆ: ತಮಿಳುನಾಡು ತಂಡ ಕಳೆದ ಬಾರಿ ಕೈತಪ್ಪಿದ್ದ ಪ್ರಶಸ್ತಿಯನ್ನು ಈ ಬಾರಿ ಒಲಿಸಿಕೊಳ್ಳುವ ಛಲದಲ್ಲಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಶಾರೂಕ್ ಖಾನ್, ಬಾಬಾ ಅಪರಾಜಿತ್, ಅನುಭವಿ ಕೆಬಿ ಅರುಣ್ ಕಾರ್ತಿಕ್, ಎನ್.ಜಗದೀಶನ್, ಹರಿ ನಿಶಾಂತ್, ನಾಯಕ ದಿನೇಶ್ ಕಾರ್ತಿಕ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಬೌಲಿಂಗ್ ವಿಭಾಗದಲ್ಲಿ ಸಾಯಿ ಕಿಶೋರ್, ಎಂ.ಅಶ್ವಿನ್, ಮೊಹಮದ್, ಸೋನು ಯಾದವ್ ನಿರೀಕ್ಷಿತ ನಿರ್ವಹಣೆ ತೋರುತ್ತಾ ಬಂದಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1