ಶಾರ್ಜಾ: ಗೆಲುವಿನ ನಾಗಾಲೋಟದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸತತ ಸೋಲಿನ ಬಳಿಕ ಕೊನೆಗೂ ಗೆಲುವಿನ ಹಾದಿಗೆ ಮರಳಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಐಪಿಎಲ್-13ರಲ್ಲಿ ಶನಿವಾರದ 2ನೇ ಪಂದ್ಯದಲ್ಲಿ ಕಾದಾಡಲಿವೆ.
ಟೂರ್ನಿ ಇತಿಹಾಸ ಗಮನಿಸಿದಾಗ ಸಿಎಸ್‌ಕೆ ತಂಡ ಪ್ರಾಬಲ್ಯ ಸಾಧಿಸಿದ್ದರೂ, ಹಾಲಿ ಾರ್ಮ್‌ನಲ್ಲಿ ಡೆಲ್ಲಿ ತಂಡವೇ ಫೇವರಿಟ್ ಎನಿಸಿದೆ. ಅಂಕಪಟ್ಟಿಯಲ್ಲೂ ಡೆಲ್ಲಿ ತಂಡ ಪ್ರಬಲ ಸ್ಥಾನದಲ್ಲಿದ್ದರೆ, ಸಿಎಸ್‌ಕೆ ತಂಡ ಇನ್ನೊಂದು ಪಂದ್ಯ ಸೋತರೂ, ಅಪಾಯದಲ್ಲಿ ಸಿಲುಕುವ ಒತ್ತಡದಲ್ಲಿದೆ. ಕಳೆದ ತಿಂಗಳು ದುಬೈನಲ್ಲಿ ನಡೆದ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ತಂಡ 44 ರನ್‌ಗಳಿಂದ ಸುಲಭ ಗೆಲುವು ದಾಖಲಿಸಿತ್ತು.
ಸನ್‌ರೈಸರ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿಯ ಕಾರ್ಯತಂತ್ರಗಳು ಬಹುತೇಕ ಕೈಗೂಡಿದ್ದವು. ಆಲ್ರೌಂಡರ್ ಸ್ಯಾಮ್ ಕರ‌್ರನ್ ಅವರನ್ನು ಆರಂಭಿಕರನ್ನಾಗಿ ಆಡಿಸಿದ್ದು ಇದರಲ್ಲೊಂದು. 7 ಬೌಲರ್‌ಗಳನ್ನು ಬಳಸಿದ ಧೋನಿ ನಡೆ ವಿಚಿತ್ರವಾಗಿ ಕಂಡಿತ್ತು. ಸ್ಪಿನ್ನರ್ ಪೀಯುಷ್ ಚಾವ್ಲಾಗೆ ಕೇವಲ 1 ಓವರ್ ನೀಡಿದ್ದರೂ, ರವೀಂದ್ರ ಜಡೇಜಾ-ಕರ್ಣ್ ಶರ್ಮರಿಂದ ಎದುರಾಳಿಗೆ ಕಡಿವಾಣ ಹಾಕಿಸುವಲ್ಲಿ ಸಲರಾಗಿದ್ದರು.
ಶಾರ್ಜಾ ಪಿಚ್‌ನಲ್ಲಿ ಮೊದಲಿಗೆ ರನ್‌ಪ್ರವಾಹ ಹರಿದಿದ್ದರೆ, ಈಗ ಪಿಚ್ ನಿಧಾನಗತಿದ್ದಾಗಿರುವುದರಿಂದ ಸ್ಪಿನ್ನರ್‌ಗಳು ಹೆಚ್ಚಿನ ಯಶ ಕಾಣುತ್ತಿದ್ದಾರೆ. ಉಭಯ ತಂಡಗಳಲ್ಲಿ ಅನುಭವಿ ಸ್ಪಿನ್ನರ್‌ಗಳಿದ್ದು, ಕಾದಾಟ ಕುತೂಹಲ ಕೆರಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್: ಪದಾರ್ಪಣೆಯ ಪಂದ್ಯದಲ್ಲಿ ಗಮನಸೆಳೆದ ವೇಗಿ ತುಷಾರ್ ದೇಶಪಾಂಡೆ ಮತ್ತೊಮ್ಮೆ ಅವಕಾಶ ಪಡೆಯಬಹುದು. ನಾಯಕ ಶ್ರೇಯಸ್ ಅಯ್ಯರ್ ಕಳೆದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದು, ಅವರು ಆಡುವ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ವೇಳೆ ಶ್ರೇಯಸ್ ಹೊರಗುಳಿದರೆ, ಶಿಖರ್ ಧವನ್ ಮತ್ತೊಮ್ಮೆ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸಬಹುದು.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ವಿರುದ್ಧ 13 ರನ್ ಜಯ.
ಸಂಭಾವ್ಯ ತಂಡ: ಶಿಖರ್ ಧವನ್, ಪೃಥ್ವಿ ಷಾ, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ (ವಿ.ಕೀ), ಅಕ್ಷರ್ ಪಟೇಲ್, ಆರ್. ಅಶ್ವಿನ್, ಆನ್ರಿಚ್ ನೋರ್ಜೆ, ತುಷಾರ್ ದೇಶಪಾಂಡೆ, ಕಗಿಸೊ ರಬಾಡ.
ಚೆನ್ನೈ ಸೂಪರ್‌ಕಿಂಗ್ಸ್: ಶಾರ್ಜಾ ಪಿಚ್ ನಿಧಾನಗತಿಯದ್ದಾಗುತ್ತಿದೆ. ಹೀಗಾಗಿ ಧೋನಿ ಮತ್ತೆ ಮೂವರು ಸ್ಪಿನ್ನರ್‌ಗಳೊಂದಿಗೆ (ಜಡೇಜಾ, ಕರ್ಣ್, ಪೀಯುಷ್) ಕಣಕ್ಕಿಳಿಯುವ ನಿರೀಕ್ಷೆ ಇದೆ. ಸ್ಯಾಮ್ ಕರ‌್ರನ್ ಕೂಡ ಮತ್ತೊಮ್ಮೆ ಆರಂಭಿಕರಾಗಿ ಆಡಬಹುದು.
ಕಳೆದ ಪಂದ್ಯ: ಸನ್‌ರೈಸರ್ಸ್ ವಿರುದ್ಧ 20 ರನ್ ಗೆಲುವು.
ಸಂಭಾವ್ಯ ತಂಡ: ಫಾಫ್ ಡು ಪ್ಲೆಸಿಸ್, ಸ್ಯಾಮ್ ಕರ‌್ರನ್, ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಎಂಎಸ್ ಧೋನಿ (ವಿ.ಕೀ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಪೀಯುಷ್ ಚಾವ್ಲಾ, ಕರ್ಣ್ ಶರ್ಮ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 22
ಡೆಲ್ಲಿ: 7
ಸಿಎಸ್‌ಕೆ: 15