ಮುಂಬೈ: ಜಿದ್ದಾಜಿದ್ದಿನ ಹಣಾಹಣಿಯಲ್ಲಿ ರೋಚಕ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-14ರ ತನ್ನ 2ನೇ ಪಂದ್ಯದಲ್ಲಿ ಶುಕ್ರವಾರ, ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಸವಾಲಿಗೆ ಸಜ್ಜಾಗಿದೆ. ಮೊದಲ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶರಣಾಗಿದ್ದ ಸಿಎಸ್‌ಕೆ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ವೇದಿಕೆಯಾಗುತ್ತಿರುವ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಪ್ರಮುಖ ಪಾತ್ರವಹಿಸಲಿದೆ. ಟಾಸ್ ಜಯಿಸಿದ ನಾಯಕ 2ನೇ ಆಯ್ಕೆ ಇಲ್ಲದೆ ಫೀಲ್ಡಿಂಗ್ ಆಯ್ಕೆ ಮಾಡಲಿದ್ದಾರೆ.
*ಸಿಎಸ್‌ಕೆಗೆ ಬೌಲಿಂಗ್ ವಿಭಾಗದ್ದೇ ಚಿಂತೆ
ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಹೋರಾಟ ನೀಡಿದರೂ ಬೌಲಿಂಗ್ ವಿಭಾಗವೇ ಸಿಎಸ್‌ಕೆ ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ಡೆಲ್ಲಿ ತಂಡದ ಶಿಖರ್ ಧವನ್ ಹಾಗೂ ಪೃಥ್ವಿ ಷಾ ಜೋಡಿ ಮೊದಲ ವಿಕೆಟ್‌ಗೆ 138 ಪೇರಿಸುವ ಮೂಲಕ ಸಿಎಸ್‌ಕೆ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಥಳಿಸಿತ್ತು. ದೀಪಕ್ ಚಹರ್, ಸ್ಯಾಮ್ ಕರ‌್ರನ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ಹಾಗೂ ಮೊಯಿನ್ ಅಲಿ ಒಳಗೊಂಡ ಬೌಲಿಂಗ್ ಪಡೆ ಡೆಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹೇರಲು ವಿಫಲವಾಗಿತ್ತು. ಸುರೇಶ್ ರೈನಾ ಆಗಮನದಿಂದಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬಲ ಹೆಚ್ಚಿಸಿಕೊಂಡಿದೆ. ಆರಂಭಿಕರಾದ ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್ ಲಯ ಕಂಡುಕೊಳ್ಳಬೇಕಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಧೋನಿಯೂ ಸ್ಫೋಟಿಸಬೇಕಿದೆ.
*ಪಂಜಾಬ್‌ಗೆ ಲಯ ಕಾಯ್ದುಕೊಳ್ಳುವ ತವಕ
ಕಡೇ ಕ್ಷಣದಲ್ಲಿ ರಾಜಸ್ಥಾನ ತಂಡದ ವಿರುದ್ಧ ಮೇಲುಗೈ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ಪಂಜಾಬ್ ತಂಡ ಮತ್ತೊಂದು ಗೆಲುವಿನ ಕನಸಿನಲ್ಲಿದೆ. ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಎರಡು ಜೀವದಾನ ನೀಡಿದ್ದೇ ತಂಡದ ಪಾಲಿಗೆ ಬಹುತೇಕ ದುಬಾರಿಯಾಗಿತ್ತು. ನಾಯಕ ರಾಹುಲ್, ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ದೀಪಕ್ ಹೂಡಾ ಉತ್ತಮ ಫಾರ್ಮ್‌ನಲ್ಲಿದ್ದರೆ, ಕರ್ನಾಟಕದ ಮತ್ತೋರ್ವ ಆಟಗಾರ ಮಯಾಂಕ್ ಅಗರ್ವಾಲ್ ಲಯ ಕಂಡುಕೊಳ್ಳಬೇಕಿದೆ. ಉಳಿದಂತೆ ಬೌಲಿಂಗ್‌ನಲ್ಲಿ ಅರ್ಷದೀಪ್ ಹಾಗೂ ಮೊಹಮದ್ ಶಮಿ ಉತ್ತಮ ಫಾರ್ಮ್‌ನಲ್ಲಿದ್ದರೆ, ವಿದೇಶಿಗರಾದ ಜೇ ರಿಚರ್ಡ್‌ಸನ್, ಮೆರಿಡಿತ್ ದುಬಾರಿಯಾಗಿದ್ದರು.
ಚೆನ್ನೈ ಸೂಪರ್‌ಕಿಂಗ್ಸ್: ಅನುಭವಿ ಪಡೆಯನ್ನೇ ಹೊಂದಿರುವ ಸಿಎಸ್‌ಕೆ ತಂಡ ಮತ್ತೊಮ್ಮೆ ಹಿಂದಿನ 11ರ ಬಳಗವನ್ನೇ ಉಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಕನ್ನಡಿಗ ರಾಹುಲ್ ಉತ್ತಪ್ಪ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದರೆ ಋತುರಾಜ್ ಗಾಯಕ್ವಾಡ್ ಹೊರಗುಳಿಯಲಿದ್ದಾರೆ. ವಿದೇಶಿ ವೇಗಿಗಳಾದ ಜೇಸನ್ ಬೆಹ್ರೆನ್‌ಡಾರ್ಫ್ ಹಾಗೂ ಲುಂಗಿ ಎನ್‌ಗಿಡಿ ಇಬ್ಬರೂ ಕ್ವಾರಂಟೈನ್‌ನಲ್ಲಿದ್ದು, ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ಎದುರು 7 ವಿಕೆಟ್ ಸೋಲು.
ಪಂಜಾಬ್ ಕಿಂಗ್ಸ್: ರಾಜಸ್ಥಾನ ಎದುರು ರೋಚಕ ಜಯ ದಾಖಲಿಸಿರುವ ಪಂಜಾಬ್ ತಂಡದಲ್ಲಿ ಬದಲಾವಣೆ ನಿರೀಕ್ಷೆ ಕಡಿಮೆ ಇದೆ. ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಮತ್ತೊಮ್ಮೆ ಕಣಕ್ಕಿಳಿಸಲಿದೆ. ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಮೆರಿಡಿತ್ ಅಥವಾ ರಿಚರ್ಡ್‌ಸನ್ ಬದಲಿಗೆ ಕ್ರಿಸ್ ಜೋರ್ಡನ್ ಕಣಕ್ಕಿಳಿಯಬಹುದು.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ವಿರುದ್ಧ 4 ರನ್‌ಗಳಿಂದ ಜಯ.
ಮುಖಾಮುಖಿ: 23, ಸಿಎಸ್‌ಕೆ:14, ಪಂಜಾಬ್: 9
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಆರಂಭ: ರಾತ್ರಿ 7.30ಕ್ಕೆ